More

    ಸಂಸದೀಯ ಕಾರ್ಯದರ್ಶಿ ನೇಮಕ ಕಾಯ್ದೆ ಅಸಿಂಧು

    ಬೆಂಗಳೂರು: ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ (ವೇತನ-ಭತ್ಯೆ) ಕಾಯ್ದೆ- 1963 ಹಾಗೂ 1999ರ ತಿದ್ದುಪಡಿ ಕಾಯ್ದೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಶನಿವಾರ ಮಹತ್ವದ ಆದೇಶ ನೀಡಿದೆ. ಇದರೊಂದಿಗೆ ಅತೃಪ್ತರು ಹಾಗೂ ಭಿನ್ನಮತೀಯರಿಗೆ ಸಂಸದೀಯ ಕಾರ್ಯದರ್ಶಿಗಳ ಹುದೆ ಕಲ್ಪಿಸುವ ಸರ್ಕಾರಗಳ ಪ್ರವೃತ್ತಿಗೆ ಕಡಿವಾಣ ಬಿದ್ದಿದೆ.

    ಬೆಂಗಳೂರು ನಿವಾಸಿ ಎಂ.ಬಿ. ಆದಿನಾರಾಯಣ ಹಾಗೂ ವಕೀಲ ಕೆ.ಬಿ. ವಿಜಯಕುಮಾರ್ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿ 2019ರ ನ.14ರಂದು ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಆದೇಶ ಪ್ರಕಟಿಸಿದೆ.

    ಸಂಸದೀಯ ಕಾರ್ಯದರ್ಶಿಗಳ (ವೇತನ ಮತ್ತು ಉಪದಾನ ಅವಕಾಶಗಳು) ಕಾಯ್ದೆ-1963 ಹಾಗೂ 1999ರ 7ನೇ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಶಾಸನಾತ್ಮಕ ಅರ್ಹತೆ ಕರ್ನಾಟಕ ಶಾಸನ ಸಭೆಗೆ ಇಲ್ಲ. ಅಲ್ಲದೇ ಇದು ಸಂವಿಧಾನ ನಿಯಮಗಳಿಗೆ ವ್ಯತಿರಿಕ್ತವಾಗಿದೆ. ಆದ್ದರಿಂದ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶ ಸರ್ಕಾರ ಪತನವಾಗಿದ್ದರಿಂದ ತಾನಾಗಿಯೇ ಅನೂರ್ಜಿತಗೊಂಡಿದೆ. ಹೀಗಾಗಿ ಹಿಂದಿನ ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂಬ ಅರ್ಜಿದಾರರ ಮನವಿ ಮಾನ್ಯ ಮಾಡಲು ಹೈಕೋರ್ಟ್ ನಿರಾಕರಿಸಿದೆ.

    ಶಾಸಕರಾದ ಮಹಾಂತೇಶ್ ಕೌಜಲಗಿ, ಡಾ.ಅಂಜಲಿ ಹೇಮಂತ ನಿಂಬಾಳ್ಕರ್, ರೂಪಕಲಾ ಎಂ.ಶಶಿಧರ್, ರಾಘವೇಂದ್ರ ಬಸವರಾಜ್ ಹಿಟ್ನಾಳ್, ಡಿ.ಎಸ್.ಹೂಲಗೇರಿ, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬರ್, ಐವಾನ್ ಡಿಸೋಜಾಕೆ.ಗೋವಿಂದರಾಜ್ ಅವರನ್ನು ವಿವಿಧ ಇಲಾಖೆಗಳ ಸಂಸದೀಯ ಕಾರ್ಯದರ್ಶಿಗಳನ್ನಾಗಿ ಹಿಂದಿನ ಸಿಎಂ ಕುಮಾರಸ್ವಾಮಿ ನೇಮಿಸಿದ್ದನ್ನು ಪ್ರಶ್ನಿಸಿ ಎಂ.ಬಿ. ಆದಿನಾರಾಯಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

    ಸಂವಿಧಾನದ ಪರಿಚ್ಛೇದ 164 (1-ಎ) ಪ್ರಕಾರ ಶಾಸನಭೆಯ ಒಟ್ಟು ಶಾಸಕರ ಸಂಖ್ಯೆಯಲ್ಲಿ ಸಚಿವರ ಸ್ಥಾನಗಳು ಶೇ.15 ಮೀರಬಾರದು ಎಂದಿದೆ. ಆದರೆ, ಸಚಿವ ದರ್ಜೆ ಸ್ಥಾನಮಾನ ನೀಡಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದು ಸಂವಿಧಾನದ ಪರಿಚ್ಛೇದ 164 (1-ಎ)ಗೆ ವಿರುದ್ಧವಾಗಿದೆ. ‘ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ (ವೇತನ-ಭತ್ಯೆ) ಕಾಯ್ದೆ-1963’ ಹಾಗೂ 1999ರ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬಾಹಿರ ಎಂದು ಘೊಷಿಸಿ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

    ರಾಜಕೀಯ ಕಾರ್ಯದರ್ಶಿ ಗೊಂದಲ

    ಹೈಕೋರ್ಟ್​ನಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ರದ್ದು ಮಾಡಿರುವುದರಿಂದ ಪ್ರಸ್ತುತ ಸರ್ಕಾರ ನೇಮಕ ಮಾಡಿರುವ ರಾಜಕೀಯ ಕಾರ್ಯದರ್ಶಿ ಹುದ್ದೆಗಳ ಭವಿಷ್ಯವೇನು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಸಂಸದೀಯ ಕಾರ್ಯದರ್ಶಿಗಳ ಕಾಯ್ದೆಯನ್ನು ಹೈಕೋರ್ಟ್ ರದ್ದು ಮಾಡಿದೆ. ಆದ್ದರಿಂದ ಅದು ರಾಜಕೀಯ ಕಾರ್ಯದರ್ಶಿ ಹಾಗೂ ಸಚಿವ ಸ್ಥಾನಮಾನ ಪಡೆದಿರುವ ಸಲಹೆಗಾರರಿಗೂ ಅನ್ವಯವಾಗುತ್ತದೆ ಎಂಬುದು ಸರ್ಕಾರದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ. ಮೂವರು ರಾಜಕೀಯ ಕಾರ್ಯದರ್ಶಿಗಳು, ಒಬ್ಬರು ರಾಜಕೀಯ ಸಲಹೆಗಾರರು, ಒಬ್ಬರು ಮಾಧ್ಯಮ ಸಲಹೆಗಾರರು ಹಾಗೂ ಬೇರೆ ಬೇರೆ ಸಲಹೆಗಾರರು ಇದ್ದಾರೆ. ಇನ್ನೂ ಕೆಲವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡುವ ಬಗ್ಗೆಯೂ ಬಿಜೆಪಿಯಲ್ಲಿ ಚರ್ಚೆಗಳಾಗಿದ್ದವು. ಆದರೆ ಹೈಕಮಾಂಡ್ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಸಲಹೆ ಪಡೆದು ಮುಂದುವರೆಯಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts