25 ಅಪ್ರಾಪ್ತೆಯರ ಕಳ್ಳ ಸಾಗಣೆಯನ್ನು ತಪ್ಪಿಸಿದ ಪ್ರಯಾಣಿಕರ ಟ್ವೀಟ್‌

ನವದೆಹಲಿ: ಮುಜಾಫರ್‌ಪುರ-ಬಾಂದ್ರಾ ಔದ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಗಿಸುತ್ತಿದ್ದ 25 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲು ಟ್ವೀಟ್‌ ನೆರವಾಗಿದೆ.

ಹೌದು, ಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆಗೆ ಮಾಡಿದ ಟ್ವೀಟ್‌ ನಿಂದಾಗಿ ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳಿಂದ 25 ಅಪ್ರಾಪ್ತೆಯರನ್ನು ರಕ್ಷಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.

ಜುಲೈ 5ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತಾನು ಎಸ್‌5 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದು, ಅದೇ ಬೋಗಿಯಲ್ಲಿ 25 ಮಕ್ಕಳಿದ್ದಾರೆ. ಅವರೆಲ್ಲ ಭಯಭೀತರಾಗಿದ್ದು, ಕೆಲವರು ಅಳುತ್ತಿದ್ದಾರೆ. ಅವರನ್ನು ನೋಡಿದರೆ ಮಕ್ಕಳ ಕಳ್ಳಸಾಗಣೆ ಮಾಡುತ್ತಿರುವಂತಿದೆ. ಆದಷ್ಟು ಬೇಗ ಮಕ್ಕಳನ್ನು ಕಾಪಾಡಿ ಎಂದು ರೈಲ್ವೆ ಇಲಾಖೆ ಮತ್ತು ಸಚಿವ ಪಿಯೂಷ್‌ ಗೋಯಲ್‌ಗೆ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಅನ್ನು ಗಮನಿಸಿದ ಇಲಾಖೆ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಸರ್ಕಾರಿ ರೈಲ್ವೇ ಪೋಲಿಸ್ (ಜಿಆರ್​ಪಿ) ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್​​ಪಿಎಫ್​) ನೊಂದಿಗೆ ವಾರಾಣಸಿ ಮತ್ತು ಲಖನೌಗೆ ದೌಡಾಯಿಸಿ ಬಾಲಕಿಯರನ್ನು ರಕ್ಷಿಸಿ, ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ವರದಿಗಳ ಪ್ರಕಾರ ಮಕ್ಕಳ ಕಳ್ಳ ಸಾಗಣೆ ವಿರೋಧಿ ಘಟಕದೊಂದಿಗೂ ಸಂಪರ್ಕ ಸಾಧಿಸಿದ ಸಿವಿಲ್‌ ಡ್ರೆಸ್‌ನಲ್ಲಿ ಬಂದ ಜಿಆರ್‌ಪಿ ಪಡೆಯು ಬಾಲಕಿಯರನ್ನು ರಕ್ಷಿಸಿ ಗೋರಕ್‌ಪುರಕ್ಕೆ ಕರೆದೊಯ್ದಿದ್ದಾರೆ. (ಏಜೆನ್ಸೀಸ್)