ರಾಮದುರ್ಗ: ಪ್ರತಿಯೊಬ್ಬರು ಸಂತ ಸೇವಾಲಾಲ್ ತತ್ತ್ವಾದರ್ಶಅಳವಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ವಿರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ಬಂಜಾರ ಸಮುದಾಯದ ಸಂಯುಕ್ತಾಶ್ರಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ರ 286ನೇ ಜಯಂತ್ಯುತ್ಸವದ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಉದುಪುಡಿ ಶಿವಸಾಗರ ಸಕ್ಕರೆ ಕಾರ್ಖಾನೆ ಎಂಡಿ ವಿರೂಪಾಕ್ಷಯ್ಯ ಗುಡಗುಂಟಿ, ಬೀಲಪ್ಪ ಪೂಜಾರಿ, ಬಂಜಾರ ಸಮುದಾಯದ ಅಧ್ಯಕ್ಷ ಕೃಷ್ಣ ಚವ್ಹಾಣ, ಮುಖ್ಯಶಿಕ್ಷಕ ಆರ್.ಸಿ. ರಾಠೋಡ ಮಾತನಾಡಿದರು.
ಸುಮಂಗಲೆಯರ ಆರತಿ, ಕುಂಭ, ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯಮೇಳದೊಂದಿಗೆ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಯುವಕರು ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಬಿಗ್‌ಬಾಸ್ ವಿನ್ನರ್ ಹನುಮಂತ ಲಮಾಣಿ ಸಂಗೀತ ಕಾರ್ಯಕ್ರಮ ನೀಡಿದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಕೆ.ವಿ.ಪಾಟೀಲ, ಪಾಂಡಪ್ಪ ಲಮಾಣಿ, ಚಂದ್ರು ರಜಪೂತ, ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ಪೂಜಾರ, ಈರವ್ವ ಲಮಾಣಿ, ಜಿಪಂ ಮಾಜಿ ಸದಸ್ಯ ಶಂಕರ ಲಮಾಣಿ, ಗ್ರೇಡ್-2 ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ, ಪ್ರಕಾಶ ಸತ್ತಿಗೇರಿ ಇತರರಿದ್ದರು. ಕರವೇ ತಾಲೂಕಾಧ್ಯಕ್ಷ ವಿಜಯಕುಮಾರ ರಾಠೋಡ ನಿರೂಪಿಸಿದರು.