ವಿಜಯಪುರ: ‘ನೀಟ್’ ತೇರ್ಗಡೆಯಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿನಿಗೆ ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.
ನಗರದ ವಿದ್ಯಾರ್ಥಿನಿ ಅಫಿಪಾ ಎಂ. ಮೋಮಿನ್ ನೆರವು ಪಡೆದ ವಿದ್ಯಾರ್ಥಿನಿ. ವಿದ್ಯಾರ್ಥಿನಿಯ ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಸ್ಪಂದಿಸಿದ ಸಚಿವರು, ಕೋರ್ಸ್‌ನ ಸಂಪೂರ್ಣ ವೆಚ್ಚ ಭರಿಸಲು ನಿರ್ಧರಿಸಿದರು. ಅದರಂತೆ ಗುರುವಾರ ಸಚಿವರ ಸಹೋದರ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ವಿದ್ಯಾರ್ಥಿನಿಯನ್ನು ಗೃಹಕಚೇರಿಗೆ ಕರೆಯಿಸಿಕೊಂಡು ಎಂಬಿಬಿಎಸ್ ಕೋರ್ಸ್‌ನ ಮೊದಲು ಕಂತು ರೂ.1,47,150 ಚೆಕ್ ನೀಡಿದರು.
ಮೂಲತಃ ತಿಕೋಟಾ ಪಟ್ಟಣದವರಾದ ಮತ್ತು ಈಗ ವಿಜಯಪುರ ನಗರದ ಜಾಡರ ಗಲ್ಲಿಯಲ್ಲಿ ನೆಲೆಸಿರುವ ಫ್ರಿಜ್ ರಿಪೇರಿ ಕೆಲಸ ಮಾಡುವ ಮಹ್ಮದ್‌ರಫೀಕ್ ಮೋಮಿನ್ ಮತ್ತು ಗೃಹಿಣಿ ನಾಹೆದಾ ಮೋಮಿನ್ ಅವರ ಇಬ್ಬರು ಮಕ್ಕಳಲ್ಲಿ ಹಿರಿಯಳಾದ ಅಫಿಫಾ ಎಂ. ಮೋಮಿನ್ ನೀಟ್ ಪರಿಕ್ಷೆಯಲ್ಲಿ 68970 ನೇ ರ‌್ಯಾಂಕ್ ಗಳಿಸಿದ್ದಾಳೆ. ಈ ವಿದ್ಯಾರ್ಥಿನಿಗೆ ಹಾವೇರಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಸಿಕ್ಕಿದೆ. ಈ ಕೋರ್ಸ್ ಮುಗಿಸಲು ಕಾಲೇಜು ಮತ್ತು ಹಾಸ್ಟೇಲ್ ಶುಲ್ಕ ಹಾಗೂ ಊಟ ಸೇರಿದಂತೆ ಒಟ್ಟು ರೂ. 5,88,600 ತಗುಲಲಿದೆ. ಇದರ ಮೊಲದ ಕಂತಿನ ಚೆಕ್‌ನ್ನು ಸುನೀಲಗೌಡರು ವಿತರಿಸಿದರು.
ವಿದ್ಯಾರ್ಥಿನಿಯ ತಂದೆ ಮಹ್ಮದ್‌ರಫೀಕ್ ಮೋಮಿನ್ ಮತ್ತು ತಾಯಿ ನಾಹೆದಾ ಮೋಮಿನ್ ಮಾತನಾಡಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿನಿ ಕೂಡ ಸದಾ ಅಭಾರಿಯಾಗಿರುವುದಾಗಿ ತಿಳಿಸಿದರು.
ಬಿಎಲ್‌ಡಿಇ ಸಂಸ್ಥೆಯ ಅಕೌಂಟ್ ಸುಪರಿಂಟೆಂಡೆಂಟ್ ಎಸ್.ಎಸ್. ಪಾಟೀಲ, ವಿದ್ಯಾರ್ಥಿನಿಯ ದೊಡ್ಡಪ್ಪ ಅಲ್ಲಾಬಕ್ಷ ಮಕಾದಮ, ಚಿಕ್ಕಪ್ಪ ಹಾಜಿಲಾಲ ಕೊಟ್ಟಲಗಿ ಮತ್ತಿತರರಿದ್ದರು.