ಪಯಸ್ವಿನಿ ಒಡಲು ಪೂರ್ತಿ ಹೂಳು

ಗಂಗಾಧರ ಕಲ್ಲಪಳ್ಳಿ ಸುಳ್ಯ
ಕಳೆದ ಮಳೆಗಾಲದಲ್ಲಿ ಜೋಡುಪಾಲ ಮತ್ತು ಮೊಣ್ಣಂಗೇರಿಯಲ್ಲಿ ಉಂಟಾದ ಭೂಕುಸಿತ ಮತ್ತು ಜಲಪ್ರಳಯದ ಪರಿಣಾಮವಾಗಿ ಉಕ್ಕಿ ಹರಿದ ಪಯಸ್ವಿನಿ ನದಿಯ ಒಡಲು ಪೂರ್ತಿ ಕೆಸರು, ಮಣ್ಣು, ಮರಳು ತುಂಬಿ ಹೋಗಿದೆ.
ಕಳೆದ ಮಳೆಗಾಲದಲ್ಲಿ ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಮಣ್ಣು ಮಿಶ್ರಿತ ಕೆಂಪು ನೀರು ನದಿಯಲ್ಲಿ ಉಕ್ಕಿ ಹರಿದಿತ್ತು. ಪರಿಣಾಮ ನದಿಯ ಒಡಲಲ್ಲಿ ಮರಳು ಮತ್ತು ಮಣ್ಣು ತುಂಬಿ ಕೊಂಡಿದೆ. ಇದರಿಂದ ನದಿ ಪಾತ್ರ ಮೇಲಕ್ಕೆ ಬಂದಿದ್ದು, ಮುಂದೆ ಮಳೆಗಾಲದಲ್ಲಿ ನದಿ ಮತ್ತೆ ಉಕ್ಕಿ ಹರಿದರೆ ಸುತ್ತಲ ಪ್ರದೇಶದಲ್ಲಿ ನೆರೆ ಉಂಟಾಗಬಹುದು ಎಂಬ ಭೀತಿ ಉಂಟಾಗಿದೆ. ಎರಡನೇ ಮೊಣ್ಣಂಗೇರಿ, ಜೋಡುಪಾಲ ಭಾಗದಲ್ಲಿ ಉಂಟಾದ ಜಲಪ್ರಳಯ ಮತ್ತು ಮತ್ತು ಭೂಕುಸಿತದಿಂದ ಟನ್‌ಗಟ್ಟಲೆ ಮಣ್ಣು, ಮರಳು ಹರಿದು ಬಂದಿದೆ. ಹೀಗೆ ಬಂದ ಮಣ್ಣು, ಹೂಳು ನದಿಯಲ್ಲಿದ್ದ ಭಾರಿ ಗಾತ್ರದ ಹೊಂಡ ಮತ್ತು ಗಯಗಳಲ್ಲಿ ತುಂಬಿಕೊಂಡಿದೆ. ಇದರಿಂದ ನದಿಯ ಪಾತ್ರದಲ್ಲಿ ಕೆಲವೆಡೆ 10-15 ಅಡಿಗಳಷ್ಟು ಹೂಳು ತುಂಬಿದ್ದರೆ, ಬಹುತೇಕ ಕಡೆಗಳಲ್ಲಿ ಆರು-ಏಳು ಅಡಿಗಳಷ್ಟು ಹೂಳು ನಿಂತಿದೆ ಎಂದು ಭೂ ವಿಜ್ಞ್ಞಾನಿಗಳು ಹೇಳುತ್ತಾರೆ.
ಮೊಣ್ಣಂಗೇರಿಯಿಂದ ಆರಂಭಗೊಂಡು, ಕೊಯನಾಡು, ಸಂಪಾಜೆ, ಊರುಬೈಲು, ಚೆಂಬು, ಕಲ್ಲುಗುಂಡಿ, ಅರಂತೋಡು, ಪೆರಾಜೆ ಭಾಗದವರೆಗೆ ನದಿಯ ಒಡಲು ಹೂಳಿನಿಂದ ತುಂಬಿ ಹೋಗಿದ್ದು ಹೊಂಡಗಳೆಲ್ಲ ಮುಚ್ಚಿ ನದಿಯ ಮೇಲ್ಪದರ ಸಮತಟ್ಟಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ ನದಿಯಲ್ಲಿ ನೀರು ಉಕ್ಕಿ ಹರಿದಾಗ ನದಿಯ ಬದಿಯಲ್ಲಿರುವ ಪ್ರದೇಶಗಳಿಗೆ, ತೋಟ, ಕೃಷಿಭೂಮಿಗಳಿಗೆ ನೀರು ನುಗ್ಗಿತ್ತು. ಊರುಬೈಲಿನ ಸೇತುವೆ ಸೇರಿ ಕೆಲವೆಡೆ ಮೋರಿ, ಸೇತುವೆಗಳು ಕೊಚ್ಚಿ ಹೋಗಿತ್ತು. ಈ ವರ್ಷ ಮಳೆಗಾಲದಲ್ಲಿ ನದಿ ಮತ್ತೆ ಉಕ್ಕಿ ಹರಿದರೆ ನದಿ ನೀರು ಇನ್ನಷ್ಟು ಎತ್ತರಕ್ಕೆ ಚಿಮ್ಮಿ ತೀರ ಪ್ರದೇಶವನ್ನು ಆಪೋಷನ ತೆಗೆದುಕೊಳ್ಳಬಹುದು ಎಂಬ ಆತಂಕ ಜನರನ್ನು ಕಾಡಿದೆ.

ಭೂ ಕುಸಿತವಾದರೆ ಇನ್ನಷ್ಟು ಅಪಾಯ:  ಜಲ ಪ್ರಳಯದಿಂದ ಮಣ್ಣು ತುಂಬಿ ನದಿಯ ಒಡಲು ಬರಿದಾಗಿರುವ ಪ್ರದೇಶದಲ್ಲಿ ಭೂ ವಿಜ್ಞಾನಿ ಅನನ್ಯ ವಾಸುದೇವ್ ಆರ್.ಎಂ.ನೇತೃತ್ವದಲ್ಲಿ ಇತ್ತೀಚೆಗೆ ಪರಿಶೀಲನೆ ನಡೆಸಿದ್ದರು. ಹೂಳು ತುಂಬಿ ಬೃಹದಾಕಾರದ ಹೊಂಡಗಳು ಮಚ್ಚಿ ಹೋಗಿದೆ. ಎಲ್ಲೆಡೆ ಕನಿಷ್ಠ ಆರು ಅಡಿಗಳಷ್ಟು ಹೂಳು ತುಂಬಿರುವುದು ಕಂಡು ಬಂದಿದೆ. ಕಳೆದ ಬಾರಿ ಪಯಸ್ವಿನಿ ನದಿಯ ಮೇಲೆಯೇ ಬಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಆ ಮಣ್ಣು ಹರಿದು ಬಂದು ನದಿಯಲ್ಲಿ ಸೇರಿಕೊಂಡಿದೆ. ಮುಂದಿನ ಮಳೆಗಾಲದಲ್ಲಿ ಮತ್ತೆ ಭಾರಿ ಮಳೆಯಾಗಿ ಗುಡ್ಡ ಕುಸಿದರೆ ಆ ಮಣ್ಣು ಮತ್ತು ನೀರು ನದಿಯಲ್ಲಿ ಉಕ್ಕಿ ಹರಿದರೆ ತೀರ ಪ್ರದೇಶಗಳಿಗೆ ವ್ಯಾಪಕ ಹಾನಿಯಾಗುವ ಸಂಭವವಿದೆ ಎಂದು ಅನನ್ಯ ವಾಸುದೇವ್ ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಸಂಕಟ ತಂದಿತ್ತು: ಮಳೆಗಾಲದಲ್ಲಿ ಜಲಪ್ರಳಯವಾದರೂ ನದಿಯಲ್ಲಿ ಹೂಳು ತುಂಬಿದ ಕಾರಣ ಬೇಸಿಗೆಯಲ್ಲಿಯೂ ಕೃಷಿಕರಿಗೆ, ಸಾರ್ವಜನಿಕರಿಗೆ ಸಂಕಟ ಎದುರಾಗಿತ್ತು. ಹೂಳು ತುಂಬಿ ಹೊಂಡಗಳು ಮುಚ್ಚಿ ಹೋಗಿ ನೀರಿನ ಶೇಖರಣೆಯೇ ಇಲ್ಲದಂತಾಗಿತ್ತು. ಹಲವು ಕಡೆಗಳಲ್ಲಿ ನದಿಯ ಮೇಲ್ಭಾಗದಲ್ಲಿ ನೀರಿನ ಹರಿವು ನಿಂತು ಹೋಗಿ ನದಿ ಸಣ್ಣ ತೋಡಿನಂತಾಗಿತ್ತು. ತುಂಬಿದ ಮರಳು ಮತ್ತು ಹೂಳಿನ ಅಡಿ ಭಾಗದಲ್ಲಿ ನೀರು ಸೇರಿಕೊಂಡ ಕಾರಣ ಕೃಷಿಕರು ನದಿಯಲ್ಲಿ ಹೊಂಡ ತೋಡಿ ನೀರು ತೆಗೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು.
ನದಿಯಲ್ಲಿನ ದೊಡ್ಡ ಹೊಂಡಗಳಿಗೆ ಪಂಪ್ ಸೆಟ್ ಇಟ್ಟು ಕೃಷಿಕರು ತಮ್ಮ ತೋಟಗಳಿಗೆ ನೀರು ಹಾಯಿಸುತ್ತಿದ್ದರು. ಆದರೆ ಮರಳು, ಹೂಳು ತುಂಬಿ ಹೊಂಡಗಳೆಲ್ಲ ಭರ್ತಿಯಾದ ಕಾರಣ ನದಿಯ ನೀರಿನ ಆಗರಗಳೇ ಭರಿದಾಗಿ ತೋಟಕ್ಕೆ ನೀರು ಹಾಯಿಸಲಾಗದೆ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಪಂಪ್ ಸ್ಟಾರ್ಟ್ ಮಾಡಿದರೆ ಮರಳಿನ ಕಣಗಳು ನುಗ್ಗಿ ಪಂಪ್‌ಸೆಟ್‌ಗಳು ಕೆಟ್ಟು ಹೋಗುವುದು ಸಾಮಾನ್ಯವಾಗಿತ್ತು. ಪಯಸ್ವಿನಿ ನದಿಯನ್ನು ಆಶ್ರಯಿಸಿ ಕೃಷಿ ಮಾಡುತ್ತಿರುವ ಹಲವು ಕೃಷಿಕರಿಗೆ ನೀರಿನ ಅಭಾವದಿಂದ ತೋಟಕ್ಕೆ ನೀರು ಹಾಯಿಸಲು ಸಂಕಷ್ಟ ಎದುರಾಗಿತ್ತು.
ನದಿಯಲ್ಲಿ ಹೂಳು ತುಂಬಿ ನದಿಯ ಒಡಲು ಮೇಲೆ ಬಂದಿರುವುದರಿಂದ ಮಳೆಗಾಲದಲ್ಲಿ ನೀರು ಉಕ್ಕಿ ಹರಿದರೆ ಸಮೀಪದ ಪ್ರದೇಶಗಳು ಕೊಚ್ಚಿ ಹೋಗುವ ಸಾಧ್ಯತೆ ಇದೆ. ಆದುದರಿಂದ ಈ ಮರಳು ಮತ್ತು ಹೂಳನ್ನು ಎತ್ತಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಲವು ತಿಂಗಳ ಹಿಂದೆಯೇ ಬೇಡಿಕೆ ಇಟ್ಟಿದ್ದರು.

ನದಿಯಲ್ಲಿ ಹೂಳು, ಮರಳು, ಮಣ್ಣು ತುಂಬಿರುವ ಕಾರಣ ನದಿಯಲ್ಲಿ ನೀರಿನ ಶೇಖರಣೆ ಮತ್ತು ಹರಿವಿಗೆ ತೊಡಕಾಗಿದೆ. ಈ ಹೂಳನ್ನು ತೆರವು ಮಾಡಬೇಕಿತ್ತು. ನದಿ ಪಾತ್ರದಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಮತ್ತೆ ಗುಡ್ಡ ಜರಿದು ಮಣ್ಣು ನೀರು ಉಕ್ಕಿ ಹರಿದರೆ ನದಿ ತೀರದ ಪ್ರದೇಶಗಳಿಗೆ ವ್ಯಾಪಕ ಹಾನಿಯಾಗುವುದರ ಜತೆಗೆ ನದಿ ತನ್ನ ಹರಿವಿನ ದಿಕ್ಕನ್ನೇ ಬದಲಿಸುವ ಅಪಾಯವೂ ಇದೆ.
ಅನನ್ಯ ವಾಸುದೇವ್. ಆರ್.ಎಂ.,  ಭೂವಿಜ್ಞಾನಿ

One Reply to “ಪಯಸ್ವಿನಿ ಒಡಲು ಪೂರ್ತಿ ಹೂಳು”

  1. ಭೂ ವಿಜ್ಣಾನಿಗಳ ಪರಿಶೀಲನೆ ಮತ್ತು ಕಾಳಜಿ ಶ್ಲಾಘನೀಯ. ಜನತೆ ಮತ್ತು ಸರ್ಕಾರ ಇಂತಹ ನೈಸರ್ಗಿಕ ವಿಕೋಪಗಳನ್ನು ವೈಜ್ನಾನಿಕವಾಗಿ ಮತ್ತು ಸಾಮಾಜಿಕವಾಗಿ ಚಿಂತಿಸಿ ಪರಿಹಾರ ಹುಡುಕಬೇಕು. ಜನತೆ ಭಾವನೆಗೆ ಮಾತ್ರ ಒತ್ತು ನೀಡಿ ಅಲ್ಲೇ ಇರುತ್ತೇವೆ ಎಂಬ ನಿರ್ಧಾರಕ್ಕೆ ಬಂದರೆ ಅದು ಖಂಡನೀಯ ಎಂದು ತಿಳಿಯಬೇಕು. ನಿಸರ್ಗ ಸರ್ಕಾರದ ಕೈಯಲ್ಲಾಗಲಿ, ಜನತೆಯ ಕೈಯಲ್ಲಾಗಲಿ ಇಲ್ಲ. ಇದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಪರಿಹಾರ ನೀಡುವುದನ್ನೇ ಉಪಾಯ ಮಾಡಿಕೊಂಡರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ.
    ಜನತೆಯಾಗಲಿ, ಸರ್ಕಾರವಾಗಲಿ ಸಂಬಂಧಪಟ್ಟ ಕ್ಷೇತ್ರ ತಜ್ನರ ಸಭೆ ಕರೆಸಿ ಸೂಕ್ತ ಉಪಾಯ ಕೈಗೊಳ್ಳಬೇಕು.

Leave a Reply

Your email address will not be published. Required fields are marked *