More

    ಆತ್ಮಸಾಕ್ಷಾತ್ಕಾರಕ್ಕಾಗಿ ಸನಾತನ ಧರ್ಮದ ಪಥಗಳು

    ಆತ್ಮಸಾಕ್ಷಾತ್ಕಾರಕ್ಕಾಗಿ ಸನಾತನ ಧರ್ಮದ ಪಥಗಳುಆತ್ಮಜ್ಞಾನವನ್ನರಸಿ ತಮ್ಮ ಬಳಿಗೆ ಬಂದ ಜಿಜ್ಞಾಸುಗಳಿಗೆ ಶ್ರೀರಮಣ ಮಹರ್ಷಿಗಳು ‘ನಾನು ಯಾರು?’ ಎಂದು ಅಂತರಂಗದಲ್ಲಿ ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ ಎಂದು ಉಪದೇಶಿಸುತ್ತಿದ್ದರು. ಈ ಮಾರ್ಗದಲ್ಲಿ ಮುಂದುವರಿದಂತೆ ‘ನಾನು ದೇಹ’ವೆಂಬ ಭ್ರಮೆ ಕ್ರಮೇಣವಾಗಿ ತೊಲಗಿ ‘ನಾನು ಆತ್ಮ’ವೆಂಬ ಸತ್ಯದರ್ಶನವಾಗುತ್ತದೆ.

    ಅಂತರಂಗದಲ್ಲಿರುವ ದಿವ್ಯತೆಯನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಜೀವನದ ಪರಮ ಉದ್ದೇಶ. ಈ ಭೂಮಿಯಲ್ಲಿ ಜನಿಸಿದ ಪ್ರತಿ ಜೀವಿಯ ಅಂತಿಮ ಗಮ್ಯವು ಈ ದಿವ್ಯತೆ ಅಥವಾ ಬ್ರಹ್ಮವೇ ಆಗಿದೆ. ಎಲ್ಲ ಆಧ್ಯಾತ್ಮಿಕ ಸಾಧನೆಗಳ ಸಾಫಲ್ಯ ಇರುವುದು, ಬ್ರಹ್ಮವು ರೂಪ-ನಾಮರಹಿತ ಹಾಗೂ ಕೇವಲ ಪ್ರಜ್ಞಾ ಸ್ವರೂಪವೆಂದು ಅರಿಯುವುದರಲ್ಲೇ. ಈ ಗಮ್ಯ ಒಂದೇ ಆಗಿದ್ದರೂ ಸನಾತನ ಧರ್ಮವು ಪ್ರತಿ ವ್ಯಕ್ತಿಯೂ ತನ್ನದೇ ಆದ ಪಥ ಆರಿಸಿಕೊಳ್ಳಲು ಸ್ವಾತಂತ್ರ್ಯ ನೀಡಿದೆ. ಇವುಗಳಲ್ಲಿ ಪ್ರಮುಖವಾದ ಮೂರು ಪಥಗಳೆಂದರೆ ಕರ್ಮಯೋಗ, ಭಕ್ತಿಯೋಗ ಹಾಗೂ ಜ್ಞಾನಯೋಗಗಳು. ಈ ಮೂರು ಪಥಗಳ ರೀತಿ-ವಿಧಾನಗಳು ಬೇರೆ ಬೇರೆಯಾಗಿದ್ದರೂ, ಅವುಗಳ ಗಮ್ಯ ಒಂದೇ; ಅದುವೇ ದೈವಸಾಕ್ಷಾತ್ಕಾರ ಅಥವಾ ಆತ್ಮಸಾಕ್ಷಾತ್ಕಾರ.

    ಸಾಕ್ಷಾತ್ಕಾರದ ಪಥದಲ್ಲಿ ಮಾನವನಿಗೆ ಎದುರಾಗುವ ಅಡೆ-ತಡೆಗಳು ಮೂರು ವಿಧವೆಂದು ನಮ್ಮ ಶಾಸ್ತ್ರಗಳು ತಿಳಿಸುತ್ತವೆ; ಅವುಗಳೆಂದರೆ ಮಲ, ವಿಕ್ಷೇಪ ಹಾಗೂ ಆವರಣಗಳು. ಮಲವೆಂದರೆ ಮನಸ್ಸನ್ನು ಕಲುಷಿತಗೊಳಿಸುವ ಸ್ವಾರ್ಥ-ಸ್ವಪ್ರಯೋಜನಗಳು. ವಿಕ್ಷೇಪವೆಂದರೆ ಮನಸ್ಸನ್ನು ತನ್ನ ಗುರಿಯಿಂದ ವಿಚಲಿತಗೊಳಿಸುವ ಚಂಚಲತೆ. ಆವರಣವೆಂದರೆ ಮನಸ್ಸಿನಿಂದ ಅಂತರಂಗದ ದಿವ್ಯತೆಯನ್ನು ದೂರ ಮಾಡುವ ದೇಹಾಭಿಮಾನ. ಒಂದು ಕನ್ನಡಿಯ ನಿದರ್ಶನದೊಂದಿಗೆ ಈ ಮೂರು ಅಡಚಣೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಧೂಳಿನಿಂದ ಮುಚ್ಚಲ್ಪಟ್ಟಿರುವ ಕನ್ನಡಿಯಲ್ಲಿ ಯಾವುದೇ ಪ್ರತಿಬಿಂಬವನ್ನು ಕಾಣಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಸ್ವಾರ್ಥ-ಸ್ವಪ್ರಯೋಜನಗಳಿಂದ ಕಲುಷಿತವಾಗಿರುವ ಮನಸ್ಸು ದಿವ್ಯತೆಯನ್ನು ಅರಿಯಲಾರದು; ಈ ಕಲ್ಮಷವೇ ಮಲ. ನಿರಂತರವಾಗಿ ಇತ್ತಿಂದತ್ತ ಚಲಿಸುತ್ತಿರುವ ಕನ್ನಡಿಯಲ್ಲಿ ವಿಕೃತವಾದ ಪ್ರತಿಬಿಂಬಗಳು ಮಾತ್ರ ಕಾಣುತ್ತವೆ. ಹಾಗೆಯೇ ಚಂಚಲವಾದ ಮನಸ್ಸಿನಿಂದ ಸತ್ಯದರ್ಶನ ಸಾಧ್ಯವಿಲ್ಲ; ಇದುವೇ ವಿಕ್ಷೇಪ. ವಿಕ್ಷೇಪವು ಮನಸ್ಸಿನಲ್ಲಿ ದ್ವಂದ್ವಮಯ ಭಾವನೆ ಮತ್ತು ಸಂಕಲ್ಪ-ವಿಕಲ್ಪಗಳನ್ನು ಉಂಟುಮಾಡುತ್ತದೆ. ಒಂದು ಕನ್ನಡಿ ವಸ್ತ್ರದಿಂದ ಮುಚ್ಚಲ್ಪಟ್ಟಾಗ ಅದು ಏನನ್ನೂ ಪ್ರತಿಬಿಂಬಿಸಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ದೇಹಾಭಿಮಾನದಿಂದ ಮುಚ್ಚಲ್ಪಟ್ಟಿರುವ ಮನಸ್ಸಿನಿಂದ ದಿವ್ಯತೆಯನ್ನು ಅರಿಯಲು ಸಾಧ್ಯವಿಲ್ಲ; ಇದುವೇ ಆವರಣ. ಕರ್ಮಯೋಗವು ಮಲವನ್ನು ನಿವಾರಿಸುತ್ತದೆ. ಭಕ್ತಿಯೋಗವು ಮನೋಚಾಂಚಲ್ಯವನ್ನು ದೂರ ಮಾಡುತ್ತದೆ. ಜ್ಞಾನಯೋಗ ಮನಸ್ಸನ್ನು ಆವರಿಸಿರುವ ದೇಹಾಭಿಮಾನವನ್ನು ತೊಡೆದುಹಾಕುತ್ತದೆ. ಹೀಗೆ ಈ ಮೂರು ಪಥಗಳು ದೈವ ಸಾಕ್ಷಾತ್ಕಾರವನ್ನು ಸಾಧಿಸಲು ಸಹಾಯ ಮಾಡುತ್ತವೆ.

    ಯೋಗವೆಂಬುದರ ಸರಳ ಅರ್ಥವೆಂದರೆ ‘ಜೊತೆಗೂಡಿಸು’. ಯೋಗವು ಮನಸ್ಸನ್ನು ಒಳಗೆ ಹುದುಗಿರುವ ದಿವ್ಯತೆಯೊಂದಿಗೆ ಜೊತೆಗೂಡಿಸುವ ಒಂದು ಅಂತರಂಗದ ಸಾಧನೆ; ಅದು ಕೇವಲ ಬಾಹ್ಯವಾಗಿ ಮಾಡುವ ದೇಹದ ವಿವಿಧ ಆಸನಗಳಿಗೆ ಸೀಮಿತವಾದುದಲ್ಲ. ದೈವಸಾಕ್ಷಾತ್ಕಾರವೇ ಯೋಗದ ಮುಖ್ಯ ಉದ್ದೇಶವಾಗಿದೆ. ಕರ್ಮಯೋಗವು ಮಾನವನನ್ನು ತಾನು ಆಚರಿಸುವ ಕರ್ಮಗಳ ಮೂಲಕ ದಿವ್ಯತೆಯೆಡೆಗೆ ಕೊಂಡೊಯ್ಯುತ್ತದೆ. ಈ ಪಥದಲ್ಲಿ ಮಾನವನು ಮನಸ್ಸಿನ ಕಲ್ಮಶಗಳನ್ನು ದೂರ ಮಾಡುವ ಕರ್ಮಗಳನ್ನು ಮಾತ್ರ ಆರಿಸಿಕೊಳ್ಳಬೇಕು. ಮನಸ್ಸನ್ನು ಹೆಚ್ಚೆಚ್ಚು ಕಲುಷಿತಗೊಳಿಸುವ ಕರ್ಮಗಳನ್ನು ದೂರವಿಡಬೇಕು. ನಿಸ್ವಾರ್ಥ ಹಾಗೂ ಪರಿಶುದ್ಧ ಕರ್ಮಗಳು ಮನಸ್ಸನ್ನು ನಿರ್ಮಲಗೊಳಿಸಿ ದೈವಸಾಕ್ಷಾತ್ಕಾರಕ್ಕೆ ಸಹಾಯ ಮಾಡುತ್ತವೆ. ಇದು ಒಂದು ಕನ್ನಡಿಯ ಮೇಲಿನ ಧೂಳನ್ನು ಒರೆಸಿದಂತೆ. ಭಗವದ್ಗೀತೆಯಿಂದ ಹೆಚ್ಚಾಗಿ ಉದಾಹರಿಸಲ್ಪಡುವ ‘ಕರ್ಮಣ್ಯೆವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ವಾಕ್ಯ ಕರ್ಮಯೋಗದ ಸಾರಸರ್ವಸ್ವವಾಗಿದೆ. ಮಾನವನಿಗೆ ಕರ್ಮಗಳನ್ನು ಆಚರಿಸುವುದರಲ್ಲಿ ಅಧಿಕಾರವಿದೆಯೇ ಹೊರತು, ಅವುಗಳಿಂದ ಬರುವ ಫಲಗಳ ಮೇಲೆ ಅಲ್ಲ. ಈ ಸರಳ ವಾಕ್ಯದ ಆಚರಣೆ ದೈನಂದಿನ ಜೀವನದಲ್ಲಿ ಕಷ್ಟಕರ. ಕರ್ಮಫಲಗಳನ್ನು ಉದ್ದೇಶವಾಗಿಟ್ಟುಕೊಂಡು ಕರ್ಮಗಳನ್ನು ಆಚರಿಸಬಾರದು; ಬದಲಿಗೆ ನಿಷ್ಕಾಮ ದೃಷ್ಟಿಯಿಂದ ಭಗವಂತನ ಅನುಗ್ರಹ ಫಲವನ್ನು ಆಶಿಸಿ ಕರ್ಮಗಳನ್ನು ಮಾಡಬೇಕು. ಆದರೆ, ಕರ್ಮಫಲಗಳ ಆಸೆ ತ್ಯಜಿಸುವುದರಿಂದ ವ್ಯಕ್ತಿ ನಿರುತ್ಸಾಹಿತನಾಗಿ ಅದರಿಂದ ನಿಷ್ಕಿ್ರುತೆಗೆ ದೂಡಲ್ಪಡಬಾರದು. ಸ್ವಾರ್ಥರಹಿತನಾಗಿ ತನ್ನ ಕರ್ತವ್ಯ ನಿರ್ವಹಿಸುವ ವ್ಯಕ್ತಿ ‘ಕರ್ಮಯೋಗಿ’ಯೆನಿಕೊಳ್ಳುತ್ತಾನೆ ಹಾಗೂ ಕರ್ಮಯೋಗದ ಮೂಲಕ ದೈವಸಾಕ್ಷಾತ್ಕಾರ ಪಡೆಯುತ್ತಾನೆ.

    ಭಗವದ್ಗೀತೆಯು ಮುಂದುವರಿದು ‘ಯೋಗಃ ಕರ್ಮಸು ಕೌಶಲಂ- ಕರ್ಮಗಳಲ್ಲಿ ಪರಿಪೂರ್ಣತೆಯೇ ಯೋಗ’ವೆಂದು ಸಾರುತ್ತದೆ. ಕರ್ಮಯೋಗಿ ತನ್ನ ಎಲ್ಲ ಕ್ರಿಯೆಗಳಲ್ಲಿ ಪರಿಪೂರ್ಣತೆ ಸಾಧಿಸಲು ಪ್ರಯತ್ನಿಸುತ್ತಾನೆ. ಏಕೆಂದರೆ ಪರಿಪೂರ್ಣವಾದ ಕರ್ಮಗಳನ್ನು ಮಾತ್ರ ಭಗವಂತನಿಗೆ ಸಮರ್ಪಿಸಬೇಕು. ಅವನ ಜೀವನದಲ್ಲಿ ಕರ್ಮವೂ ಪೂಜೆಯಾಗಿ ಮಾರ್ಪಡುತ್ತದೆ. ವ್ಯಕ್ತಿಗಳು ಆಚರಿಸುವ ಕರ್ಮಗಳಲ್ಲಿ ಮೇಲು-ಕೀಳೆಂಬುದಿಲ್ಲ. ಪ್ರತಿ ವ್ಯಕ್ತಿ ಶ್ರದ್ಧಾಪೂರ್ವಕವಾಗಿ ತನ್ನ ಸಾಮರ್ಥ್ಯವನ್ನೆಲ್ಲ ಉಪಯೋಗಿಸಿ ನಿಸ್ವಾರ್ಥವಾಗಿ ಮಾಡುವ ಯಾವುದೇ ಕರ್ಮವು ಪರಿಪೂರ್ಣವಾದುದೆಂದು ಹೇಳಬಹುದು. ಸಂಪೂರ್ಣ ನಿಸ್ವಾರ್ಥ ಕರ್ವಚರಣೆಯೇ ಕರ್ಮಯೋಗದ ರಹಸ್ಯ. ಆದಿ ಶಂಕರಾಚಾರ್ಯರು ‘ವಿವೇಕ ಚೂಡಾಮಣಿ’ಯಲ್ಲಿ ‘ಚಿತ್ತಸ್ಯ ಶುದ್ಧಯೇ ಕರ್ಮಃ’ ಎಂದು ಹೇಳಿದ್ದಾರೆ. ನಿಸ್ವಾರ್ಥವಾಗಿ ಮಾಡಿದ ಭಗವರ್ದಪಿತ ಕರ್ಮಗಳು ಚಿತ್ತಶುದ್ಧಿಗೆ ಕಾರಣವಾಗುತ್ತದೆ. ಚಿತ್ತಶುದ್ಧಿಯೇ ಜ್ಞಾನಸಿದ್ಧಿಗೆ ಮೂಲ. ಸ್ವಚ್ಛವಾದ ಕನ್ನಡಿಯಲ್ಲಿ ನಿಚ್ಚಳವಾದ ಪ್ರತಿಬಿಂಬ ಕಾಣುವಂತೆ ಶುದ್ಧವಾದ ಚಿತ್ತದಲ್ಲಿ ಆತ್ಮದರ್ಶನವಾಗುತ್ತದೆ. ಸದಾ ಕರ್ಮನಿರತರಾದ ಬಹುತೇಕ ಜನರಿಗೆ ಜಪ-ಧ್ಯಾನ ಇತ್ಯಾದಿ ಸಾಧನೆಗಳಿಗೆ ಸಮಯವಿರುವುದಿಲ್ಲ; ಇಂಥವರಿಗೆ ಕರ್ಮಯೋಗವೇ ಮುಕ್ತಿಪಥವಾಗಿರುತ್ತದೆ.

    ಭಕ್ತಿಯೋಗವು ಸರಳ ಹೃದಯಿಗಳಾದ ಸಂತರಿಂದಲೂ ಹಾಗೂ ಪ್ರಕಾಂಡ ಪಂಡಿತರಿಂದಲೂ ಪ್ರಶಂಸಿಸಲ್ಪಟ್ಟಿರುವ ಸಾಧನಾಪಥವಾಗಿದೆ. ಶಾಸ್ತ್ರ್ಞಾನ ಎಲ್ಲರಿಗೂ ಅಲಭ್ಯವಾಗಿದ್ದ ಹಿಂದಿನ ಕಾಲದಿಂದಲೂ ಜನಸಾಮಾನ್ಯರು ಭಕ್ತಿಯೋಗವನ್ನು ಆಶ್ರಯಿಸಿ ಜೀವನದ ದ್ವಂದ್ವಗಳನ್ನು ದಾಟಿ ದೈವಸಾಕ್ಷಾತ್ಕಾರ ಪಡೆದಿದ್ದಾರೆ. ಸೃಷ್ಟಿಕರ್ತನಾದ ಪರಮ ಪುರುಷನೆಡೆಗೆ ಭಕ್ತಿಯು ಎಲ್ಲ ಮತ-ಧರ್ಮಗಳ ಬುನಾದಿಯಾಗಿದೆ. ಸನಾತನ ಧರ್ಮದಲ್ಲಿ ಜನರು ಪ್ರಾಪಂಚಿಕ ಆಸೆ-ಆಕಾಂಕ್ಷೆಗಳನ್ನು ಪರಮಾತ್ಮನ ಅನುಗ್ರಹದಿಂದ ಈಡೇರಿಸಿಕೊಳ್ಳಲು ಆಶ್ರಯಿಸುವ ಭಕ್ತಿಯನ್ನು ಗೌಣ ಭಕ್ತಿಯೆಂದು ಕರೆದಿದ್ದಾರೆ. ಯಾವುದೇ ಪ್ರಾಪಂಚಿಕ ಬಯಕೆಗಳಿಲ್ಲದೆ ಪರಮಾತ್ಮನ ಪ್ರೇಮಕ್ಕಾಗಿ ಹಂಬಲಿಸುವ ಭಕ್ತಿಯನ್ನು ಪರಾಭಕ್ತಿಯೆಂದು ಕರೆದಿದ್ದಾರೆ. ಪರಾಭಕ್ತಿಯೆಂದರೆ ಪರಿಶುದ್ಧ, ಪರಿಪೂರ್ಣ ಹಾಗೂ ಪರಮೋಚ್ಚ ಪ್ರೇಮವೇ ಆಗಿದೆ.

    ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣನು ಭಕ್ತರನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾನೆ. ಮೊದಲನೆಯ ಗುಂಪಿಗೆ ಸೇರಿದ ಆರ್ತರು ಸಂಕಷ್ಟ-ಸಂಕಟಗಳನ್ನು ನಿವಾರಿಸಿಕೊಳ್ಳಲು ಪರಮಾತ್ಮನನ್ನು ಆಶ್ರಯಿಸುತ್ತಾರೆ. ಎರಡನೆಯ ಗುಂಪಿಗೆ ಸೇರಿದ ಅರ್ಥಾರ್ಥಿಗಳು ಲೌಕಿಕ ಲಾಭಗಳಿಗಾಗಿ, ಪರಮಾತ್ಮನ ಸನ್ನಿಧಿಗೆ ಬರುತ್ತಾರೆ. ಮೂರನೇ ಗುಂಪಿಗೆ ಸೇರಿದ ಜಿಜ್ಞಾಸುಗಳು ಜ್ಞಾನಲಾಭಕ್ಕಾಗಿ ಭಗವಂತನನ್ನು ಯಾಚಿಸುತ್ತಾರೆ. ಕೊನೆಯ ಗುಂಪಿಗೆ ಸೇರಿದ ಜ್ಞಾನಿಗಳು ಯಾವುದೇ ಲೌಕಿಕ ಅಥವಾ ಆಧ್ಯಾತ್ಮಿಕ ಆಸೆಗಳಿಲ್ಲದೆ ಪರಿಪೂರ್ಣ ಪ್ರೇಮಸ್ವರೂಪನಾದ ಭಗವಂತನನ್ನು ನಿಷ್ಕಾಮವಾಗಿ ಪ್ರೀತಿಸುತ್ತಾರೆ. ಇವರ ಪೈಕಿ ಜ್ಞಾನಿಗಳು ತನಗೆ ಪ್ರಿಯವಾದವರೆಂದು ಶ್ರೀಕೃಷ್ಣನು ಘೊಷಿಸಿದ್ದಾನೆ. ಭಗವಂತನಲ್ಲಿ ಸಂಪೂರ್ಣ ಶರಣಾಗತಿಯು ಮಾನವನಿಗೆ ಜೀವನದ ಸುಖ-ದುಃಖಗಳಲ್ಲಿ ಸಮತ್ವವನ್ನು ದಯಪಾಲಿಸುವುದು ಮಾತ್ರವಲ್ಲದೆ, ಅವನನ್ನು ದೈವಸಾಕ್ಷಾತ್ಕಾರದ ಕಡೆಗೆ ಕೊಂಡೊಯ್ಯುತ್ತದೆ. ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯ, ಭಕ್ತಿಯೋಗದಲ್ಲಿ ತನಗೆ ಪ್ರಿಯವಾದ ನಿಜ ಭಕ್ತನನ್ನು ‘ಸಮದುಃಖಸುಖಃ ಕ್ಷಮೀ’ ಎಂದು ಕರೆದಿದ್ದಾನೆ.

    ಭಾಗವತ ಗ್ರಂಥದಲ್ಲಿ ನವವಿಧ ಭಕ್ತಿಯ ಉಲ್ಲೇಖವಿದೆ. ಅವುಗಳಲ್ಲಿ ಪರಮೋಚ್ಚವಾದುದು ಆತ್ಮನಿವೇದನೆ ಅಥವಾ ಶರಣಾಗತಿ. ಯಾವ ರೀತಿಯಲ್ಲಿ ನದಿ ಹರಿದು ಕೊನೆಗೆ ಸಾಗರವನ್ನು ಸೇರುತ್ತದೆಯೋ, ಅದೇ ರೀತಿಯಲ್ಲಿ ಭಕ್ತಿಯಿಂದ ಪರಿಶುದ್ಧವಾದ ಭಕ್ತನ ಮನಸ್ಸು ಪರಮಾತ್ಮನೆಡೆಗೆ ಹರಿದು ಅವನಲ್ಲೇ ಒಂದಾಗಿ ಜೀವನದ ದ್ವಂದ್ವಗಳಿಂದ ಮುಕ್ತಿ ಪಡೆಯುತ್ತದೆ. ನಾರದ ಭಕ್ತಿಸೂತ್ರದಲ್ಲಿ ಭಕ್ತಿಯೆಂದರೆ ಅಮೃತಸ್ವರೂಪನಾದ ಭಗವಂತನೆಡೆಗೆ ಮಾನವನನ್ನು ಮುನ್ನಡೆಸುವ ಪರಮ ಪ್ರೇಮಸ್ವರೂಪವೆಂದು ಹೇಳಿದ್ದಾರೆ. ಇಂತಹ ಭಕ್ತಿ ಮನಸ್ಸನ್ನು ಎಲ್ಲ ಲೌಕಿಕ ಆಸೆಗಳಿಂದ ಬಿಡುಗಡೆ ಮಾಡಿ ಶಾಶ್ವತವಾದ ಆತ್ಮ-ಸಂತೃಪ್ತಿಯನ್ನು ನೀಡುತ್ತದೆ.

    ಜ್ಞಾನಯೋಗವು ಜನಸಾಮಾನ್ಯರ ದೃಷ್ಟಿಯಲ್ಲಿ ಕ್ಲಿಷ್ಟಕರವಾದ ಮಾರ್ಗ. ಅಲ್ಲದೆ ಈ ಪಥವು ಅನೇಕ ತಪ್ಪು ಗ್ರಹಿಕೆಗಳಿಗೂ ಗುರಿಯಾಗಿದೆ. ಕೆಲವರು ಜ್ಞಾನಯೋಗವೆಂದರೆ ಸತ್ಯಾನ್ವೇಷಣೆಗಾಗಿ ಕಠಿಣ ಜೀವನವಿಧಾನವನ್ನು ಆಶ್ರಯಿಸಿ ತಪಸ್ಸು ಹಾಗೂ ಧ್ಯಾನಗಳಲ್ಲಿ ತೊಡಗುವುದೆಂದು ಭಾವಿಸುತ್ತಾರೆ. ಇನ್ನು ಕೆಲವರು, ಗುರುವಿನ ಮಾರ್ಗದರ್ಶನದಲ್ಲಿ ಶಾಸ್ತ್ರಳ ಅಧ್ಯಯನ ಮಾಡುತ್ತ ಹಲವು ಕಠಿಣ ಆಧ್ಯಾತ್ಮಿಕ ಸಾಧನೆಗಳನ್ನು ಆಚರಿಸುವುದೆಂದು ಹೇಳುತ್ತಾರೆ. ಇನ್ನೂ ಕೆಲವರು, ಜ್ಞಾನಯೋಗವೆಂದರೆ ಯೋಗ ಹಾಗೂ ತಂತ್ರಗಳ ಮಾರ್ಗದಲ್ಲಿ ಅವುಗಳ ವಿಧಿ-ವಿಧಾನಗಳನ್ನು ಅನುಸರಿಸುತ್ತ ತೀವ್ರ ತಪಸ್ಸನ್ನು ಕೈಗೊಳ್ಳುವುದೆಂದು ತಿಳಿಯುತ್ತಾರೆ. ಆದರೆ ಶ್ರೀ ಆದಿ ಶಂಕರರು ಹೇಳಿದಂತೆ ಜ್ಞಾನಯೋಗವು ವಿವೇಕ ಹಾಗೂ ವೈರಾಗ್ಯಗಳ ಪಥವಾಗಿದೆ. ನಿತ್ಯಾನಿತ್ಯವಸ್ತುವಿವೇಕವನ್ನು ಆಶ್ರಯಿಸಿ ಯಾವುದು ಸತ್ಯ, ಯಾವುದು ಮಿಥ್ಯೆ ಎಂಬುದನ್ನು ಮೊದಲು ಗ್ರಹಿಸಬೇಕು. ನಂತರ ವೈರಾಗ್ಯದ ಮೂಲಕ ಮಿಥ್ಯೆಯನ್ನು ಧಿಕ್ಕರಿಸಿ ಸತ್ಯವನ್ನು ಸ್ವೀಕರಿಸಬೇಕು. ಇದು ಜ್ಞಾನಯೋಗದ ಸಾರಸರ್ವಸ್ವ. ಇದನ್ನೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಬುದ್ಧಿಯೋಗವೆಂದು ಕರೆದಿದ್ದಾನೆ. ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

    ಅದೈ ್ವ ಸಿದ್ಧಾಂತದ ಪ್ರಕಾರ, ಚಲನಚಿತ್ರದಲ್ಲಿ ಒಂದೇ ಪರದೆಯ ಮೇಲೆ ಅನೇಕ ಚಿತ್ರ ಹಾಗೂ ಬಿಂಬಗಳನ್ನು ಪ್ರಕ್ಷೇಪಿಸಿದಂತೆ (Project), ಸೃಷ್ಟಿಯಲ್ಲಿ ಕಾಣುವ ಅನೇಕ ರೂಪ-ನಾಮಗಳು ಏಕಮೇವ ಸತ್ಯವಾದ ಬ್ರಹ್ಮದ ಮೇಲೆ ಆರೋಪಿಸಲ್ಪಟ್ಟಿವೆ. ಚಲನಚಿತ್ರದಲ್ಲಿ ಕಾಣುವ ಎಲ್ಲ ಚಿತ್ರಗಳೂ ಪರದೆಯ ಆಧಾರದ ಮೇಲೆಯೇ ಕಾಣಿಸುತ್ತವೆ; ಪರದೆಯಿಲ್ಲದಿದ್ದರೆ ಚಿತ್ರಗಳು ಕಾಣುವುದಿಲ್ಲ. ಆದ್ದರಿಂದ ಪರದೆ ಸತ್ಯ ಹಾಗೂ ಚಿತ್ರಗಳು ಮಿಥ್ಯ. ಅದೇ ರೀತಿಯಲ್ಲಿ ಸೃಷ್ಟಿಗೆ ಆಧಾರವಾದ ಪ್ರಜ್ಞಾಸ್ವರೂಪವಾದ ಬ್ರಹ್ಮ ಮಾತ್ರ ಸತ್ಯ; ಮನಸ್ಸು ಹಾಗೂ ಇಂದ್ರಿಯಗಳ ಮೂಲಕ ನಾವು ನೋಡುವ ರೂಪ-ನಾಮಗಳು ಮಿಥ್ಯ. ಬ್ರಹ್ಮನೆಂಬ ಪರದೆಯಿಲ್ಲದಿದ್ದರೆ, ರೂಪ-ನಾಮಗಳೆಂಬ ಚಿತ್ರಗಳನ್ನು ಕಾಣಲು ಸಾಧ್ಯವಿಲ್ಲ. ರೂಪ-ನಾಮಗಳಿಗೆ ಸ್ವತಂತ್ರವಾದ ಆಸ್ತಿತ್ವವಿಲ್ಲ. ಸ್ವತಂತ್ರ ಅಸ್ತಿತ್ವವಿರುವುದು ಬ್ರಹ್ಮಕ್ಕೆ ಮಾತ್ರ. ಇದು ಜ್ಞಾನಯೋಗದ ಸಾರ. ಇದನ್ನೇ ‘ಬ್ರಹ್ಮ ಸತ್ಯಂ ಜಗತ್ ಮಿಥ್ಯಾ’ ಎಂದು ಹೇಳಿದ್ದಾರೆ. ಈ ಸತ್ಯದ ಅರಿವು ಆತ್ಮಜ್ಞಾನಿಯಾದ ಗುರುವಿನ ಮಾರ್ಗದರ್ಶನದಿಂದ ಅಥವಾ ಪರಿಶುದ್ಧ ಚಿತ್ತದೊಂದಿಗೆ ಶಾಸ್ತ್ರಗಳ ಅಧ್ಯಯನ ಮಾಡುವುದರಿಂದ ಆವಿರ್ಭವಿಸುತ್ತದೆ. ಈ ಅರಿವನ್ನು ನಿರಂತರ ಚಿಂತನೆ-ಧ್ಯಾನಗಳ ಮೂಲಕ ಅಂತರಂಗದಲ್ಲಿ ಅನುಭವಿಸಬಹುದು. ಈ ಅನುಭವವೇ ಜ್ಞಾನಸಿದ್ಧಿ. ಇಂತಹ ಜ್ಞಾನಸಿದ್ಧಿಗಾಗಿ ಸಾಮಾಜಿಕ ಜೀವನವನ್ನು ಸಂಪೂರ್ಣವಾಗಿ ಬಿಟ್ಟು ಏಕಾಂತವನ್ನು ಆಶ್ರಯಿಸಬೇಕಾಗಿಲ್ಲ. ಸತ್ಯದ ಮೇಲೆ ಚಿಂತನೆ-ಧ್ಯಾನಗಳನ್ನು ಸಮಾಜದಲ್ಲಿದ್ದುಕೊಂಡು ಸ್ವಗೃಹದಲ್ಲೇ ಮಾಡಬಹುದು ಅಥವಾ ಅರಣ್ಯ ಪ್ರದೇಶದಲ್ಲಾದರೂ ಮಾಡಬಹುದು. ನಿರಂತರ ಸತ್ಯಾನ್ವೇಷಣೆಯೇ ಜ್ಞಾನಯೋಗದ ರಹಸ್ಯ. ಈ ಪಥವನ್ನು ‘ಆತ್ಮವಿಚಾರ’ದ ದಾರಿಯೆಂದೂ ಹೇಳುತ್ತಾರೆ.

    ಎಲ್ಲ ಮಾರ್ಗಗಳೂ ಅಂತಿಮವಾಗಿ ಆತ್ಮಜ್ಞಾನದಲ್ಲಿ ಸಂಗಮಗೊಳ್ಳುತ್ತವೆ. ಸಾಧಕನು ತಾನು ಅರಸುತ್ತಿರುವ ಸತ್ಯವು ತಾನೇ ಎಂಬುದನ್ನು ಅರಿಯುತ್ತಾನೆ. ಇದನ್ನೇ ಮುಂಡಕೋಪನಿಷತ್ತಿನಲ್ಲಿ ‘ಬ್ರಹ್ಮವಿದ್ ಬ್ರಹ್ಮೈವ ಭವತಿ- ಬ್ರಹ್ಮನನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆ’ ಎಂದು ಹೇಳಿದ್ದಾರೆ. ಅಷ್ಟಾವಕ್ರಗೀತೆಯಲ್ಲಿ ಉದ್ಘೋಷಿಸಿರುವಂತೆ ‘ಜ್ಞಾನಂ ಜ್ಞೇಯಂ ತಥಾ ಜ್ಞಾತಾ ತ್ರಿತಯಂ

    ನಾಸ್ತಿ ವಾಸ್ತವಂ- ಜ್ಞಾನ, ಜ್ಞೇಯ ಹಾಗೂ ಜ್ಞಾತಾ ಈ ಮೂರು ಬೇರೆ ಬೇರೆಯಲ್ಲ, ಒಂದೇ’ ಅಂದರೆ, ತಿಳಿದವನು, ತಿಳಿಯಲ್ಪಟ್ಟದ್ದು ಹಾಗೂ ತಿಳಿವಳಿಕೆ- ಈ ಮೂರೂ ಒಂದೇ ಎಂದು ಆತ್ಮಜ್ಞಾನಿ ತಿಳಿಯುತ್ತಾನೆ. ಪಥಗಳು ಬೇರೆ ಬೇರೆಯಾದರೂ ಗಮ್ಯ ಒಂದೇ. ಎಲ್ಲರೂ ಒಂದೇ ಪಥದಲ್ಲಿ ನಡೆದು ಗಮ್ಯ ಮುಟ್ಟಬೇಕೆಂಬ ಸಂಕುಚಿತತೆ ಸನಾತನ ಧರ್ಮದಲ್ಲಿಲ್ಲ. ಆದ್ದರಿಂದ ವ್ಯಕ್ತಿಗಳಿಗೆ ತಮ್ಮ ಸಾಧನಾ ಪಥಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುವ ಸನಾತನ ಧರ್ಮ ಸುಗಮವೂ ವ್ಯಾವಹಾರ್ಯವೂ ಆದ ಜೀವನ ವಿಧಾನವಾಗಿದೆ.

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts