ಗತಕಾಲದ ಸಾಧನೆಗಳು ವರ್ತಮಾನಕ್ಕೆ ಸ್ಪೂರ್ತಿ

ಶಿರಸಿ: ಗತಕಾಲದ ಸಾಧನೆಗಳು ಮತ್ತು ವೈಭವಗಳು ವರ್ತಮಾನ ಕಾಲದಲ್ಲಿ ಸ್ಪೂರ್ತಿಗೆ ಕಾರಣವಾಗುತ್ತದೆ. ಇತಿಹಾಸದ ಸಂಶೋಧನೆ ಮತ್ತು ಅಧ್ಯಯನ ತೀರ ಅಗತ್ಯ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಭಗವತ್ಪಾದ ಪ್ರಕಾಶನ ಪ್ರಕಟಿಸಿದ ಇತಿಹಾಸ ತಜ್ಞ ಲಕ್ಷ್ಮೀಶ ಸೋಂದಾ ಬರೆದಿರುವ ‘ಸೋಂದಾ ಇತಿಹಾಸ’ ಮತ್ತು ಮಹಾಬಲೇಶ್ವರ ಭಟ್ಟ ಕಿರ್ಕಂಬತ್ತಿ ಅವರು ಸಂಪಾದಿಸಿದ ಲಲಿತಾ ಸಹಸ್ರನಾಮ ಕೃತಿಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬ್ರಹ್ಮೀಭೂತ ಸರ್ವಜ್ಞೇಂದ್ರರು ಒಳ್ಳೆಯ ಲಕ್ಷಣ, ಶ್ರೇಷ್ಠ ಅನುಷ್ಠಾನ, ನಿಷ್ಕಲ್ಮಶ ಸ್ವಭಾವ ಮತ್ತು ಶ್ರೇಷ್ಠ ಪರಂಪರೆಯ ಸಾಕಾರವಾಗಿದ್ದರು. ಅವರನ್ನು ಆರಾಧಿಸುವ ದಿನವಾದ ಇಂದು ಈ ಎರಡು ಕೃತಿಗಳು ಲೋಕಾರ್ಪಣೆಗೊಂಡಿದ್ದು ಸ್ತುತ್ಯಾರ್ಹ ಸಂಗತಿ. ಕಳೆದು ಹೋದದ್ದನ್ನು ನಾವು ಮರೆತುಬಿಡುತ್ತೇವೆ. ಅನವಶ್ಯಕ ಘಟನೆಗಳನ್ನ ಮರೆಯಬೇಕು. ಆದರೆ, ಅವಶ್ಯಕವಾದಂತಹ ಘಟನೆಗಳನ್ನ ಮರೆಯಬಾರದು. ಸೋಂದಾ ಇತಿಹಾಸ ಜಿಲ್ಲೆಯ ಇತಿಹಾಸವೇ ಆಗಿದೆ. ಇತಿಹಾಸದ ಓದುಗರಿಗೆ ಮತ್ತು ಪ್ರವಾಸಿಗರಿಗೆ ಇಂಥದ್ದೊಂದು ಕೃತಿಯ ಅವಶ್ಯಕತೆ ಇತ್ತು. ಆ ಕೊರತೆಯನ್ನು ಲಕ್ಷ್ಮೀಶ ಅವರು ನೀಗಿಸಿದ್ದಾರೆ’ ಎಂದರು.
ಕೃತಿಕಾರ ಲಕ್ಷ್ಮೀಶ ಸೋಂದಾ ಮಾತನಾಡಿ, ‘ಸೋಂದಾ ಪ್ರದೇಶ ಇತಿಹಾಸ ಪೂರ್ವ ಯುಗದಿಂದ ಆರಂಭಿಸಿ 18ನೇ ಶತಮಾನದವರೆಗೆ ವಿಭಿನ್ನ ಆಯಾಮಗಳಲ್ಲಿ ತನ್ನ ಶ್ರೇಷ್ಠತೆಯನ್ನು ಮೆರೆಯುತ್ತ ಬಂದಿದೆ’ ಎಂದರು. ಭಗವತ್ಪಾದ ಪ್ರಕಾಶನದ ಕೆ.ವಿ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎನ್. ಭಟ್ ಸುಗಾವಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *