ಇಂದು ಸೂರ್ಯಗ್ರಹಣ

ನವದೆಹಲಿ: ಕಳೆದ ತಿಂಗಳ 27ರಂದು ನಡೆದಿದ್ದ ಖಗ್ರಾಸ ಚಂದ್ರಗ್ರಹಣದ ನಂತರ ಬಾನಂಗಳದಲ್ಲಿ ಮತ್ತೊಂದು ಕೌತುಕ ನಡೆಯಲಿದೆ. ಶನಿವಾರ ಭಾಗಶಃ ಸೂರ್ಯಗ್ರಹಣ ಸಂಭವಿಸಲಿದ್ದು, ಮೂರೂವರೆ ತಾಸಿನ ಈ ಖಗೋಳ ವಿದ್ಯಮಾನ ಭೂಖಂಡದ ಉತ್ತರಾರ್ಧಗೋಳದ ಹಲವು ದೇಶಗಳಲ್ಲಿ ಗೋಚರಿಸಲಿದೆ. ಆದರೆ, ಭಾರತದಲ್ಲಿ ಕಾಣಿಸುವುದಿಲ್ಲ.

ಗ್ರೀನ್​ವಿಚ್ ಮೀನ್ ಟೈಂ (ಜಿಎಂಟಿ) ಕಾಲಮಾನ ಪ್ರಕಾರ ಬೆಳಗ್ಗೆ 9.02ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 1.32) ಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 12.32ಕ್ಕೆ (ಭಾರತೀಯ ಕಾಲಮಾನ ಸಂಜೆ 5.02) ಮುಗಿಯಲಿದೆ.

ವರ್ಷದ ಕೊನೆಯ ಸೂರ್ಯಗ್ರಹಣ: ಪ್ರಸಕ್ತ ವರ್ಷ ಈಗಾಗಲೇ ಎರಡು ಸೂರ್ಯಗ್ರಹಣ ಸಂಭವಿಸಿದೆ. ಫೆ. 15ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು. ಅಟ್ಲಾಂಟಿಕ್ ಸಾಗರ, ಅಂಟಾರ್ಟಿಕಾ ಮತ್ತು ದಕ್ಷಿಣ ಅಮೆರಿಕದಲ್ಲಿ ಇದು ಗೋಚರವಾಗಿತ್ತು. ಜುಲೈ 13ರಂದು ಸಂಭವಿಸಿದ ಸೂರ್ಯ ಗ್ರಹಣ ಆಸ್ಟ್ರೇಲಿಯಾದ ದಕ್ಷಿಣ ಸಮುದ್ರದಿಂದ ಅಂಟಾರ್ಟಿಕಾದ ವರೆಗೆ ಗೋಚರಿಸಿತು. ಶನಿವಾರ ನಡೆಯಲಿರುವ ಸೂರ್ಯಗ್ರಹಣ ವರ್ಷದ ಕೊನೆಯ ಗ್ರಹಣವಾಗಿದೆ. ಸೂರ್ಯ, ಭೂಮಿ ಮಧ್ಯೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.

ಗೋಚರ ಎಲ್ಲಿಲ್ಲಿ?

ಕೆನಡಾ, ಈಶಾನ್ಯ ಅಮೆರಿಕ, ಗ್ರೀನ್​ಲೆಂಡ್, ಯುರೋಪ್​ನ ಉತ್ತರ ಭಾಗ, ಸೈಬೀರಿಯಾದ ಪೂರ್ವ ಭಾಗ, ಚೀನಾದ ಕೆಲವು ಪ್ರದೇಶ, ಏಷ್ಯಾದ ಮಧ್ಯ ಭಾಗಗಲ್ಲಿ ಗ್ರಹಣ ಕಾಣಿಸಲಿದೆ.

Leave a Reply

Your email address will not be published. Required fields are marked *