ಪ್ಯಾಟ್ ಕಮ್ಮಿನ್ಸ್ ನಂ. 1 ಟೆಸ್ಟ್ ಬೌಲರ್

ದುಬೈ: ಐಸಿಸಿ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್​ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ನೂತನ ನಂ. 1 ಬೌಲರ್ ಎನಿಸಿದ್ದಾರೆ. ಅವರು ಕಳೆದ 13 ವರ್ಷಗಳಲ್ಲಿ ಅಗ್ರಸ್ಥಾನಕ್ಕೇರಿದ ಮೊದಲ ಆಸೀಸ್ ಬೌಲರ್ ಎನಿಸಿದ್ದಾರೆ. 2006ರ ಫೆಬ್ರವರಿಯಲ್ಲಿ ಕೊನೆಯದಾಗಿ ವೇಗಿ ಗ್ಲೆನ್ ಮೆಕ್​ಗ್ರಾಥ್ ನಂ. 1 ಸ್ಥಾನಕ್ಕೇರಿದ ಆಸೀಸ್ ಬೌಲರ್ ಎನಿಸಿದ್ದರು. ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ 3ನೇ ಸ್ಥಾನಕ್ಕೆ ಕುಸಿದಿದ್ದರೆ, ಇಂಗ್ಲೆಂಡ್ ವೇಗಿ ಜೇಮ್್ಸ ಆಂಡರ್​ಸನ್ 2ನೇ ಸ್ಥಾನಕ್ಕೇರಿದ್ದಾರೆ. 5ನೇ ಸ್ಥಾನದಲ್ಲಿರುವ ರವೀಂದ್ರ ಜಡೇಜಾ ಅಗ್ರ ಭಾರತೀಯ ಬೌಲರ್ ಆಗಿದ್ದರೆ, ಆರ್. ಅಶ್ವಿನ್ 10ನೇ ಸ್ಥಾನದಲ್ಲಿದ್ದಾರೆ.

ಕುಸಲ್ ಪೆರೇರಾ 58 ಸ್ಥಾನ ಜಿಗಿತ: ಅಜೇಯ 153 ರನ್ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಶ್ರೀಲಂಕಾ ತಂಡದ ಐತಿಹಾಸಿಕ ಗೆಲುವಿಗೆ ಶ್ರಮಿಸಿದ ಎಡಗೈ ಬ್ಯಾಟ್ಸ್​ಮನ್ ಕುಸಲ್ ಪೆರೇರಾ ಬರೋಬ್ಬರಿ 58 ಸ್ಥಾನ ಜಿಗಿದಿದ್ದು, ಜೀವನಶ್ರೇಷ್ಠ 40ನೇ ಸ್ಥಾನಕ್ಕೇರಿದ್ದಾರೆ. ಆಲ್ರೌಂಡರ್​ಗಳಲ್ಲಿ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಅಗ್ರಸ್ಥಾನದಲ್ಲಿದ್ದಾರೆ.

ಅಗ್ರಸ್ಥಾನ ಕಾಯ್ದ ಕೊಹ್ಲಿ

ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಮತ್ತು ಚೇತೇಶ್ವರ ಪೂಜಾರ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಕೊಹ್ಲಿ ರೇಟಿಂಗ್ 992 ಅಂಕದೊಂದಿಗೆ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (897) ಅವರಿಗಿಂತ 95 ಅಂಕಗಳ ಮುನ್ನಡೆಯಲ್ಲಿದ್ದಾರೆ. ಪೂಜಾರ 881 ಅಂಕ ಹೊಂದಿದ್ದರೆ, ಅಗ್ರ 10ರಲ್ಲಿ ಬೇರಾವ ಭಾರತೀಯ ಬ್ಯಾಟ್ಸ್​ಮನ್ ಕೂಡ ಸ್ಥಾನ ಪಡೆದಿಲ್ಲ. ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಲಂಕಾದ ಕರುಣರತ್ನೆ ಜತೆ ಜಂಟಿ 10ನೇ ಸ್ಥಾನದಲ್ಲಿದ್ದಾರೆ.