ಮುಂಬರುವ ಚುನಾವಣೆಯಲ್ಲಿ ನಾನೇ ಕಿಂಗ್‌ ಮೇಕರ್‌ ಅಂದ್ರು ಪವನ್‌ ಕಲ್ಯಾಣ್‌!

ಹೈದರಾಬಾದ್‌: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌ನಂತೆಯೇ ಆಂಧ್ರದಲ್ಲಿ ಹೊಸ ಸರ್ಕಾರ ರಚನೆ ವೇಳೆ ಜನಸೇನಾ ಪಕ್ಷ ಕಿಂಗ್‌ ಮೇಕರ್‌ ಆಗಿ ಹೊರಹೊಮ್ಮಲಿದೆ ಎಂದು ಆತ್ಮವಿಶ್ವಾಸದಿಂದ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಹೇಳಿದ್ದಾರೆ.

ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಕರ್ನಾಟಕದಂತೆಯೇ ಅತಂತ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬರಲಿದ್ದು, ಆಂಧ್ರದ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ನಡುವಿನ ಪೈಪೋಟಿ ಮಧ್ಯೆ ಜನಸೇನಾ ಪಕ್ಷ ಕಿಂಗ್‌ ಮೇಕರ್‌ ಆಗಲಿದೆ. ಕರ್ನಾಟಕಕ್ಕಿಂತ ಉತ್ತಮವಾಗಿ ಫಲಿತಾಂಶ ನೀಡುತ್ತೇವೆ. ಆದರೆ, ಜನರು ನೀಡುವ ತೀರ್ಪೇ ಪ್ರಮುಖವಾಗಿರಲಿದೆ ಎಂದು ತಿಳಿಸಿದ್ದಾರೆ.

2009ರಲ್ಲಿ ನಮ್ಮ ಕುಟುಂಬದಿಂದ ಪ್ರಜಾ ರಾಜ್ಯಂ ಪಕ್ಷವನ್ನು ಕಟ್ಟಿ ಶೇ. 25 ರಷ್ಟು ಮತಗಳನ್ನು ಪಡೆದಿದ್ದೆವು. ಆದರೆ, ಇವತ್ತಿನ ಮಟ್ಟಿಗೆ ನಮಗೆ ಮತ್ತಷ್ಟು ಶಕ್ತಿ ಬಂದಿದೆ. 2019ರ ಚುನಾವಣೆ ನಿಮಿತ್ತ ಎಲ್ಲ ಕೊರತೆಗಳತ್ತ ಗಮನ ಹರಿಸಿದ್ದು, ರಾಜ್ಯದ 175 ಕ್ಷೇತ್ರಗಳಲ್ಲೂ ಸ್ಫರ್ಧಿಸುತ್ತೇವೆ ಎಂದು ತಿಳಿಸಿದ್ದಾರೆ.

2014ರಲ್ಲಿ ಜನಸೇನೆ ಪಕ್ಷ ಬಿಜೆಪಿ ಮತ್ತು ಟಿಡಿಪಿಯ ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿತ್ತು. ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಪಡೆಯಲು ವಿಫಲವಾದ ನಂತರ ಟಿಡಿಬಿ, ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿತ್ತು. ಅದಾದ ಬಳಿಕ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷ ಮುಂಬರುವ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ತೀರ್ಮಾನಿಸಿದೆ. (ಏಜೆನ್ಸೀಸ್)