10 ಲಕ್ಷ ಉದ್ಯೋಗ ಸೃಷ್ಟಿ, ಉಚಿತ ಶಿಕ್ಷಣ, ರೈತರಿಗೆ ಬಂಪರ್​ ಘೋಷಣೆ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಿದ ಪವನ್​ ಕಲ್ಯಾಣ್​

ರಾಜಮಂಡ್ರಿ: ಕಾಲಿವುಡ್​ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್​ ಅವರು ಭಾರಿ ಆಶ್ವಾಸನೆಗಳೊಂದಿಗೆ ಗುರುವಾರ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಭರ್ಜರಿಯಾಗಿ ಧುಮುಕ್ಕಿದ್ದಾರೆ.

ಒಟ್ಟೊಟ್ಟಿಗೆ ಆಂಧ್ರ ಪ್ರದೇಶದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಬರುತ್ತಿರುವುದನ್ನು ಮನಗಂಡಿರುವ ಪವನ್​ ಕಲ್ಯಾಣ್​, ಈ ಅವಕಾಶವನ್ನು ಬಳಸಿಕೊಳ್ಳಲು ದೊಡ್ಡ ಯೋಜನೆಯನ್ನು ರೂಪಿಸಿದ್ದಾರೆ.

5ನೇ ವರ್ಷದ ಜನಸೇನಾ ಸಂಸ್ಥಾಪನ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ಬೃಹತ್​​ ಸಾರ್ವನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜನಾಸೇನಾ ಪಕ್ಷವನ್ನು ಅಧಿಕಾರಕ್ಕೆ ತಂದರೆ, ರೈತರಿಗೆ ಕೃಷಿಯಲ್ಲಿ ಬಂಡಾವಳ ಹೂಡಲು ವರ್ಷಕ್ಕೆ 8 ಸಾವಿರ ರೂ. ಹಾಗೂ 60 ವರ್ಷ ಮೇಲ್ಪಟ್ಟ ರೈತರಿಗೆ 5 ಸಾವಿರ ರೂ. ಪಿಂಚಣಿಯನ್ನು ನೀಡುವುದಾಗಿ ತಿಳಿಸಿದ್ದಾರೆ. ಜತೆಗೆ ರೈತರಿಗೆ ಉಚಿತವಾಗಿ ಸೋಲಾರ್​ ಯಂತ್ರವನ್ನು ಕೊಡುವುದಾಗಿ ಭರವಸೆ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಜನಸೇನಾ ಪಕ್ಷ ಧುಮುಕಿದೆ. ಪಕ್ಷವನ್ನು ಗೆಲ್ಲಿಸಿದರೆ, ಮೊದಲ ಆರು ತಿಂಗಳಲ್ಲಿ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿ ಹಾಗೂ ನಂತರ ಐದು ವರ್ಷಗಳಲ್ಲಿ 10 ಲಕ್ಷ ಉದ್ಯೋಗವನ್ನು ಸೃಷ್ಟಿಸುವುದಾಗಿ ಭರವಸೆ ನೀಡಿರುವ ಪವನ್​ ಕಲ್ಯಾಣ್​ ಕಿಂಡರ್​ಗಾರ್ಡನ್​ನಿಂದ ಸ್ನಾತಕೋತ್ತರ ಪದವಿಯವರೆಗೂ ಉಚಿತ ಶಿಕ್ಷಣ ನೀಡುವುದಾಗಿ ಆಶ್ವಾಸನೆ ನೀಡಿದರು.

ಈಗಾಗಲೇ ಪವನ್​ ಕಲ್ಯಾಣ್​ ಅವರು 4 ಲೋಕಸಭಾ ಹಾಗೂ 32 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್​)