ನರಗುಂದ: ಪರ ಭಾಷೆಗಳ ವ್ಯಾಮೋಹ ತ್ಯಜಿಸದಿದ್ದರೆ ಮಾತೃ ಭಾಷೆ ಬೆಳೆಯಲು ಸಾಧ್ಯವಿಲ್ಲ. ಕನ್ನಡ ಉಳಿದರೆ ನಾವು ಉಳಿದೇವು, ಭಾಷೆ ಬೆಳೆದರೆ ನಾವು ಬೆಳೆದೇವು ಎಂಬುದನ್ನರಿತು ಪ್ರತಿಯೊಬ್ಬರೂ ಮಾತೃಭಾಷೆ ಕನ್ನಡ ಉಳಿಸಿ, ಬೆಳೆಸಲು ವಿಶೇಷ ಗಮನ ಹರಿಸಬೇಕು ಎಂದು ಕಸಾಪ ತಾಲೂಕಾಧ್ಯಕ್ಷ ಪ್ರೊ. ಬಿ.ಸಿ. ಹನುಮಂತಗೌಡ್ರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ಬನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ಸಹಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡಿಗರು ಕನ್ನಡಕ್ಕಿಂತ ಬೇರೆ ಭಾಷೆಗಳ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಹೆಚ್ಚಾಗುತ್ತಿದೆ. ಕನ್ನಡಿಗರು ಕನ್ನಡದ ಅಂಕಿ-ಸಂಖ್ಯೆಗಳನ್ನು ಬರೆಯುವುದು. ಸಹಿ ಹಾಕುವುದು ಇತ್ತೀಚಿನ ದಿನಗಳಲ್ಲಿ ಕ್ರಮೇಣ ಮಾಯವಾಗುತ್ತಿದೆ. ಇದಕ್ಕಾಗಿ ಕನ್ನಡದ ಮನಸುಗಳನ್ನು ಜಾಗೃತಗೊಳಿಸುವ ಸಲುವಾಗಿ ನರಗುಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಹಿ ವಿಶೇಷ ಅಭಿಯಾನ ಪ್ರಾರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಈ ವಿಶೇಷ ಅಭಿಯಾನವನ್ನು ಪಸರಿಸಿ ಕನ್ನಡದ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಬನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಕೆ.ಎಂ.ಹುದ್ದಾರ ಮಾತನಾಡಿ, ಕನ್ನಡ ನಾಡು-ನುಡಿಯ ಬಗ್ಗೆ ಸಮಾಜದ ಪ್ರತಿಯೊಬ್ಬರೂ ಅಭಿಮಾನ ತಾಳಬೇಕು ಎಂದರು. ಬನಹಟ್ಟಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಎಸ್.ವೈ. ಪಾಟೀಲ ಮಾತನಾಡಿದರು. ಹಿರಿಯ ಉಪನ್ಯಾಸಕ ಸಿ.ಜಿ. ಖಾನಾಪೂರ, ರೂಪಾ ಪಾಟೀಲ, ಅಂಜನಾದೇವಿ ಓಜನಹಳ್ಳಿ, ಎನ್.ವೈ. ತಹಸೀಲ್ದಾರ್, ಇತರರು ಉಪಸ್ಥಿತರಿದ್ದರು.