ಕಾಂಗ್ರೆಸ್​ನಿಂದ ಮಹಿಳಾ ಮೀಸಲು ರಾಗಾ

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶಕ್ಕೂ ಮೊದಲೇ ಲೋಕಸಭೆ ಚುನಾವಣೆಯತ್ತ ಗಮನ ಹರಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಶಾಸನಸಭೆಗಳಲ್ಲಿ ಮಹಿಳಾ ಮೀಸಲು ಮಸೂದೆ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ಮಹಿಳಾ ಮೀಸಲು ಕಾಯ್ದೆ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನಿರ್ಣಯ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಡಳಿತದಲ್ಲಿರುವ ಪಂಜಾಬ್ ಹಾಗೂ ಮೈತ್ರಿ ಸರ್ಕಾರಗಳಿರುವ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಅವರು ಪತ್ರ ಮುಖೇನ ನಿರ್ದೇಶನ ನೀಡಿದ್ದಾರೆ.

ಸಮಾಜದ ಅನೇಕ ರಂಗಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡುವ ಮಸೂದೆ ಅಂಗೀಕಾರಕ್ಕೆ 2010ರಲ್ಲೇ ಯುಪಿಎ ಸರ್ಕಾರ ಮುಂದಾಗಿತ್ತು. ಆದರೆ 2014ರಲ್ಲಿ 15ನೇ ಲೋಕಸಭೆ ಅವಧಿ ಮುಕ್ತಾಯವಾದ ಕಾರಣ ಮಸೂದೆ ಅಸಿಂಧುವಾಗಿದೆ. ನಂತರವೂ ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳು ಪ್ರಧಾನಿಯವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದೆವು ಎಂದು ರಾಹುಲ್ ಪತ್ರದಲ್ಲಿ ನಮೂದಿಸಿದ್ದಾರೆ.

‘ಹಳೆಯ ಮಸೂದೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ, ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲು ನೀಡುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದರೆ ಅನುಕೂಲವಾಗುತ್ತದೆ. ಮಸೂದೆ ಯನ್ನು ಲೋಕಸಭೆಯಲ್ಲಿ ಮಂಡಿ ಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಒಡಿಶಾ, ಆಂಧ್ರಪ್ರದೇಶ ರಾಜ್ಯಗಳು ನಿರ್ಣಯ ಕೈಗೊಂಡಿವೆ. ನಿಮ್ಮ ಸರ್ಕಾರವೂ ಇದೇ ರೀತಿ ಮಹಿಳೆಯರ ಸಬಲೀಕರಣ ಪರ ಬದ್ಧತೆಯನ್ನು ತೋರ್ಪಡಿಸಬೇಕು’ ಎಂದು ರಾಜ್ಯಕ್ಕೆ ನಿರ್ದೇಶನ ನೀಡಿದ್ದಾರೆ.

ವಿಧಾನ ಮಂಡಲ ಅಧಿವೇಶನ ಸೋಮವಾರ ಬೆಳಗಾವಿಯಲ್ಲಿ ಆರಂಭವಾಗುತ್ತಿರುವ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಯಾವ ನಿರ್ಣಯ ಕೈಗೊಳ್ಳುತ್ತದೆ ಎಂಬುದೀಗ ಕುತೂಹಲ ಕೆರಳಿಸಿದೆ.