ಇ-ಖಾತಾ ಇಲ್ಲದೆ ಪರದಾಟ; ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಸ್ಥಗಿತ | ಬಿಡಿಎ ಸೈಟ್​ಗೂ ಕಂಟಕ

bda

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ಸ್ಥಿರಾಸ್ತಿ ದಸ್ತಾವೇಜು ನೋಂದಣಿಗೆ ‘ಡಿಜಿಟಲ್ ಖಾತಾ’ ಕಡ್ಡಾಯ ಮಾಡಿ ಅನುಷ್ಠಾನಕ್ಕೆ ತಂದ ಬೆನ್ನಲ್ಲೇ, ಸಾರ್ವಜನಿಕರಲ್ಲಿ ಪರದಾಟ ಶುರುವಾಗಿದೆ. ಸ್ಥಿರಾಸ್ತಿಗಳಿಗೆ ಡಿಜಿಟಲ್ ಖಾತಾ ನೀಡದೆ ಏಕಾಏಕಿ ಯೋಜನೆ ಜಾರಿಗೆ ತಂದಿರುವುದಕ್ಕೆ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಬಿಬಿಎಂಪಿ, ಪುರಸಭೆ, ನಗರ ಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಪಡೆದ ಡಿಜಿಟಲ್ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ-ಸ್ವತ್ತು ಸಾಫ್ಟ್ ವೇರ್​ನಲ್ಲಿ ಪಡೆದ ಡಿಜಿಟಲ್ ಖಾತಾ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆ ಮತ್ತು ವಸತಿ ಯೋಜನೆ ಆಸ್ತಿಗಳಿಗೆ ಯುನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ (ಯುಎಲ್​ಎಂಎಸ್) ಡಿಜಿ ಟಲ್ ಖಾತಾ ಬೇಕೆಂದು ಕಂದಾಯ ಇಲಾಖೆ ಷರತ್ತು ವಿಧಿಸಿದೆ.

ಬೆಂಗಳೂರು ನಗರದಲ್ಲಿ ಬಸವನಗುಡಿ ಜಿಲ್ಲಾ ನೋಂದಣಾಧಿಕಾರಿ ವ್ಯಾಪ್ತಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಡಿಜಿಟಲ್ ಖಾತಾ ಇಲ್ಲದೆ ನೋಂದಣಿ ನಡೆಯುತ್ತಿಲ್ಲ.10 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಕೈಬರಹ ಖಾತಾಗಳನ್ನು ಪರಿಗಣಿಸುತ್ತಿಲ್ಲ. ಅ. 7ರಿಂದ 18 ಜಿಲ್ಲೆಗಳಲ್ಲಿ ಇದು ಸಹ ಜಾರಿಗೆ ಬರಲಿದೆ. ಬೆಂಗಳೂರು ನಗರದಲ್ಲಿ ಹಂತ ಹಂತವಾಗಿ ಅ. 28ರ ಒಳಗಾಗಿ ಡಿಜಿಟಲ್ ಖಾತಾ ಕಡ್ಡಾಯ ಮಾಡಲಾಗುತ್ತಿದೆ. ಕಾವೇರಿ 2.0 ಸಾಫ್ಟ್​ವೇರ್​ನಲ್ಲಿ ಡಿಜಿಟಲ್ ಖಾತಾ ಇದ್ದರಷ್ಟೇ ಸ್ಥಿರಾಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಇಲ್ಲವಾದರೆ ಸಾಧ್ಯವಾಗುವುದಿಲ್ಲ. ಈಗಾಗಲೇ ಉಪ ನೋಂದಣಿ ಕಚೇರಿಯ ಕಾವೇರಿ 2.0 ಸಾಫ್ಟ್​ವೇರ್ ಜತೆಗೆ ಇ-ಸ್ವತ್ತು ಮತ್ತು ಇ- ಆಸ್ತಿ ಮತ್ತು ಬಿಡಿಎಯ ಯುಎಲ್​ಎಂಎಸ್ ತಂತ್ರಾಂಶವನ್ನು ಸಂಯೋಜನೆ ಮಾಡಲಾಗುತ್ತಿದೆ. ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿ ವೇಳೆ ಸಾಫ್ಟ್​ವೇರ್​ನಲ್ಲಿ ಮಾಹಿತಿ ಲಭ್ಯವಾದರೇ ಮಾತ್ರ ರಿಜಿಸ್ಟ್ರೇಷನ್ ನಡೆಯಲಿದೆ.

ಭೌತಿಕ ಖಾತಾ ಪಡೆಯದಂತೆ ಕಂದಾಯ ಇಲಾಖೆ ಕಟ್ಟಾಜ್ಞೆ ಮಾಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಟು, ಮನೆ, ಕಟ್ಟಡ, ಅಪಾರ್ಟ್​ವೆುಂಟ್ ಸೇರಿದಂತೆ ಸ್ಥಿರಾಸ್ತಿಗಳು ಶೇ.80 ಬಿ-ಖಾತಾ ಹೊಂದಿವೆ. ಉಳಿದ ಶೇ.20 ಮಾತ್ರ ಎ-ಖಾತಾ ಆಸ್ತಿಗಳು. ಎ-ಖಾತಾ ಇದ್ದವರಿಗೆ ಮಾತ್ರ ಇ-ಆಸ್ತಿ ತಂತ್ರಾಂಶದಲ್ಲಿ ಡಿಜಿಟಲ್ ಖಾತಾ ವಿತರಿಸಲಾಗುತ್ತಿದೆ. ಅದರಲ್ಲಿಯೂ ಪಾಲಿಕೆ ಕಚೇರಿಯಲ್ಲಿ ಡಿಜಿಟಲ್ ಖಾತಾ ವಿತರಿಸಲು ಅಧಿಕಾರಿ, ಸಿಬ್ಬಂದಿಗೆ ತರಬೇತಿಯೇ ನೀಡಿಲ್ಲ. ಅವರಿಗೆ ಬೇಕಾದ ಸಾಫ್ಟ್​ವೇರ್ ಅನ್ನು ಪರಿಚಯಿಸಿಲ್ಲ.

ಇಲಾಖೆಗಳಲ್ಲಿ ಸಮನ್ವಯದ ಕೊರತೆ

ಡಿಜಿಟಲ್ ಖಾತಾ ವಿತರಿಸಲು ಮತ್ತು ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಮೂರು ಜಿಲ್ಲೆಗಳು ಬರಲಿವೆ. ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿ ಬರಲಿದ್ದು, ಇಲ್ಲಿ ಇ-ಸ್ವತ್ತು ತಂತ್ರಾಂಶ ಜಾರಿಗೆ ತರಲಾಗಿದೆ. ನಗರಾಭಿವೃದ್ಧಿ ಇಲಾಖೆಯಡಿ ಸ್ಥಳೀಯ ಸಂಸ್ಥೆಗಳ ಬಿಡಿಎ, ಬಿಬಿಎಂಪಿ ಬರಲಿದ್ದು, ಇಲ್ಲಿ ಇ-ಆಸ್ತಿ ತಂತ್ರಾಂಶ ಪರಿಚಯಿಸಲಾಗಿದೆ. ಈ ಎರಡು ಇಲಾಖೆಗಳು ಖಾತಾ ವಿತರಿಸದ ಮೇಲೆ ಕಂದಾಯ ಇಲಾಖೆಯ ಸಬ್ ರಿಜಿಸ್ಟ್ರಾರ್​ನ ಕಾವೇರಿ 2.0 ತಂತ್ರಾಂಶಕ್ಕೆ ಸಂಯೋಜನೆ ಮಾಡಬೇಕಿದೆ. ಮೂರು ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೆ ಯೋಜನೆ ಅನುಷ್ಠಾನದಲ್ಲಿ ಬದ್ಧತೆ ಕಾಣುತ್ತಿಲ್ಲ. ಪರಿಣಾಮ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಪಾಲಿಕೆಯಲ್ಲಿ ಮಾಹಿತಿಯೇ ಇಲ್ಲ

ಬಿಬಿಎಂಪಿಯ 191 ವಾರ್ಡ್​ನಲ್ಲಿನ ಬಿಡಿಎ ಕಡೆಯಿಂದ 2000ರಲ್ಲಿ ಸೈಟ್ ಖರೀದಿ ಮಾಡಿದ್ದು, ಬಿಡಿಎ ಮತ್ತು ಬಿಬಿಎಂಪಿ ಎ-ಖಾತಾ ವಿತರಿಸಲಾಗಿದೆ. ಸೈಟ್ ಮಾರಾಟ ಮಾಡಿದ್ದು, ಕ್ರಯ ಪತ್ರ ಮಾಡಿಸಲು ಬನಶಂಕರಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದಾಗ ಡಿಜಿಟಲ್ ಖಾತಾ ಇಲ್ಲವೆಂದು ನಿರಾಕರಿಸಿದ್ದಾರೆ. ಬಿಬಿಎಂಪಿ 191 ವಾರ್ಡ್ ಕಚೇರಿಗೆ ಹೋಗಿ ವಿಚಾರಿಸಿದಾಗ ಡಿಜಿಟಲ್ ಖಾತಾ ಕುರಿತು ನಮಗೆ ಮಾಹಿತಿ ಇಲ್ಲವೆಂದು ಹೇಳುತ್ತಿದ್ದಾರೆ. ಹಾಗಾದರೆ ಯಾರ ಬಳಿ ಡಿಜಿಟಲ್ ಖಾತಾ ಪಡೆಯಬೇಕೆಂದು ಸೈಟ್ ಮಾಲೀಕ ಸಾಫ್ಟ್​ವೇರ್, ಇಂಜಿನಿಯರ್ ಎಂ.ಎನ್.ಮಂಜುನಾಥ್ ಪ್ರಶ್ನೆ ಮಾಡಿದ್ದಾರೆ. ಮೊದಲು ಡಿಜಿಟಲ್ ಖಾತಾ ವಿತರಿಸಿದ ಬಳಿಕ ಯೋಜನೆ ಕಡ್ಡಾಯ ಮಾಡಲಿ. ಏಕಾಏಕಿ ಡಿಜಿಟಲ್ ಖಾತಾ ಕಡ್ಡಾಯ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನದ ಮೊಟ್ಟೆಯಾದ ಇ-ಖಾತಾ

ರಾಜ್ಯ ವ್ಯಾಪಿ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿಗೆ ಡಿಜಿಟಲ್ ಖಾತಾ ಕಡ್ಡಾಯ ಮಾಡಿದ ಪರಿಣಾಮ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆಯಾಗಿದೆ. ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು, ಬಿಡಿಎ, ಬಿಬಿಎಂಪಿಯಲ್ಲಿ ಡಿಜಿಟಲ್ ಖಾತಾ ಹೆಸರಿನಲ್ಲಿ ಜನರಿಂದ ಲಂಚಕ್ಕೆ ಬೇಡಿಕೆ ಹೆಚ್ಚಾಗಿದೆ. ಇ-ಸ್ವತ್ತು ಖಾತೆಗೆ ಕನಿಷ್ಠ 20 ಸಾವಿರದಿಂದ 70 ಸಾವಿರ ರೂ.ಗಳವರೆಗೂ ಪೀಕಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ 1 ಲಕ್ಷ ರೂ.ವರೆಗೂ ಲಂಚಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ.

ಬಿಡಿಎ ಸೈಟಿಗೂ ಸಿಗುತ್ತಿಲ್ಲ

1976ರಂದು ಬಿಡಿಎ ಅಸ್ತಿತ್ವಕ್ಕೆ ಬಂದಿದ್ದು, ಸೈಟ್, ವಿಲ್ಲಾ, ಪ್ಲಾ್ಯಟ್ ಅಭಿವೃದ್ಧಿಪಡಿಸಿ ಮಾರಾಟ ಮಾಡಿದೆ. ಎಲ್ಲ ಆಸ್ತಿಗಳಿಗೆ ಡಿಜಿಟಲ್ ಖಾತಾ ವಿತರಿಸಿಲ್ಲ. 2019ರ ನಂತರ ಅಲರ್ಟ್ ಮಾಡಿದ ಸ್ಥಿರಾಸ್ತಿಗಳಿಗೆ ಮಾತ್ರ ಬಿಡಿಎ ಡಿಜಿಟಲ್ ಖಾತಾ ವಿತರಿಸಿದೆ. ಅದಕ್ಕೂ ಮೊದಲು ಸ್ಥಿರಾಸ್ತಿ ಖರೀದಿಸಿದ ವಾರಸುದಾರರಿಗೆ ಕೈಬರಹದಲ್ಲಿ ಎ ಖಾತಾ ವಿತರಿಸಿದೆ. ಇದೀಗ ಇವರಿಗೆ ಡಿಜಿಟಲ್ ಖಾತಾ ವಿತರಿಸುತ್ತಿಲ್ಲ. ಮತ್ತೊಂದೆಡೆ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬಿಡಿಎ ಸೈಟ್ ಇದ್ದರೂ ಡಿಜಿಟಲ್ ಖಾತಾ ಇಲ್ಲದ ಪರಿಣಾಮ ರಿಜಿಸ್ಟ್ರೇಷನ್​ಗೆ ಒಪು್ಪತ್ತಿಲ್ಲ.

ಇ-ಸ್ವತ್ತಿಗೆ ರೆವಿನ್ಯೂ ಸೈಟ್​ಗಳೇ ಕುತ್ತು

ಗ್ರಾಮ ಪಂಚಾಯಿತಿ ವ್ಯಾಪ್ತಿ ಸ್ಥಿರಾಸ್ತಿಗಳಿಗೆ ಡಿಜಿಟಲ್ ಖಾತಾ ವಿತರಿಸಲು ಇ-ಸ್ವತ್ತು ತಂತ್ರಾಂಶವನ್ನು 2014ರಲ್ಲಿ ಪರಿಚಯಿಸಲಾಗಿದೆ. ಗ್ರಾಮ ಠಾಣಾ ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಲೇಔಟ್​ಗಳಿಗೆ ಡಿಜಿಟಲ್ ಖಾತಾ ವಿತರಿಸಲಾಗುತ್ತಿದೆ. ಆದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೆವಿನ್ಯೂ ಬಡಾವಣೆಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಸಣ್ಣ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟುವ ದರದಲ್ಲಿ ಸೈಟ್ ಸಿಗುವ ಕಾರಣ ರೆವಿನ್ಯೂ ಲೇಔಟ್​ಗಳು ನಿರ್ವಣವಾಗಿವೆ. ಸೈಟ್​ಗಳಲ್ಲಿ ಹತ್ತಾರು ವರ್ಷಗಳಿಂದ ಮನೆ ನಿರ್ವಣವಾಗಿದ್ದು, ಇದೀಗ ಡಿಜಿಟಲ್ ಖಾತಾ ಸಿಗದೆ ರಿಜಿಸ್ಟ್ರೇಷನ್ ಸಂಪೂರ್ಣ ಬಂದ್ ಆಗಿದೆ.

ಟೇಕ್ ಆಫ್ ಆಗದ ಇ-ಆಸ್ತಿ

ಬಿಬಿಎಂಪಿ, ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ-ಆಸ್ತಿ ಸಾಫ್ಟ್​ವೇರ್​ನಲ್ಲಿ ಡಿಜಿಟಲ್ ಖಾತಾ ಪಡೆಯಲು ಸೂಚಿಸಲಾಗಿದೆ. ಡಿಜಿಟಲ್ ಖಾತಾಗೆ ಜನರು ಅರ್ಜಿ ಸಲ್ಲಿಸಲು ಹೋದಾಗ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲದೆ ಅರ್ಜಿ ಸ್ವೀಕಾರಕ್ಕೆ ನಿರಾಕರಿಸುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಶೇ.80 ಆಸ್ತಿಗಳು ಬಿ-ಖಾತಾ ಆಗಿರುವುದರಿಂದ ಮತ್ತು ಕೈಬರಹ ಖಾತಾಕ್ಕೆ ತೆರಿಗೆ ಪಾವತಿಸಿಕೊಂಡು ಬರುತ್ತಿದ್ದಾರೆ. ಇವರು ಮುಂದೆ ಡಿಜಿಟಲ್ ಖಾತಾ ಇಲ್ಲದೆ ಇದ್ದರೇ ಆಸ್ತಿ ತೆರಿಗೆ ಪಾವತಿ ಮಾಡಬೇಕಾ? ಬೇಡವಾ? ಎಂಬುದು ಪ್ರಶ್ನೆಯಾಗಿದೆ.

ಇ-ಖಾತಾ ಇಲ್ಲದೆ ಪರದಾಟ; ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಸ್ಥಗಿತ | ಬಿಡಿಎ ಸೈಟ್​ಗೂ ಕಂಟಕ

ರಿಜಿಸ್ಟ್ರೇಷನ್ ಇಲ್ಲದೆ ತೊಂದರೆಗಳು

* ಸಾಲ,ವೈದ್ಯಕೀಯ ವೆಚ್ಚ,ಮದುವೆ ಇನ್ನಿತ್ತರ ಕಷ್ಟ ಕಾಲಕ್ಕೆ ಸ್ಥಿರಾಸ್ತಿಗಳ ಮಾರಾಟಕ್ಕೆ ಆಗುತ್ತಿಲ್ಲ

* ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್​ಗಳಲ್ಲಿ ಅಡಮಾನ ಸಾಲಕ್ಕೂ ಸಾಧ್ಯವಾಗುತ್ತಿಲ್ಲ

* ಕೊನೆ ಕಾಲದಲ್ಲಿ ಆಸ್ತಿಯನ್ನು ಮಕ್ಕಳಿಗೆ ವಿಭಾಗ ಪತ್ರ, ವಿಲ್, ದಾನ ಪತ್ರ ಮಾಡಲು ಕೊಕ್ಕೆ

* ಆಸ್ತಿ ಮಾರಾಟ ಮಾಡಿ ಮನೆ ನಿರ್ವಣಕ್ಕೆ ಪ್ಲಾ್ಯನ್ ಮಾಡಿದವರಿಗೆ ಅರ್ಧಕ್ಕೆ ಕೊತ್ತು

* ಕಟ್ಟಡ, ಭೂಮಿ, ಸೈಟ್​ಗಳನ್ನು ಬಾಡಿಗೆ ಅಥವಾ ಗುತ್ತಿಗೆ ನೀಡಲು ರಿಜಿಸ್ಟ್ರೇಷನ್ ಆಗುತ್ತಿಲ್ಲ

Karnataka Politics | ಐದು ವರ್ಷ ಸಿದ್ದರಾಮಯ್ಯನೇ ಸಿಎಂ ಎಂದ ಡಿಕೆ ಸುರೇಶ್​!

Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…