ನೋಯ್ಡ: ರೈಡರ್ ಆಯಾನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ದ್ವಿತೀಯಾರ್ಧದಲ್ಲಿ ಅಬ್ಬರಿಸಿದ ಪಟನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 47ನೇ ಪಂದ್ಯದಲ್ಲಿ 13 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಪೂರ್ಣ ಐದು ಅಂಕಗಳನ್ನು ಸಂಪಾದಿಸಿತು.
ನೋಯ್ಡ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡ 40-27 ಅಂಕಗಳಿಂದ ಗುಜರಾತ್ ಜಯಂಟ್ಸ್ ತಂಡವನ್ನು ಪರಾಭವಗೊಳಿಸಿ, ಟೂರ್ನಿಯಲ್ಲಿ ಐದನೇ ಜಯ ದಾಖಲಿಸಿತು. ಅತ್ತ ಗುಜರಾತ್ 7ನೇ ಸೋಲಿಗೆ ಗುರಿಯಾಯಿತು. ಆರಂಭಿಕ ಮುನ್ನಡೆಯ ಜತೆಗೆ ದ್ವಿತೀಯಾರ್ಧದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ ಪಟನಾ ಪೈರೇಟ್ಸ್ ತಂಡ ಅರ್ಹತವಾಗಿ ಪಂದ್ಯ ಗೆದ್ದು ವಿಜಯೋತ್ಸವ ಆಚರಿಸಿತು.
ಎಡ ಬದಿ ರೈಡರ್ ಆಯಾನ್ (10 ಅಂಕ), ದೇವಾಂಕ್ (6 ಅಂಕ), ಬಲಬದಿ ರೈಡರ್ ಸಂದೀಪ್ (5 ಅಂಕ) ಪಟನಾ ಪೈರೇಟ್ಸ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಅತ್ತ ಗುಜರಾತ್ ಜೈಂಟ್ಸ್ ಪರ ಪರ್ತೀಕ್ ದಹಿಯಾ ಮತ್ತು ಗುಮಾನ್ ಸಿಂಗ್ ತಲಾ 5 ಅಂಕ ಗಳಿಸಿದರೆ, ಇತರರು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಗುಜರಾತ್ ಸೋಲಿನ ಕೊಂಡಿ ಕೊಳಚಲು ಸಾಧ್ಯವಾಗಲಿಲ್ಲ.
ಮೊದಲಾರ್ಧದ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಪಟನಾ ಪೈರೇಟ್ಸ್, ಟ್ಯಾಕಲ್ ಮತ್ತು ದಾಳಿಯಲ್ಲಿ ಮಿಂಚಿತು. ಆದರೆ ಹಿನ್ನಡೆ ತಗ್ಗಿಸುವ ಗುರಿಯೊಂದಿಗೆ ಪೂರ್ವಾರ್ಧ ಆರಂಭಿಸಿದ ಗುಜರಾತ್ ಆಟಗಾರರು ಎದುರಾಳಿಯ ರಕ್ಷಣಾವ್ಯೂಹದಲ್ಲಿ ಪದೇ ಪದೆ ಬಂಧಿಯಾದರು. ಹೀಗಾಗಿ 30 ನಿಮಿಷಗಳ ಆಟಕ್ಕೆ 21-29ರಲ್ಲಿ ಹಿನ್ನಡೆ ಅನುಭವಿಸಬೇಕಾಯಿತು. ಇದರ ಬೆನ್ನಲ್ಲೇ 31ನೇ ನಿಮಿಷದಲ್ಲಿ ಪರ್ತೀಕ್ ದಹಿಯಾ ಅವರನ್ನು ಟ್ಯಾಕಲ್ ಮಾಡಿದ ಆಯಾನ್, ಪಟನಾ ಪೈರೇಟ್ಸ್ ತಂಡವನ್ನು ಆಲೌಟ್ ಗೆ ಗುರಿಪಡಿಸಿತು. ಹೀಗಾಗಿ ಎರಡನೇ ಬಾರಿ ಆಲೌಟ್ ಗೆ ಒಳಗಾದ ಗುಜರಾತ್ 33- 22ರಲ್ಲಿ ಮೇಲುಗೈ ಸಾಧಿಸಿತು. ಗೆಲುವಿನತ್ತ ಹೆಜ್ಜೆ ಇಟ್ಟಿತು.
https://x.com/ProKabaddi/status/1855984626076119462
ಆಯಾನ್ ಅವರ ಸೂಪರ್ ಟೆನ್ ಸಾಹಸದಿಂದ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಪೈರೇಟ್ಸ್ ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳಿರುವಾಗ 12 (36-24) ಅಂಕಗಳ ಅಂತರವನ್ನು ಕಾಯ್ದುಕೊಂಡಿತು. ಹಿನ್ನಡೆಯಿಂದ ಆತ್ಮವಿಶ್ವಾಸ ಕಳೆದುಕೊಂಡು ಅಂಕಪಟ್ಟಿಯ ಕೆಳಸ್ಥಾನಿ ಗುಜರಾತ್ ಜೈಂಟ್ಸ್, ಆಟಗಾರರು ಪ್ರಬಲವಾಗಿ ಪುಟಿದೇಳಲು ಸಾಧ್ಯವಾಗಲಿಲ್ಲ.
ಟ್ಯಾಕಲ್ ಮತ್ತು ರೈಡಿಂಗ್ ಎರಡೂ ವಿಭಾಗಗಳಲ್ಲೂ ಮಿಂಚಿದ ಗುಜರಾತ್ ಜೈಂಟ್ಸ್ ಮತ್ತು ಪಟನಾ ಪೈರೇಟ್ಸ್ ತಂಡಗಳು ಪಂದ್ಯದ ಮೊದಲಾರ್ಧಕ್ಕೆ ಸಮಬಲದ ಹೋರಾಟ ನೀಡಿದವಾದರೂ ಮೊದಲ ವಿರಾಮಕ್ಕೆ ಪಟನಾ ಪೈರೇಟ್ಸ್ 21-16ರಲ್ಲಿ ಮೇಲುಗೈ ಸಾಧಿಸಿತು.
18ನೇ ನಿಮಿಷದಲ್ಲಿ ಗುಜರಾತ್ ಜೈಂಟ್ಸ್ ತಂಡದ ಅಂಗಣವನ್ನು ಖಾಲಿ ಮಾಡಿಸಿದ ಮೂರು ಬಾರಿಯ ಚಾಂಪಿಯನ್ಸ್ ತಂಡ ಪಟನಾ ಪೈರೇಟ್ಸ್, ಜೈಂಟ್ಸ್ ತಂಡದ ಮೇಲೆ ಒತ್ತಡ ಹೇರಿತು. ಆಡಿದ ಏಳು ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು, 6ರಲ್ಲಿ ಸೋತಿರುವ ಗುಮಾನ್ ಸಿಂಗ್ ನೇತೃತ್ವದ ಗುಜರಾತ್ ಜೈಂಟ್ಸ್ ತಂಡ ಚೇತೋಹಾರಿ ಪ್ರದರ್ಶನ ನೀಡುವ ಗುರಿಯೊಂದಿಗೆ ಕಣಕ್ಕಿಳಿಯತಾದರೂ ಮೊದಲಾರ್ಧದಲ್ಲಿ ಹೊಂದಾಣಿಕೆಯ ಆಟವಾಡುವಲ್ಲಿ ಕೊರತೆ ಎದುರಿಸು. ಅತ್ತ ದೇವಾಂಕ್ ಮತ್ತು ಆಯಾನ್ ತಮ್ಮ ಆರ್ಭಟವನ್ನು ಈ ಪಂದ್ಯದಲ್ಲೂ ಮುಂದುವರಿಸಿದ ಕಾರಣ ಪಟನಾ ಪೈರೇಟ್ಸ್ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು.
ನವೆಂಬರ್ 12ರಂದು ಬೆಂಗಳೂರು ಬುಲ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ದಬಾಂಗ್ ದಿಲ್ಲಿ ಮತ್ತು ಪುಣೇರಿ ಪಲ್ಟನ್ ತಂಡಗಳು ಮುಖಾಮುಖಿಯಾಗಲಿವೆ