ಆರೋಗ್ಯದತ್ತ ಗಮನ ಹರಿಸಿ

ಮಡಿಕೇರಿ: ಕೊಡಗಿನ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರಿಗೆ ಗುರುವಾರ ಬಾಲಭವನದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಿತು.

ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಕುಟುಂಬ ಸದಸ್ಯರೊಂದಿಗೆ ಆಗಮಿಸಿ ವೈದ್ಯಕೀಯ ತಪಾಸಣೆ ಮಾಡಿಸದರು.

ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯ ಹೃದ್ರೋಗ ತಜ್ಞ ವೈದ್ಯ ಡಾ.ಗುರುಪ್ರಸಾದ್ ನೇತೃತ್ವದಲ್ಲಿ ವೈದ್ಯರು ಹಾತೂ ತಂತ್ರಜ್ಞರ ತಂಡ ತಪಾಸಣೆ ನಡೆಸಿತು. ಹೃದಯ, ಮೂಳೆ, ಕಿವಿ- ಮೂಗು- ಗಂಟಲು (ಇಎನ್‌ಟಿ) ಹಾಗೂ ಸಾಮಾನ್ಯ ವೈದ್ಯಕೀಯ ಪರೀಕ್ಷೆ ಮಾಡಲಾ ಯಿತು. ವೈದ್ಯರ ಸಲಹೆ ಮೇರೆಗೆ ಇಸಿಜಿ, ಎಕೊ ತಪಾಸಣೆ ನಡೆಯಿತು.


ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ, ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು. 88 ಜನ ತಪಾಸಣೆಗೊಳಗಾದರು. ಕೆಲವರಿಗೆ ಅಗತ್ಯ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡಲಾಯಿತು.

ಉದ್ಘಾಟನಾ ಸಮಾರಂಭ: ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ವಿದ್ಯಮಾನ ನಡೆಯುವ ಸ್ಥಳದಲ್ಲಿ ಪತ್ರಕರ್ತರು ಕ್ಷಣ ಮಾತ್ರದಲ್ಲಿ ಇರಬೇಕಾಗುತ್ತದೆ. ಒತ್ತಡದಲ್ಲಿ ಕೆಲಸ ಮಾಡುವ ಮಾಧ್ಯಮದವರು ಆರೋಗ್ಯದತ್ತ ಗಮನ ಹರಿಸಬೇಕೆಂದು ಶಿಬಿರ ಉದ್ಘಾಟಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಕರೆ ನೀಡಿದರು.

ಸದಾ ಗಂಭೀರವಾಗಿ ಜೀವನ ಸಾಗಿಸುವವರಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಶಿಸ್ತುಬದ್ಧ ಜೀವನ, ಸಮರ್ಪಕ ಆರೋಗ್ಯ ಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಮಠಾಧೀಶರಾದ ಸದಾಶಿವ ಸ್ವಾಮೀಜಿ ಹೇಳಿದರು.

ನಮ್ಮಂತವರು ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಆರೋಗ್ಯ ಬದಿಗಿಟ್ಟು ಸಂಪಾದನೆ ಮಾಡುವವರು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆಂದು ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.
ಪತ್ರಕರ್ತರು ಆರೋಗ್ಯದತ್ತ ನಿಗಾ ವಹಿಸಬೇಕೆಂದು ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಎಚ್.ಎಸ್. ಹರೀಶ್‌ಕುಮಾರ್, ಬಾಲಭವನ ಅಧ್ಯಕ್ಷ ಕಲ್ಲುಮಾಡಂಡ ಮೋಹನ್ ಮೊಣ್ಣಪ್ಪ ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಾಥ್, ವೈದ್ಯರಾದ ಡಾ.ಗುರುಪ್ರಸಾದ್, ಡಾ.ಆದರ್ಶ್, ಕಿಶೋರ್ ರೈ ಕತ್ತಲೆಕಾಡು, ಎಸ್. ಮಹೇಶ್ ಇತರರು ಹಾಜರಿದ್ದರು.

ಶ್ಲಾಘನೀಯ ಕಾರ್ಯ:  ಮಾಧ್ಯಮದಲ್ಲಿ ಕೆಲಸ ಮಾಡುವವರು ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು. ಅನಾರೋಗ್ಯಕ್ಕೋಳಗಾದವರು ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಭಾವನೆ ಮೂಡುತ್ತದೆ. ಹೀಗಾಗದಂತೆ ಎಚ್ಚರ ವಹಿಸಬೇಕೆಂದರು.
ಆರೋಗ್ಯ ಸಮಸ್ಯೆ ಅರಿತುಕೊಳ್ಳಲು ವೈದ್ಯಕೀಯ ಶಿಬಿರ ಅಗತ್ಯ. ಪ್ರತಿಷ್ಠಿತ ಜೆಎಸ್‌ಎಸ್ ಆಸ್ಪತ್ರೆಯ ವೈದ್ಯರ ತಂಡ ಮಡಿಕೇರಿಗೆ ಆಗಮಿಸಿರುವುದು ಪತ್ರಕರ್ತರಿಗೆ ಸಿಕ್ಕ ಒಳ್ಳೆಯ ಅವಕಾಶ ಎಂದು ಉಪವಿಭಾಗಾಧಿಕಾರಿ ಜವರೇಗೌಡ ಹೇಳಿದರು.