ರಸ್ತೆ ಬದಿ ಹೊಂಡಕ್ಕೆ ವಾಲಿದ ಬಸ್

 ಬೇಲೂರು : ಅಡ್ಡ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ವಾಹನವನ್ನು ರಸ್ತೆ ಪಕ್ಕದ ಹೊಂಡಕ್ಕೆ ಇಳಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಚಿಕ್ಕಮಗಳೂರಿನಿಂದ ಬೇಲೂರು-ಹಾಸನ ಮೂಲಕ ಬೆಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ತೆರಳುತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ತಾಲೂಕಿನ ಆಂದಲೆ ಗ್ರಾಮದ ಸಮೀಪ ಹಠಾತ್ ಆಗಿ ಎದುರಿಗೆ ಬೈಕ್ ಸವಾರ ಆಗಮಿಸಿದ್ದಾನೆ.

ತಕ್ಷಣ ಬಸ್ ಚಾಲಕ ಬಸ್ ನಿಯಂತ್ರಿಸಿ ಬೈಕ್‌ಗೆ ಗುದ್ದುವುದನ್ನು ತಪ್ಪಿಸಿ ರಸ್ತೆ ಪಕ್ಕದ ಚಿಕ್ಕ ಹೊಂಡಕ್ಕೆ ಬಸ್ ಇಳಿಸಿದ್ದಾನೆ. ಬಸ್ ಚಾಲಕ ಎಚ್ಚೆತ್ತುಕೊಳ್ಳದಿದ್ದರೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಪ್ರಾಣಾಪಾಯವಾಗುವುದರೊಂದಿಗೆ ಪ್ರಯಾಣಿಕರು ತೊಂದರೆಯಲ್ಲಿ ಸಿಲುಕುತ್ತಿದ್ದರು. ಸದ್ಯ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗ್ರಾಯಗಳಾಗಿದ್ದು, ಬಸ್‌ಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.