ಮುದ್ದೇಬಿಹಾಳ: ಬೆಳಗಾವಿಯಲ್ಲಿ ಜ.21 ರಂದು ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ ಸಾವಿರಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರು ಭಾಗವಹಿಸಲು ಸಿದ್ದರಾಗಿದ್ದು ಈಗಾಗಲೇ ಎಲ್ಲರಿಗೂ ಸಮಾವೇಶಕ್ಕೆ ಬರುವ ಕುರಿತು ಆಮಂತ್ರಣ ನೀಡಲಾಗಿದೆ ಎಂದು ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ ಹುಡ್ಕೋದಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಸಮಾವೇಶದ ಮತಕ್ಷೇತ್ರ ಉಸ್ತುವಾರಿ ಅಜಲಪುರ ಶಾಸಕ ಎಂ.ಐ.ಪಾಟೀಲ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಮಾವೇಶ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ಅಂದಾಜು 80ಕ್ಕೂ ಹೆಚ್ಚು ವಾಹನಗಳಲ್ಲಿ ಗ್ರಾಮೀಣ ಕಾರ್ಯಕರ್ತರು ಬೆಳಗಾವಿಗೆ ತೆರಳಲಿದ್ದಾರೆ. ಗಾಂಧಿ ಭಾರತಕ್ಕೆ ಮರುಚಾಲನೆ ಸಿಗಲಿರುವ ಅಂದಿನ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ, ಅನ್ಯ ರಾಜ್ಯಗಳ ನಾಯಕರು ಪಾಲ್ಗೊಳ್ಳುವರು ಎಂದರು.
ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ನಿಧನದ ಹಿನ್ನೆಲೆಯಲ್ಲಿ ಸಮಾವೇಶ ಮುಂದೂಡಲಾಗಿತ್ತು. ಪಕ್ಷದ ಎಲ್ಲ ಪದಾಧಿಕಾರಿಗಳು, ನಾಯಕರು, ಕಾರ್ಯಕರ್ತರು ತಮ್ಮ ವಾರ್ಡ್, ಬೂತ್‌ಗಳಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟು ಜನರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವ ಕೆಲಸ ಮಾಡಬೇಕು ಎಂದರು.
ಶಾಸಕ ಎಂ.ಐ.ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಅಧಿವೇಶನ ನಡೆಸಿದ 100 ವರ್ಷಗಳ ಸವಿನೆನಪಿಗಾಗಿ ಮತ್ತು ಅವರ ಸ್ಮರಣೆಯಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಕಾರ್ಯಕರ್ತರೇ ಶಕ್ತಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪಕ್ಷದ ಮುಖಂಡರು ಸಮಾವೇಶಕ್ಕೆ ಬರುವ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಅಜಲಪುರ ಜಿಪಂ ಮಾಜಿ ಸದಸ್ಯ ನಿತೀನ್ ಪಾಟೀಲ ಇತರರಿದ್ದರು.