ಬಾಲಕರ ಪಥ ಸಂಚಲನ

ಬಾಗಲಕೋಟೆ: ಠಾಕು, ಠೀಕಿನ ನಡಿಗೆ, ಕೈಯಲ್ಲೊಂದು ಬೆತ್ತ, ತಲೆ ಮೇಲೆ ಟೋಪಿ ಧರಿಸಿ ಗಾಂಭೀರ್ಯತೆಯಿಂದ ಕರಾರುವಕ್ಕಾಗಿ ಬಾಲಕರು ಹಾಕುತ್ತಿದ್ದ ಶಿಸ್ತುಬದ್ಧ ಹೆಜ್ಜೆ.

ನಗರದಲ್ಲಿ ಅ.21ರಂದು ನಡೆಯಲಿರುವ ಆರ್​ಎಸ್​ಎಸ್ ವಾರ್ಷಿಕೋತ್ಸವಕ್ಕೂ ಮುನ್ನ ಭಾನುವಾರ ವಿದ್ಯಾಗಿರಿಯಲ್ಲಿ ಬಾಲಕರಿಗಾಗಿ ಏರ್ಪಡಿಸಿದ್ದ ಪ್ರತ್ಯೇಕ ಪಥ ಸಂಚಲನ ಜನಾಕರ್ಷಣೆಗೆ ಪಾತ್ರವಾಯಿತು.

ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 3.45ಕ್ಕೆ ಆರಂಭವಾದ ಪಥ ಸಂಚಲನದಲ್ಲಿ ನೂರಾರು ಬಾಲಕರು ಪಾಲ್ಗೊಂಡಿದ್ದರು. ಬಾಲಕರು ಹೆಜ್ಜೆ ಹಾಕುವುದನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. ಪಥ ಸಂಚಲನ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಾರ್ಗದುದ್ದಕ್ಕೂ ಜನರು ರಸ್ತೆ, ಮನೆಗಳ ಮುಂದೆ ರಂಗೋಲಿ ಬಿಡಿಸಿದ್ದರು. ಸ್ವಾಗತ ಕಮಾನು ನಿಲ್ಲಿಸಿದ್ದರು. ಅಲ್ಲಲ್ಲಿ ಪುಟಾಣಿ ಮಕ್ಕಳು ದೇಶಭಕ್ತರು, ಮುಖಂಡರ ವೇಷಭೂಷಣ ಧರಿಸಿ ಸ್ವಾಗತಿಸಿದರು.

ಅಥಣಿ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಇಂಜಿನಿಯರಿಂಗ್ ಕಾಲೇಜು ವೃತ್ತದ ಮೂಲಕ ಹಾಯ್ದು ಗೌರಿ ಶಂಕರ ಕಲ್ಯಾಣ ಮಂಟಪಕ್ಕೆ ತಲುಪಿತು. ಆರ್​ಎಸ್​ಎಸ್​ನ ಹಿರಿಯರು, ಸಂಚಾಲಕರ ನೇತೃತ್ವದಲ್ಲಿ 500ಕ್ಕೂ ಅಧಿಕ ಬಾಲಕರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಸಂಘದ ಘೊಷವಾದ್ಯಕ್ಕೆ ತಕ್ಕಂತೆ ಬಾಲಕರು ಹಾಕುತ್ತಿದ್ದ ಹೆಜ್ಜೆಗಳು ನೋಡುಗರನ್ನು ಆಕರ್ಷಿಸಿದವು.

ಪಥಸಂಚಲನ ನೋಡಲು ನಗರ ಸೇರಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನ ಆಗಮಿಸಿದ್ದರು. ಭಾರತ ಮಾತಾಕಿ ಜೈ.., ಬಜರಂಗಿ ಬಜರಂಗಿ.., ಜೋರ್ ಸೆ ಭೋಲೋ.. ಪ್ಯಾರ್ ಸೇ ಭೋಲೋ.. ಎನ್ನುವ ಘೊಷಣೆಗಳು ಮುಗಿಲು ಮುಟ್ಟಿದವು. ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಹೂಮಳೆಗೈದರು.