ಮೋದಿ ಅಲೆ ನಿರೀಕ್ಷೆ ಮೈತ್ರಿ ಬಲದ ಪರೀಕ್ಷೆ

| ವಿಲಾಸ ಮೇಲಗಿರಿ, ಬೆಂಗಳೂರು

ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ರಣಕಣದಲ್ಲಿದ್ದ ಕಲಿಗಳೇ ಈ ಬಾರಿಯೂ ಪರಸ್ಪರ ಎದುರಾಳಿಗಳು. ಹ್ಯಾಟ್ರಿಕ್ ಹೀರೋ ಆಗಬೇಕೆಂಬ ಕನಸು ಕಾಣುತ್ತಿರುವ ಬಿಜೆಪಿಯ ಪಿ.ಸಿ.ಮೋಹನ್​ಗೆ ಕಳೆದ ಬಾರಿ ಪರಾಭವಗೊಂಡಿದ್ದ ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ಈ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮುಖಾಮುಖಿ ಆಗಿದ್ದಾರೆ. ಇಲ್ಲಿ ಇನ್ನೊಂದು ಹೊಸಮುಖ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ನಟ ಪ್ರಕಾಶ್ ರಾಜ್.

ಜತೆಗೆ ಈ ಕ್ಷೇತ್ರದಲ್ಲಿ ಡಾ.ಎಂ.ಕೆ.ಪಾಷಾ (ಬಹುಜನ ಸಮಾಜ ಪಾರ್ಟಿ), ಶ್ರೀದೇವಿ ಮೆಳ್ಳಿಗಟ್ಟಿ (ಉತ್ತಮ ಪ್ರಜಾಕೀಯ ಪಕ್ಷ), ಆರ್.ಶ್ರೀನಿವಾಸನ್ (ಇಂಡಿಯನ್ ಕ್ರಿಶ್ಚಿಯನ್ ಫ್ರಂಟ್), ಸಿ.ಜೆ.ಆದಿತ್ಯ (ಭಾರತೀಯ ಪ್ರಜೆಗಳ ಪಕ್ಷ) ಒಳಗೊಂಡಂತೆ ವಿವಿಧ ರಾಜಕೀಯ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿ ಕಣದಲ್ಲಿದ್ದರೂ ಚುನಾವಣೆಗೆ ಪೂರಕವಾಗಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ.

2014ರ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ನಂದಿನಿ ಆಳ್ವ ಕೇವಲ 20,387 ಮತಗಳನ್ನು ಪಡೆದಿದ್ದರು. ಆದರೆ, 2009ರ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಜಮೀರ್ ಅಹಮ್ಮದ್ 1,62,552 ಮತಗಳನ್ನು ಗಳಿಸಿದ್ದರು. ಈಗ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಮತ್ತು ಜೆಡಿಎಸ್​ನಲ್ಲಿದ್ದ ಜಮೀರ್ ಅಹಮ್ಮದ್ ಈಗ ಕಾಂಗ್ರೆಸ್ ಶಾಸಕರಾಗಿ, ಸಚಿವರಾಗಿರುವುದರಿಂದ ಮೈತ್ರಿ ಅಭ್ಯರ್ಥಿಗೆ ಆನೆ ಬಲ ಬಂದಂತಾಗಿದೆ.

ಸಬ್ ಅರ್ಬನ್ ರೈಲು ಯೋಜನೆ ಮಂಜೂರಾತಿಗೆ ಲೋಕಸಭೆ ಒಳಗೆ-ಹೊರಗೆ ಹೋರಾಡಿದ್ದೇನೆ. ಈ ಯೋಜನೆ ಐದು ವರ್ಷದಲ್ಲಿ ಪೂರ್ಣಗೊಂಡು ಬೆಂಗಳೂರಿನ ಸಂಚಾರದ ಒತ್ತಡ ಶೇ.25ರಷ್ಟು ತಗ್ಗಲಿದೆ. ನನ್ನ ಅಭಿವೃದ್ಧಿ ಕಾರ್ಯಗಳ ಜತೆಗೆ ಮೋದಿ ಅವರ ಸಾಧನೆಗಳೂ ನನ್ನ ಗೆಲುವಿಗೆ ಸಹಕಾರಿ ಆಗಲಿವೆ. ಪ್ರಕಾಶ್ ರಾಜ್ ಸ್ಪರ್ಧೆಯಿಂದ ನನಗೆ ಅನುಕೂಲವೂ ಇಲ್ಲ, ಅನನುಕೂಲವೂ ಇಲ್ಲ.

|ಪಿ.ಸಿ.ಮೋಹನ್ ಬಿಜೆಪಿ ಅಭ್ಯರ್ಥಿ.

ಅರ್ಷದ್​ಗೆ ಆತಂಕ

ನಟ ಪ್ರಕಾಶ್ ರಾಜ್ ಕಣದಲ್ಲಿರುವುದು ರಿಜ್ವಾನ್ ಅರ್ಷದ್​ಗೆ ಆತಂಕ ತಂದಿಟ್ಟಿದೆ. ಪ್ರಜ್ಞಾವಂತ ವಲಯ ಹಾಗೂ ತಮಿಳು ಮಾತನಾಡುವ ಕ್ರಿಶ್ಚಿಯನ್ನರಲ್ಲಿ ಪ್ರಕಾಶ್ ರಾಜ್ ಹೆಚ್ಚು ಜನಪ್ರಿಯ ವ್ಯಕ್ತಿ. ಜತೆಗೆ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇವರು ತಮ್ಮ ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತಬುಟ್ಟಿಗೆ ಕೈ ಹಾಕಬಹುದೆಂಬ ಭಯ ಕಾಂಗ್ರೆಸ್​ಗಿದೆ.

ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ. ಮೋದಿ ಏನು ಸಾಧನೆ ಮಾಡಿದ್ದಾರೆ ಎಂದು ಅಲೆ ಇರಲು ಸಾಧ್ಯ? ಬೆಂಗಳೂರು ನಗರಕ್ಕೆ ಮೋದಿ ಕೊಡುಗೆ ಏನೂ ಇಲ್ಲ. 10 ವರ್ಷದಲ್ಲಿ ಪಿ.ಸಿ.ಮೋಹನ್ ಏನು ಮಾಡಿದ್ದಾರೆ? ಇದನ್ನೆಲ್ಲ ಜನ ಅರ್ಥ ಮಾಡಿಕೊಂಡಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಈ ಬಾರಿ ಮತದಾರರ ಶ್ರೀರಕ್ಷೆ ನನ್ನ ಮೇಲಿದೆ.

| ರಿಜ್ವಾನ್ ಅರ್ಷದ್ ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ.

ಪ್ರಕಾಶ್ ರಾಜ್ ಪ್ರಯತ್ನ

ಕೇಂದ್ರ ಸರ್ಕಾರದ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿರುವ ನಟ ಪ್ರಕಾಶ್ ರಾಜ್ ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ‘ಥಿಂಕ್ ಮಾಡಿ, ವೋಟ್ ಮಾಡಿ’ ಘೋಷವಾಕ್ಯದೊಂದಿಗೆ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಆಮ್ ಆದ್ಮಿ ಪ್ರಕಾಶ್ ರಾಜ್ ಅವರನ್ನು ಬೆಂಬಲಿಸಿದೆ. ಕಳೆದ ಬಾರಿ ಅಮ್ ಆದ್ಮಿ ಅಭ್ಯರ್ಥಿ ವಿ.ಬಾಲಕೃಷ್ಣ ಈ ಕ್ಷೇತ್ರದಲ್ಲಿ 39,869 ಮತ ಗಳಿಸಿದ್ದರು.

ಕಾಂಗ್ರೆಸ್ ಶಾಸಕರ ಕಸರತ್ತು

ಕಾಂಗ್ರೆಸ್ ನಾಯಕರಾದ ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್, ಎನ್.ಹ್ಯಾರಿಸ್, ರೋಷನ್ ಬೇಗ್ ತಮಗೆ ಅಲ್ಪಸಂಖ್ಯಾತ ಮತಗಳನ್ನು ತಂದುಕೊಡುವ ನಿರೀಕ್ಷೆಯನ್ನು ರಿಜ್ವಾನ್ ಇಟ್ಟುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭೆ ಕ್ಷೇತ್ರ ಕೂಡ ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವುದರಿಂದ ಬಿಗ್ ಬೂಸ್ಟ್ ನಿರೀಕ್ಷೆಯನ್ನು ಮೈತ್ರಿ ಅಭ್ಯರ್ಥಿ ಹೊಂದಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಮತಗಳಿಕೆ ಹೆಚ್ಚಿದೆ. 1 ಲಕ್ಷಕ್ಕೂ ಹೆಚ್ಚು ಮತಗಳು ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಬಂದಿವೆ. ಇದು ಮೈತ್ರಿ ಅಭ್ಯರ್ಥಿಯ ಆತ್ಮವಿಶ್ವಾಸ ಇಮ್ಮಡಿಸಿದೆ. ವಿಶೇಷವೆಂದರೆ, ಈ ಕ್ಷೇತ್ರದಲ್ಲಿ ಮೈತ್ರಿಯಲ್ಲಿ ಮಹಾಬಿರುಕು ಕಾಣಿಸಿಲ್ಲ. ಇದು ರಿಜ್ವಾನ್ ಅರ್ಷದ್​ಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿರುವ ರಿಜ್ವಾನ್ ಅರ್ಷದ್ ವಿಧಾನಪರಿಷತ್ ಸದಸ್ಯರಾಗಿದ್ದು, ಮೈತ್ರಿ ಸರ್ಕಾರದ ಸಾಧನೆ ಇಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಕ್ರಿಶ್ಚಿಯನ್ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲವೆಂದು ಮಾಜಿ ಸಂಸದ ಸಾಂಗ್ಲಿಯಾನ ರಾಜೀನಾಮೆ, ಪಿ.ಸಿ.ಅಲೆಕ್ಸಾಂಡರ್ ಮುನಿಸು, ಆರ್ಚ್ ಬಿಷಪ್ ಅಸಮಾಧಾನ ಮೈತ್ರಿ ಅಭ್ಯರ್ಥಿಗೆ ಮುಳುವಾಗಿ ಪರಿಣಮಿಸಿವೆ. ರಾಜ್ಯದಲ್ಲಿ ಮುಸ್ಲಿಮರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲವೆಂದು ರೋಷನ್​ಬೇಗ್ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಕ್ರಿಶ್ಚಿಯನ್ನರಂತೆ ಮುಸ್ಲಿಮರಲ್ಲೂ ಅಸಮಾಧಾನ ಇದ್ದೇ ಇದೆ. ಇದು ಮೈತ್ರಿ ಅಭ್ಯರ್ಥಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.

ಪ್ರಧಾನಿ, ಶಾಸಕರ ಮೇಲೆ ವಿಶ್ವಾಸ

ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಮೋದಿ ಅಲೆ ಕೈ ಹಿಡಿಯಲಿದೆ ಎಂಬ ಅದಮ್ಯ ವಿಶ್ವಾಸದಲ್ಲಿದ್ದಾರೆ. ಬಹುಸಂಸ್ಕೃತಿಯ ಜನರಿರುವುದರಿಂದ ವಿಶೇಷವಾಗಿ ವಲಸಿಗರು ಪ್ರಧಾನಿ ಅಭ್ಯರ್ಥಿಯ ವರ್ಚಸ್ಸು ನೋಡುತ್ತಾರೆ. ಹಾಗಾಗಿ ತಮಗೆ ವಲಸಿಗರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಮಹಾದೇವಪುರ ಕ್ಷೇತ್ರದ ಅರವಿಂದ ಲಿಂಬಾವಳಿ, ರಾಜಾಜಿನಗರದ ಸುರೇಶ್​ಕುಮಾರ್ ಮತ್ತು ಸಿ.ವಿ.ರಾಮನ್ ನಗರ ಕ್ಷೇತ್ರದ ಎಸ್. ರಘು ತಮ್ಮ ಬೆನ್ನಿಗಿದ್ದಾರೆಂಬ ವಿಶ್ವಾಸವೂ ಮೋಹನ್ ಅವರಲ್ಲಿದೆ. ಕಳೆದ ಬಾರಿ ಮೋದಿ ಅಲೆ ಮೋಹನ್​ಗೆ ಹೆಚ್ಚು ಲಾಭ ತಂದುಕೊಟ್ಟಿತ್ತು.

ಈ ಬಾರಿಯೂ ಅದೇ ಅಲೆಯಲ್ಲಿ ತೇಲುವ ವಿಶ್ವಾಸದಲ್ಲಿದ್ದಾರೆ. ಸರಳ-ಸಜ್ಜನಿಕೆಯ ವ್ಯಕ್ತಿತ್ವದ ಮೋಹನ್ ನಗರದ ಸಬ್ ಅರ್ಬನ್ ರೈಲು ಯೋಜನೆಗೆ ಹೆಚ್ಚು ಶ್ರಮಿಸಿದ್ದಾರೆ. ನಮ್ಮ ಮೆಟ್ರೋ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದಲೇ ಹೂಡಿಯಲ್ಲಿ ರೈಲ್ವೆ ನಿಲ್ದಾಣ ನಿರ್ವಿುಸಿದ್ದು, ಇದು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಸ್ಥಾಪಿಸಿರುವ ದೇಶದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಇನ್ನಷ್ಟು ಯೋಜನೆಗಳನ್ನು ತಂದು ಸಂಚಾರ ದಟ್ಟಣೆಗೆ ಪರಿಹಾರ ಕಂಡುಹಿಡಿಯಹುದಿತ್ತು ಎನ್ನುತ್ತಿದ್ದಾರೆ ಮತದಾರರು.