ಪಾಸ್​ಪೋರ್ಟ್ ಗೋಲ್ಮಾಲ್ ಸಲೀಸು!

|ಕೀರ್ತಿನಾರಾಯಣ ಸಿ. 

ಬೆಂಗಳೂರು: ಪಾಸ್​ಪೋರ್ಟ್ ಅರ್ಜಿಗಳ ಪೊಲೀಸ್ ಪರಿಶೀಲನೆಗೆ ವಿಧಿಸಲಾಗಿದ್ದ ನಿಬಂಧನೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಡಿಲಗೊಳಿಸಿರುವುದು ಕಾನೂನು ನಿಯಮ ಪಾಲಿಸುವ ನಾಗರಿಕರಿಗೆ ಅನುಕೂಲ ಕಲ್ಪಿಸಿದರೆ, ಅಡ್ಡದಾರಿಯಲ್ಲಿ ವಿದೇಶಕ್ಕೆ ಹಾರುವ ಕ್ರಿಮಿನಲ್​ಗಳಿಗೂ ವರದಾನವಾಗುವ ಸಾಧ್ಯತೆಯಿದೆ. ಕಠಿಣ ಕಾನೂನುಗಳಿದ್ದಾಗಿಯೂ ಪಾಸ್​ಪೋರ್ಟ್ ಗೋಲ್‍ಮಾಲ್ ದಂಧೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಇಂಥ ಪರಿಸ್ಥಿತಿ ಯಲ್ಲಿ ಇರುವ ನಿಯಮಗಳೇ ಮತ್ತಷ್ಟು ಸಡಿಲಗೊಂಡರೆ ದಂಧೆ ಕೋರರ ಹಾದಿ ಮತ್ತಷ್ಟು ಸಲೀಸಾಗುವುದರಲ್ಲಿ ಅನುಮಾನವೇ ಬೇಡ ಎಂದು ಹಿರಿಯ ಪೊಲೀಸ್ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.

ಗೋಲ್‍ಮಾಲ್ ಹೇಗೆ?: ಅರ್ಜಿಯಲ್ಲಿರುವ ವಿಳಾಸದಲ್ಲಿ ಅಭ್ಯರ್ಥಿ ಇಲ್ಲದಿದ್ದರೂ ಅರ್ಜಿ ತಿರಸ್ಕರಿಸುವಂತಿಲ್ಲ ಎಂಬ ನಿಯಮದಿಂದಾಗಿ ಅರ್ಜಿದಾರ ಯಾವುದೋ ಒಂದು ವಿಳಾಸ ಕೊಟ್ಟು ಪಾಸ್​ಪೋರ್ಟ್ ಪಡೆಯುವ ಸಾಧ್ಯತೆ ಇರುತ್ತದೆ.

ಅರ್ಜಿದಾರ ಹಾಗೂ ಸಾಕ್ಷಿಗಳನ್ನು ಠಾಣೆಗೆ ಕರೆಸಿ ಖುದ್ದು ವಿಚಾರಣೆ ನಡೆಸಿದರೆ ಆತನ ವರ್ತನೆ, ನೀಡುವ ಮಾಹಿತಿಯಿಂದ ಕ್ರಿಮಿನಲ್ ಸಂಚು ಹೊಂದಿದ್ದರೂ ಗೊತ್ತಾಗುತ್ತದೆ. ನಿಯಮ ಸಡಿಲಿಕೆಯಿಂದಾಗಿ ಇನ್ಮುಂದೆ ಇದ್ಯಾವುದಕ್ಕೂ ಅವಕಾಶ ಇರುವುದಿಲ್ಲ.

ಬೀಟ್ ಸಿಬ್ಬಂದಿಗೆ ಹೊಣೆ: ಈವರೆಗೆ ಠಾಣೆಗಳಲ್ಲಿ ಪಾಸ್​ಪೋರ್ಟ್ ಅರ್ಜಿ ಪರಿಶೀಲನೆಗಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿತ್ತು. ಅರ್ಜಿಗಳ ವಿಲೇವಾರಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಇನ್ನು ಮುಂದೆ ಬೀಟ್ ಪದ್ಧತಿ ಅನ್ವಯ ನಿಯೋಜನೆ ಗೊಂಡಿರುವ ಸಿಬ್ಬಂದಿಯೇ ಪರಿಶೀಲಿಸಬೇಕು.

ಅನುಕೂಲವೇನು?

 • ಪೊಲೀಸರು ಲಂಚಕ್ಕೆ ಕೈಯೊಡ್ಡುವುದಕ್ಕೆ ಬ್ರೇಕ್ ಬೀಳುತ್ತದೆ.
 • ಪರಿಶೀಲನೆ ನೆಪದಲ್ಲಿ ಅರ್ಜಿ ವಿಲೇವಾರಿ ವಿಳಂಬ ಮಾಡಲಾಗಲ್ಲ.
 • ಪದೇಪದೆ ಠಾಣೆಗೆ ಕರೆಸಿ ಕಿರಿಕಿರಿ ಉಂಟು ಮಾಡಲು ಆಗಲ್ಲ.

ಡಿಜಿಪಿಗೆ ಕೇಂದ್ರ ಪತ್ರ

ರಾಜ್ಯದಲ್ಲಿ ಪಾಸ್​ಪೋರ್ಟ್ ಪೊಲೀಸ್ ಪರಿಶೀಲನೆ ವಿಚಾರವಾಗಿ ಸಾಕಷ್ಟು ದೂರುಗಳು ಬಂದಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಾದೇಶಿಕ ಪಾಸ್​ಪೋರ್ಟ್ ಅಧಿಕಾರಿ ಭರತ್ ಕುಮಾರ್ ಕುತಾನಿ ಜು.19ರಂದು ಡಿಜಿಪಿ ನೀಲಮಣಿ ಎನ್.ರಾಜು ಅವರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪಾಲಿಸಬೇಕಾದ ಕ್ರಮಗಳ ಕುರಿತು ಡಿಜಿಪಿ ಸುತ್ತೋಲೆ ಹೊರಡಿಸಿದ್ದಾರೆ.

ಈಗಿರುವ ಪ್ರಕ್ರಿಯೆ

 • ಅರ್ಜಿಯಲ್ಲಿ ಕೊಟ್ಟಿರುವ ವಿಳಾಸದಲ್ಲಿ ಅಭ್ಯರ್ಥಿ ಇರುವ ಬಗ್ಗೆ ದೃಢವಾಗಬೇಕು
 • ಪೊಲೀಸರು ವಿಳಾಸಕ್ಕೆ ಹೋದಾಗ ಅರ್ಜಿದಾರರು ಆ ಮನೆಯಲ್ಲಿರಬೇಕು
 • ವಾಸವಿರುವ ಖಚಿತತೆಗಾಗಿ ಅವರ ಮನೆ ಸಮೇತ ಫೋಟೋ ತೆಗೆದುಕೊಳ್ಳಲಾಗುತ್ತದೆ
 • ಗುಣನಡತೆ ಬಗ್ಗೆ ಅಕ್ಕಪಕ್ಕದ ಮನೆಯವರ ಬಳಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹ
 • ಅರ್ಜಿಯಲ್ಲಿ ನಮೂದಿಸಿದ ಇಬ್ಬರು ಸಾಕ್ಷಿಗಳನ್ನು ಠಾಣೆಗೆ ಕರೆಸಿ ಸಹಿ ಪಡೆಯಬೇಕು

ಪರಿಷ್ಕೃತ ನಿಯಮ

 • ಅಭ್ಯರ್ಥಿ ರಾಷ್ಟ್ರೀಯತೆ ಹಾಗೂ ಅಪರಾಧಿಕ ಹಿನ್ನೆಲೆಯಷ್ಟೇ ಪರಿಶೀಲಿಸಬೇಕು
 • ಅರ್ಜಿಯಲ್ಲಿರುವ ವಿಳಾಸದಲ್ಲಿ ಅಭ್ಯರ್ಥಿ ಇಲ್ಲದಿದ್ದರೂ ತಿರಸ್ಕರಿಸುವಂತಿಲ್ಲ
 • ಅಭ್ಯರ್ಥಿಯ ಗುಣನಡತೆ ಬಗ್ಗೆ ಅಕ್ಕಪಕ್ಕದ ಮನೆಯವರ ಬಳಿ ಕೇಳುವಂತಿಲ್ಲ
 • ಮನೆಯ ಫೋಟೋ, ಅರ್ಜಿದಾರ/ಸಾಕ್ಷಿದಾರರ ಫೋಟೋ ಪಡೆಯುವಂತಿಲ್ಲ
 • 1 ರಿಂದ 6 ಪ್ರಶ್ನೆಗಳ ಫಾರಂನಲ್ಲಿ ಅಭ್ಯರ್ಥಿ ಸಹಿ, ಬೆರಳಚ್ಚು ಪಡೆಯುವಂತಿಲ್ಲ
 • ಪಾಸ್​ಪೋರ್ಟ್ ವಿಚಾರಣೆಗಾಗಿ ಅರ್ಜಿದಾರರನ್ನು ಠಾಣೆಗೆ ಕರೆಸುವಂತಿಲ್ಲ
 • ವೋಟರ್, ಆಧಾರ್, ರೇಷನ್, ಪಾನ್​ಕಾರ್ಡಲ್ಲಿ ಒಂದರ ಪರಿಶೀಲನೆ ಸಾಕು