ಬೆಂಗಳೂರು ರ್ಯಾಪ್ಟರ್ಸ್ ಚಾಂಪಿಯನ್

| ರಘುನಾಥ್ ಡಿ.ಪಿ. ಬೆಂಗಳೂರು

ತವರು ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ಭರ್ಜರಿ ನಿರ್ವಹಣೆ ನೀಡಿದ ಬೆಂಗಳೂರು ರ್ಯಾಪ್ಟರ್ಸ್ ತಂಡ 4ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿತು. ಕಿಕ್ಕಿರಿದು ತುಂಬಿದ್ದ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಕೆ. ಶ್ರೀಕಾಂತ್ ಸಾರಥ್ಯದ ಬೆಂಗಳೂರು ತಂಡ 4-3ರಿಂದ ಮುಂಬೈ ರಾಕೆಟ್ಸ್ ತಂಡವನ್ನು ಮಣಿಸಿತು. ಕಳೆದ ಬಾರಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬೆಂಗಳೂರು ತಂಡ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತು.

ಪ್ರಶಸ್ತಿ ಹೋರಾಟದ ನಿರ್ಣಾಯಕ ಪುರುಷರ ಡಬಲ್ಸ್ ವಿಭಾಗದಲ್ಲಿ ಇಂಡೋನೇಷ್ಯಾದ ವಿಶ್ವ ನಂ.9 ಜೋಡಿಯಾದ ಮೊಹಮದ್ ಅಶಾನ್-ಹೆಂಡ್ರ ಸೆತಿವಾನ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಶಾನ್-ಹೆಂಡ್ರ ಸೆತಿವಾನ್ ಜೋಡಿ 15-13, 15-10ರಿಂದ ಮುಂಬೈ ತಂಡದ ಜಂಗ್-ಡಾಯಿ ಜೋಡಿಗೆ ಸೋಲುಣಿಸಿ ರ್ಯಾಪ್ಟರ್ಸ್​ಗೆ ಪ್ರಶಸ್ತಿ ಸಂಭ್ರಮ ತಂದಿತು.

ಮುಂಬೈಗೆ ಆರಂಭಿಕ ಮುನ್ನಡೆ: ತವರು ಪ್ರೇಕ್ಷಕರ ಭರ್ಜರಿ ಬೆಂಬಲದ ನಡುವೆಯೂ ರ್ಯಾಪ್ಟರ್ಸ್ ತಂಡ ಆರಂಭಿಕ ಹಿನ್ನಡೆ ಕಂಡಿತು. ಮಿಶ್ರ ಡಬಲ್ಸ್ ವಿಭಾಗವನ್ನು ಟ್ರಂಪ್ ಘೊಷಣೆಯೊಂದಿಗೆ ಕಣಕ್ಕಿಳಿದ ಮುಂಬೈ ತಂಡದ ಪಿಯಾ ಬೆರ್ನಾದತ್-ಜಿ ಜಂಗ್ ಕಿಮ್ ಜೋಡಿ 15-8, 15-14ರಿಂದ ರ್ಯಾಪ್ಟರ್ಸ್ ತಂಡದ ಮಾರ್ಕಸ್ ಎಲ್ಲಿಸ್-ಲೌರೆನ್ ಸ್ಮಿತ್ ಜೋಡಿಗೆ ಸೋಲುಣಿಸಿತು. ಬಳಿಕ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಬೆಂಗಳೂರು ನಾಯಕ ವಿಶ್ವ ನಂ.8 ಶ್ರೀಕಾಂತ್ 15-7, 15-10ರಿಂದ ವಿಶ್ವ ನಂ.18 ಆಂಡರ್ಸ್ ಅಂಟಸೆನ್ ವಿರುದ್ಧ ಸುಲಭ ಜಯ ದಾಖಲಿಸಿದರು.

ಪ್ರಣೀತ್​ಗೆ ಶಾಕ್ ನೀಡಿದ ಸಮೀರ್

ಪುರುಷರ ಸಿಂಗಲ್ಸ್ ವಿಭಾಗದ 2ನೇ ಕಾದಾಟದಲ್ಲಿ ಬೆಂಗಳೂರು ತಂಡದ ಸ್ಟಾರ್ ಆಟಗಾರ ಸಾಯಿ ಪ್ರಣೀತ್ ಹಾಗೂ ಮುಂಬೈ ತಂಡದ ಸಮೀರ್ ವರ್ಮ ನಡುವಿನ ಕದನ ನಿರೀಕ್ಷೆಯಂತೆಯೇ ರೋಚಕತೆಗೆ ಸಾಕ್ಷಿಯಾಯಿತು. ವಿಶ್ವ ನಂ.22 ಪ್ರಣೀತ್ 15-7, 12-15, 3-15 ಗೇಮ್ಳಿಂದ ಸಮೀರ್ ವರ್ಮ ಎದುರು ಆಘಾತಕಾರಿ ಸೋಲನುಭವಿಸಿದರು. ಸಮೀರ್ ಗೆಲುವಿನಿಂದ ಪಂದ್ಯ 3-3 ರಿಂದ ಸಮಬಲ ಕಂಡಿತು. ಜತೆಗೆ ಲೀಗ್ ಹಂತದಲ್ಲಿ ಪ್ರಣೀತ್ ಎದುರು ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.

ಮುನ್ನಡೆ ತಂದುಕೊಟ್ಟ ವು ಥಿ ತ್ರಾಂಗ್

ಪಂದ್ಯದ 3ನೇ ಕಾದಾಟವಾದ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬೆಂಗಳೂರು ತಂಡದ ಪರ ಕಣಕ್ಕಿಳಿದ ವಿಶ್ವ ನಂ.59 ವು ಥಿ ತ್ರಾಂಗ್ ಜಯ ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬೆಂಗಳೂರು ತಂಡದ ಪರ ಟ್ರಂಪ್ ಪಂದ್ಯವಾಡಿದ ವಿಯೆಟ್ನಾಂ ಆಟಗಾರ್ತಿ ತ್ರಾಂಗ್ 15-8, 15-9 ನೇರ ಗೇಮ್ಳಿಂದ ವಿಶ್ವ ನಂ.202 ಶ್ರೇಯಾಂಶಿ ಪರ್ದೇಶಿ ಎದುರು ಸುಲಭ ಜಯ ದಾಖಲಿಸಿದರು. ಮುಂಬೈ ಆಟಗಾರ್ತಿಯ ಆಟದ ದೌರ್ಬಲ್ಯ ಅರಿತಿದ್ದ ತ್ರಾಂಗ್ ಎರಡೂ ಗೇಮ್ಳಲ್ಲೂ ಪ್ರಭುತ್ವ ಸಾಧಿಸಿದರು. ಇದರಿಂದ ಮುಂಬೈ ತಂಡಕ್ಕೆ ತಿರುಗೇಟು ನೀಡಿದ ಬೆಂಗಳೂರು 3-2ರಿಂದ ಮುನ್ನಡೆ ಕಂಡಿತು.