ಕಬ್ಬಿನ ಹಣ ಬಾಕಿ, ಶೀಘ್ರ ಸಕ್ಕರೆ ಜಪ್ತಿ !

ಹೀರಾನಾಯ್ಕ ಟಿ, ವಿಜಯಪುರ

ಜಿಲ್ಲೆಯಲ್ಲಿ ಕಳೆದ ಐದು ತಿಂಗಳಿದ ರೈತರ ಖಾತೆಗೆ ಹಣ ಪಾವತಿ ಮಾಡದ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಸಕ್ಕರೆ ಜಪ್ತಿಗೆ ಸರ್ಕಾರ ಆದೇಶಿಸಿದೆ. ಅದರಿಂದ ಕಾರ್ಖಾನೆ ಮಾಲೀಕರು ಪೇಚಿಗೆ ಸಿಲುಕಿದ್ದಾರೆ.
ಬರದ ನಾಡಿನಲ್ಲಿ ನೀರಿನ ಅಭಾವದ ನಡುವೆಯೂ ಕಬ್ಬು ಬೆಳೆದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ನೀಡದೇ ಬಾಗಿಲು ಮುಚ್ಚಿಕೊಂಡು ಹೋಗಿದ್ದು, ಅದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಕಬ್ಬು ನುರಿಸಿ ಐದು ತಿಂಗಳು ಕಳೆದರೂ ರೈತರಿಗೆ ನೀಡಬೇಕಿದ್ದ ಹಣ ಇನ್ನು ಪಾವತಿ ಮಾಡಿಲ್ಲ.

ಜಿಲ್ಲೆಯಲ್ಲಿ 177.52 ಕೋಟಿ ರೂ. ಬಾಕಿ: ಕಳೆದ ಬಾರಿ ಕಬ್ಬಿಗೆ ಬೆಂಬಲ ಬೆಲೆ ಸಿಗದೆ ಬೆಳೆಗಾರರು ಕೈ ಸುಟ್ಟುಕೊಂಡಿದ್ದರು, ಅದರಿಂದಾಗಿ ಕಬ್ಬು ಬೆಳೆದ ರೈತರ ಬದುಕು ಸಿಹಿಯಾಗದೇ ಕಹಿಯಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಒಂಭತ್ತು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಏಳು ಕಾರ್ಖಾನೆಗಳು ರೈತರ ಬಿಲ್ ಪಾವತಿಸಿಲ್ಲ. ಒಟ್ಟು 177.52 ಕೋಟಿ ರೂ. ಪಾವತಿಸಬೇಕಿದೆ.
ಅದರಲ್ಲಿ ಇಂಡಿ ತಾಲೂಕಿನ ಹಿರೇಬೆನೂರಿನ ಧ್ಯಾನಯೋಗಿ ಸಕ್ಕರೆ ಕಾರ್ಖಾನೆ 19.18 ಕೋಟಿ ರೂ., ಹಾವಿನಾಳ ಬಳಿಯ ಇಂಡಿಯನ್ ಸಕ್ಕರೆ ಕಾರ್ಖಾನೆ 31.38 ಕೋಟಿ ರೂ., ವಿಜಯಪುರ ತಾಲೂಕಿನ ಗಲಗಲಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 10.69 ಕೋಟಿ ರೂ., ಕಾರಜೋಳ ಬಳಿಯ ಬಸವೇಶ್ವರ ಸಕ್ಕರೆ ಕಾರ್ಖಾನೆ 45.35 ಕೋಟಿ ರೂ., ಸಿಂದಗಿ ತಾಲೂಕಿನ ಮನಾಲಿ ಸಕ್ಕರೆ ಕಾರ್ಖಾನೆ 41.34 ಕೋಟಿ ರೂ., ಮುದ್ದೇಬಿಹಾಳ ತಾಲೂಕಿನ ಬಾಲಾಜಿ ಸಕ್ಕರೆ ಕಾರ್ಖಾನೆ 10 ಕೋಟಿ ರೂ., ಇಂಡಿ ತಾಲೂಕಿನ ಮರಗೂರು ಬಳಿಯ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 19.58 ಕೋಟಿ ರೂ. ಬಾಕಿ ಹಣ ಉಳಿಸಿಕೊಂಡಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ನೀಡಿದೆ.

44.47 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವಿಕೆ: ರಾಜ್ಯದಲ್ಲೇ ಅತಿಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಪೈಕಿ ವಿಜಯಪುರ ಮೂರನೇ ಸ್ಥಾನ ಹೊಂದಿದ್ದು, 2018-19ನೇ ಸಾಲಿನಲ್ಲಿ 44.47 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 36,096 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಜಿಲ್ಲೆ ಒಂಬತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಕೆಪಿಆರ್ ಸಕ್ಕರೆ ಕಾರ್ಖಾನೆ 8.73 ಲಕ್ಷ ಹಾಗೂ ಜಮಖಂಡಿ ಸಕ್ಕರೆ ಕಾರ್ಖಾನೆ 4.31 ಲಕ್ಷ ಮೆಟ್ರಿಕ್ ಟನ್, ಬಾಲಾಜಿ 5.56 ಲಕ್ಷ ಮತ್ತು ಬಸವೇಶ್ವರ ಕಾರ್ಖಾನೆ 5.61 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿವೆ. ಇನ್ನುಳಿದಂತೆ ಇಂಡಿಯನ್ 4.41 ಲಕ್ಷ, ಧ್ಯಾನಯೋಗಿ 1.58 ಲಕ್ಷ, ಮನಾಲಿ 2.83, ಭೀಮಾಶಂಕರ ಸಕ್ಕರೆ ಕಾರ್ಖಾನೆ 2.81 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿವೆ.

17.64 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದನೆ : ಜಿಲ್ಲೆಯ ಒಂಬತ್ತು ಸಕ್ಕರೆ ಕಾರ್ಖಾನೆಗಳಿದ್ದು, ಅದರಲ್ಲಿ ಧ್ಯಾನಯೋಗಿ 1.45 ಲಕ್ಷ ಕ್ವಿಂಟಾಲ್, ಇಂಡಿಯನ್ 4.27 ಲಕ್ಷ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 1.05 ಲಕ್ಷ , ಮನಾಲಿ 2.51 ಲಕ್ಷ, ಬಾಲಾಜಿ 6.09 ಲಕ್ಷ, ಭೀಮಾಶಂಕರ 2.92 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿವೆ. 2018-19ನೇ ಸಾಲಿನಲ್ಲಿ ಒಟ್ಟು 17.64 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಲಾಗಿದ್ದು, ಸಕ್ಕರೆ ಮಾರಾಟ ಮಾಡಿದ್ದರೂ, ರೈತರಿಗೆ ಬಿಲ್ ಪಾವತಿಸಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀಮಂತ ದುದ್ದಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬಿನ ಬಾಕಿ ಹಣ ಉಳಿಸಿಕೊಂಡ ಎಲ್ಲ ಕಾರ್ಖಾನೆ ಮಾಲೀಕರಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಅಲ್ಲದೆ ಜಿಲ್ಲಾಕಾರಿ ವೈ.ಎಸ್. ಪಾಟೀಲ ನೇತೃತ್ವದಲ್ಲಿ ಜೂ.21ರಂದು ಸಭೆ ಕರೆಯಲಾಗಿದೆ. ಅದಕ್ಕೂ ಮಣಿಯದೆ ಇದ್ದರೆ ಶೀಘ್ರದಲ್ಲೆ ಸಕ್ಕರೆ ಜಪ್ತಿ ಮಾಡಿ ರೈತರಿಗೆ ಹಣ ಕೊಡಿಸುವ ವ್ಯವಸ್ಥೆ ಕೈಕೊಳ್ಳಲಾಗುವುದು.
ಡಾ. ಔದ್ರಾಮ ಉಪ ನಿರ್ದೇಶಕ (ಪ್ರಭಾರ) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

Leave a Reply

Your email address will not be published. Required fields are marked *