ನಾ ಪಾರ್ಟಿ ಬಿಡೋದಿಲ್ಲ..!

ಪರಶುರಾಮ ಭಾಸಗಿ ವಿಜಯಪುರ

‘ನಾ ಪಕ್ಷ ಬಿಡೋದಿಲ್ಲ…. ನಮಗೆ ಯಾರು ಕರೆದೇ ಇಲ್ಲ…. ನಾ ಎಲ್ಲೂ ಹೋಗೋದಿಲ್ಲ… ಇಲ್ಲ… ಇಲ್ಲ… ಇಲ್ಲಾ…..! ಪಕ್ಷ ಬಿಡತೀರಿ ಅಂತಾ ಕೇಳಬೇಡಿ ನೀವು…. ಪಕ್ಷದಲ್ಲೇ ಇದ್ದು ಕೆಲಸ ಮಾಡ್ತೀವಿ ನಾವು…’ !
ಇದೇನಪ್ಪ ಯೋಗರಾಜ ಭಟ್ಟರ ಹಾಡಿನ ಲಿರಿಕ್ಸ್ ಕದ್ದಿದ್ದಾರಲ್ಲ ಅಂತ ಬೈಯ್ಕೋಬೇಡಿ. ಆಪರೇಷನ್ ಕಮಲದ ಹಿನ್ನೆಲೆ ಜಿಲ್ಲೆ ರಾಜಕಾರಣದಲ್ಲಿ ಕೇಳಿ ಬರುತ್ತಿರುವ ಹೊಸ ಹಾಡು ಇದು.
ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನುಂಟು ಮಾಡಿರುವ ಲೋಕಸಭೆ ಚುನಾವಣೆ ಫಲಿತಾಂಶದ ಪರಿಣಾಮ ಹಿನ್ನೆಲೆ ನಿರೀಕ್ಷಿತ ‘ಆಪರೇಷನ್’ ಕಾರ್ಯಾಚರಣೆಯಲ್ಲಿ ಶಾಸಕರಿಬ್ಬರ ಹೆಸರು ಪದೇ ಪದೇ ಮುನ್ನೆಲೆಗೆ ಬರುತ್ತಿದೆ.
ಆದರೆ, ಶಾಸಕರು ಮಾತ್ರ ‘ಇಲ್ಲ…ಇಲ್ಲ…ಇಲ್ಲಾ….ನಾ ಪಕ್ಷ ಬಿಡೋದಿಲ್ಲ…’ ಎಂಬ ರಾಗ ತೆಗೆಯುತ್ತಿದ್ದಾರೆ. ಅದಾಗ್ಯೂ ರಾಜ್ಯಮಟ್ಟದಲ್ಲಿ ಇವರ ಹೆಸರು ರಾರಾಜಿಸುತ್ತಲೇ ಇದೆ.

ಯಾರು ಆ ಶಾಸಕರು?
ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವಾಣ್ ಹಾಗೂ ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲರ ಹೆಸರು ಆಗಾಗ ಚರ್ಚೆಗೆ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಶಾಸಕ ದೇವಾನಂದ ಚವಾಣ್ ಮತ್ತು ಶಿವಾಜಿ ಮೆಟಗಾರ ಎಂಬುವರ ದೂರವಾಣಿ ಸಂಭಾಷಣೆಯಲ್ಲಿ ಬಿಜೆಪಿ ಶಾಸಕ ಸೋಮನಗೌಡರು ಸಚಿವರೊಬ್ಬರ ಮಾತಿಗೆ ಮಣಿದು ಪಕ್ಷ ತೊರೆಯಲೂ ಸಿದ್ಧರಿದ್ದಾರೆಂಬ ರಹಸ್ಯ ಬಿಚ್ಚಿಟ್ಟಿದ್ದರು. ಇದು ಕಾಂಗ್ರೆಸ್‌ನ ಪ್ರಭಾವಿ ಸಚಿವರೊಂದಿಗೆ ಸೋಮನಗೌಡರಿಗಿದ್ದ ಅನ್ಯೋನ್ಯ ಸಂಬಂಧವನ್ನು ಬಿಚ್ಚಿಟ್ಟಿತ್ತು. ಆಗ ಸೋಮನಗೌಡರು ಮಾತ್ರ ‘ಇಲ್ಲಾ ಇಲ್ಲಾ ಇಲ್ಲಾ….ನಾ ಪಕ್ಷ ಬಿಡೋದಿಲ್ಲ’ ಎಂಬ ರಾಗಾ ತೆಗೆದಿದ್ದರು.

ಶಾಸಕ ಮತ್ತು ಸಚಿವರು
ಇದೀಗ ಜೆಡಿಎಸ್ ಶಾಸಕ ದೇವಾನಂದ ಚವಾಣ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಬಿಜೆಪಿಯ ಉದ್ದೇಶಿತ ‘ಆಪರೇಷನ್ ಕಮಲ’ ಕಾರ್ಯಾಚರಣೆ ಪಟ್ಟಿಯಲ್ಲಿ ದೇವಾನಂದರ ಹೆಸರಿದೆ ಎಂಬ ಮಾತು ಕೇಳಿ ಬರತೊಡಗಿದೆ. ಆದರೆ, ದೇವಾನಂದ ಚವಾಣ್ ಅವರು ಈ ಹಿಂದೆ ಹೇಳಿದ್ದ ‘ನಾ ಎಲ್ಲೂ ಹೋಗೋದಿಲ್ಲ’ ಎಂಬ ಸಾಲನ್ನೇ ಪುನರುಚ್ಚರಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಸಹ ಕಾಂಗ್ರೆಸ್‌ನ ಪ್ರಭಾವಿ ಸಚಿವರು ಬಿಜೆಪಿಗೆ ಬಂದರೆ ಜಲಸಂಪನ್ಮೂಲ ಖಾತೆ ನೀಡುವ ಭರವಸೆ ನೀಡಿದ್ದರು. ಆದರೆ, ಸಚಿವರು ಮಾತ್ರ ‘ನೋ ಕಮೆಂಟ್ ನೋ ಥ್ಯಾಂಕ್ಸ್’ ಎಂಬ ಮೃದು ಹೇಳಿಕೆ ನೀಡಿದ್ದರು. ಇನ್ನು ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದು ಶಾಸಕರಾಗಿ ಸಚಿವರಾಗಿರುವ ಮತ್ತು ಕಾಂಗ್ರೆಸ್- ಜೆಡಿಎಸ್ ಎರಡನ್ನೂ ತ್ಯಜಿಸಿರುವ ಹಾಲಿಗಳ ಸುತ್ತಲ್ಲೂ ಅನುಮಾನದ ಹುತ್ತ ಬೆಳೆಯುತ್ತಿದೆ.
ಅದೇನೇ ಚರ್ಚೆಗಳು ನಡೆಯಲಿ…..ಜಿಲ್ಲೆ ರಾಜಕಾರಣದಲ್ಲಿ ಮಾತ್ರ ಎಲ್ಲರ ಬಾಯಲ್ಲೂ ಒಂದೇ ರಾಗ ‘ಇಲ್ಲ….ಇಲ್ಲ….ಇಲ್ಲಾ…ನಾ ಪಕ್ಷ ಬಿಡೋದಿಲ್ಲ….’

ಆಪ್‌ರೇಷನ್‌ಗೆ ಬಲಿಯಾಗಲ್ಲ
ನಾನು ಆಪರೇಷನ್‌ಗೆ ಬಲಿಯಾಗಲ್ಲ. ಸಿಎಂ ಕುಮಾರಸ್ವಾಮಿ ಅವರು ನನಗೆ ಎಲ್ಲವನ್ನೂ ಕೊಟ್ಟಿದ್ದು, ಅವರನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದು ಶಾಸಕ ದೇವಾನಂದ ಚವಾಣ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಖಾ ಸುಮ್ಮನೆ ತಮ್ಮ ಹೆಸರು ಎಳೆದು ತರಲಾಗುತ್ತಿದೆ. ಜೆಡಿಎಸ್ ನನಗೆ ರಾಜಕೀಯ ಜನ್ಮ ನೀಡಿದೆ. ಸಿಎಂ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರಾದ ವಿಶ್ವನಾಥ ಅವರು ನನಗೆ ಸಾಕಷ್ಟು ಅವಕಾಶ ನೀಡಿದ್ದಾರೆ. ನಾನು ನಿರ್ಗತಿಕನಾಗಿದ್ದಾಗ ಕುಮಾರಣ್ಣ ಅವಕಾಶ ಕೊಟ್ಟು ಬೆಳೆಸಿದ್ದಾರೆ. ಹೀಗಾಗಿ ಅವರನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಲಾರೆ ಎಂದಿದ್ದಾರೆ.
ಸಮಾಜದ ಕೆಲ ಹಿತೈಷಿಗಳು ಬಿಜೆಪಿ ಸೇರುವ ಬಗ್ಗೆ ಕೇಳಿದ್ದು ನಿಜ. ಆದರೆ, ನಾನದನ್ನು ನಯವಾಗಿ ತಿರಸ್ಕರಿಸಿದ್ದೇನೆ. ಇನ್ನುಳಿದ ಯಾವುದೇ ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿಲ್ಲ ಎಂದರು.

Leave a Reply

Your email address will not be published. Required fields are marked *