ಮೋದಿ ಸರ್ಕಾರ ಬೆಂಗಳೂರಿಗೆ ಬಲ: ಮೋಹನ್​ಗೆ ಪುನರಾಯ್ಕೆ ವಿಶ್ವಾಸ

ಕಾಸ್ಮೋಪಾಲಿಟನ್ ನಗರ ಎಂಬ ಖ್ಯಾತಿಯ ಬೆಂಗಳೂರಿನಲ್ಲಿರುವ ಅಸಲಿ ಕಾಸ್ಮೋಪಾಲಿಟನ್ ಕ್ಷೇತ್ರ ಎನ್ನಿಸಿರುವ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆದಿದೆ. 2 ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಪಿ.ಸಿ. ಮೋಹನ್ ಹ್ಯಾಟ್ರಿಕ್ ಬಾರಿಸಲು ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಸಾಧನೆ, ಭವಿಷ್ಯದ ಯೋಜನೆಗಳನ್ನು ವಿಜಯವಾಣಿ ಪ್ರತಿನಿಧಿ ರಮೇಶ ದೊಡ್ಡಪುರ ಜತೆ ಹಂಚಿಕೊಂಡಿದ್ದಾರೆ.

# ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಕೈಗೊಂಡ ಕ್ರಮ ಹಾಗೂ ಭವಿಷ್ಯದ ಯೋಜನೆ ಏನು?

ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಲೋಕಸಭೆ ಹೊರಗೆ ಹಾಗೂ ಒಳಗೆ 7-8 ವರ್ಷ ಹೋರಾಟ ನಡೆಸಿದ್ದೇನೆ. ಕಳೆದ ವರ್ಷ ಇದರ ಫಲವಾಗಿ ಸಬರ್ಬನ್ ಯೋಜನೆಗೆ ಕೇಂದ್ರ ಸರ್ಕಾರರ ಬಜೆಟ್​ನಲ್ಲಿ 17 ಸಾವಿರ ಕೋಟಿ ರೂ. ನಿಗದಿಪಡಿಸಲು ಯಶಸ್ವಿಯಾಗಿದ್ದೇನೆ. ರೈಟ್ಸ್ ವರದಿ ಪ್ರಕಾರ ಸಬರ್ಬನ್ ಜಾರಿಯಿಂದ ಶೇ.25 ರಸ್ತೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಮುಂದಿನ 5 ವರ್ಷದಲ್ಲಿ ಈ ಹಣ ವಿನಿಯೋಗಿಸಿ ಸಬರ್ಬನ್ ರೈಲು ಕಾರ್ಯರೂಪಕ್ಕೆ ತರುವುದೇ ನನ್ನ ಗುರಿ.

# ಬೆಂಗಳೂರಿನಿಂದ ಹೊರಗೆ ಕೈಗಾರಿಕೆ ಸ್ಥಾಪಿಸುವ ಸರ್ಕಾರಗಳ ನೀತಿ ಜಾರಿಯೇ ಆಗುತ್ತಿಲ್ಲವಲ್ಲ?

ಕಳೆದ ಆರು ವರ್ಷದಲ್ಲಿ ಐದು ವರ್ಷ ಕಾಂಗ್ರೆಸ್ ಸರ್ಕಾರ, ಈಗ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಬೇರೆ ನಗರಗಳಲ್ಲಿ ಮೂಲಸೌಕರ್ಯ ಕಲ್ಪಿಸಿದರೆ ಉದ್ಯಮಗಳು ಸ್ಥಾಪನೆಯಾಗಿ ಅಲ್ಲಿನ ಜನರು ಬೆಂಗಳೂರಿನತ್ತ ಆಗಮಿಸುವುದು ಕಡಿಮೆಯಾಘುತ್ತದೆ. ಈ ಸರ್ಕಾರ ಅದನ್ನು ಮಾಡುತ್ತಿಲ್ಲ. 1 ಕಿ.ಮೀ.ಗೆ 35 ಲಕ್ಷ ರೂ.ನಲ್ಲಿ ಆಗುತ್ತಿದ್ದ ರಸ್ತೆಗೆ 11 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಿಸಿ ಕಂಟ್ರಾಕ್ಟರ್​ಗಳ ಹಿತಾಸಕ್ತಿ ಕಾಯುವುದೇ ಇವರ ಕೆಲಸವಾಗಿದೆ.

# ಸಂಸದ ಆದರ್ಶ ಗ್ರಾಮ ಯೋಜನೆಯಲ್ಲಿ ಆಯ್ಕೆ ಮಾಡಿಕೊಂಡ ಗ್ರಾಮದ ಅಭಿವೃದ್ಧಿ ಹೇಗಿದೆ?

ಯರಪ್ಪನಹಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಕುಡಿಯುವ ನೀರಿಗೆ ಓವರ್​ಹೆಡ್ ಟ್ಯಾಂಕ್, ರಂಗಮಂದಿರ, ಶೌಚಗೃಹ, ಶಾಲಾ ಕಾಂಪೌಂಡ್ ನಿರ್ವಿುಸಲಾಗಿದೆ. ಸಂಸದ ನಿಧಿಯಿಂದ 88 ಲಕ್ಷ ರೂ. ವೆಚ್ಚ ಮಾಡಿದ್ದೇನೆ. ಮೋದಿ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ಬೇಸರವಿದೆ.

# ಹೂಡಿ ರೈಲ್ವೆ ನಿಲ್ದಾಣ ಸ್ಥಾಪನೆ ಪರಿಕಲ್ಪನೆ ಬಂದಿದ್ದು ಹೇಗೆ? ಉಪಯೋಗವೇನು?

ಹೂಡಿ ಹಾಲ್ಟ್ ಸ್ಟೇಷನ್​ನಲ್ಲಿ ಮೂಲಸೌಕರ್ಯ ಇರಲಿಲ್ಲ. 2014ರ ಚುನಾವಣೆ ಸಮಯದಲ್ಲಿ ಟೆಕ್ಕಿಗಳು ಇದನ್ನು ಗಮನಕ್ಕೆ ತಂದಿದ್ದರು. 3 ಕೋಟಿ ರೂ. ಮೊತ್ತದ ಯೋಜನೆಯನ್ನು ಸಂಪೂರ್ಣವಾಗಿ ಸಂಸದರ ನಿಧಿಯಲ್ಲೇ ಪೂರ್ಣಗೊಳಿಸಿದ್ದೇನೆ. ಸಬರ್ಬನ್ ಯೋಜನೆಗೂ ಇದೇ ನಿಲ್ದಾಣ ಬಳಕೆಯಾಗುತ್ತದೆ.

# ಬೆಂಗಳೂರಿಗೆ ಬಿಜೆಪಿಯ ಪ್ರಮುಖ ಕೊಡುಗೆ ಏನು?

ಸಬಕ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ಮೋದಿ ಕನಸು. ರಾಜ್ಯಗಳಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಸಹಕಾರ ನೀಡುತ್ತಾರೆ. ಈ ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರಗಳಿದ್ದರೂ ಸಬರ್ಬನ್​ಗೆ ಅನುಮತಿ, ರಕ್ಷಣಾ ಭೂಮಿ ಹಸ್ತಾಂತರ ಆಗಿರಲಿಲ್ಲ. ಇದೆಲ್ಲ ಆಗಿದ್ದು ಮೋದಿ ಸರ್ಕಾರದ ಅವಧಿಯಲ್ಲಿ. ವಿಮಾನ ನಿಲ್ದಾಣಕ್ಕೆ ಎರಡನೇ ಪ್ರವೇಶ ಮಾಡಿಸಿದ್ದು, ಕೆರೆಗಳ ಅಭಿವೃದ್ಧಿಗೆ ಹಣ ನೀಡಿದ್ದು ಮೋದಿ ಸರ್ಕಾರ.

# ಮತ್ತೇಕೆ ಕಾಂಗ್ರೆಸ್ ಪಕ್ಷದ ನಾಯಕರು ಆರೋಪ ಮಾಡುತ್ತಿದ್ದಾರೆ?

ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಗೊತ್ತಿಲ್ಲ. ಚುನಾವಣೆ ಅವರು ಬಂದರೆ ಸ್ಟೀಲ್ ಬ್ರಿಡ್ಜ್, ವೈಟ್ ಟಾಪಿಂಗ್ ಎನ್ನುತ್ತಾರೆ.

# ಯುವ ಅಭ್ಯರ್ಥಿಗೆ ಮತ ನೀಡಿ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆಯಲ್ಲ?

ವಯಸ್ಸು ಮಾತ್ರ ನೊಡಿ ಜನ ಮತ ಹಾಕುವುದಿದ್ದರೆ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ 26 ವರ್ಷದ ಯುವಕರನ್ನೇ ಕಣಕ್ಕಿಳಿಸುತ್ತಿತ್ತು. ಹಾಗೆಂದು ನಾನೇನು ಸೀನಿಯರ್ ಸಿಟಿಜನ್ ಅಲ್ಲ, 55 ವರ್ಷ. ಯಾವುದೇ ಯುವಕರಿಗೆ ಕಡಿಮೆಯಿಲ್ಲದಂತೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದೇನೆ. ಯುವಕ ಯುವಕ ಎಂದು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗೆ ಕೇಳಲು ಬಯಸುತ್ತೇನೆ, 2014ರಲ್ಲಿ ಚುನಾವಣೆಯಲ್ಲಿ ಪರಾಭವಗೊಂಡಿರಿ. ಈಗ ಚುನಾವಣೆ ವೇಳೆ ಮತ್ತೆ ಬಂದಿದ್ದೀರಾ. ಮಧ್ಯದಲ್ಲಿ ಎಲ್ಲಿ ಹೋಗಿದ್ದಿರಿ? ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ ಎಂದು ಎಂಎಲ್​ಸಿ ಆದಿರಿ. ಇದೀಗ ಮತ್ತೆ ಬಂದಿದ್ದೀರ. ಈ ನಡುವೆ ನಿಮ್ಮ ಸರ್ಕಾರವಿತ್ತು. ಈ ಅವಧಿಯಲ್ಲಿ ಸರ್ಕಾರದಿಂದಾಗಲಿ, ಎಂಎಲ್​ಸಿ ನಿಧಿಯಿಂದಾಗಲಿ ಕ್ಷೇತ್ರಕ್ಕೆ ನೀವು ಮಾಡಿದ ಒಂದೇ ಕೆಲಸ ತೋರಿಸಿ ಎಂದು ಸವಾಲು ಹಾಕುತ್ತೇನೆ.

# ಜನರ ಜತೆ ನಿಮ್ಮ ಸಂಪರ್ಕ ಹೇಗಿದೆ?

ಕ್ಷೇತ್ರದ ಜನರೊಂದಿಗೆ ಅತ್ಯಂತ ಹೆಚ್ಚು ಸಂಪರ್ಕದಲ್ಲಿರುವ, ಅತಿ ಸುಲಭವಾಗಿ ಕೈಗೆಟುಕುವ ಸಂಸದ ಎಂದು ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರೇ ತಿಳಿಸುತ್ತಾರೆ. ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವ, ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂಬುದಕ್ಕೆ ಅವರಿಗೆ ಸಮಾಧಾನವಿದೆ. ಜಾತಿ, ಧರ್ಮದ ಭೇದವಿಲ್ಲದೆ ನನ್ನ ಕಚೇರಿಗೆ ಜನರು ಆಗಮಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಾತಾವರಣವಿದೆ.