ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕ ಯತ್ನ

ಅಜ್ಜಂಪುರ: ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟ ತೃಪ್ತಿ ನಮಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಶಿವನಿ ಆರ್​ಆಸ್ ಗ್ರಾಮದಲ್ಲಿ ಭಾನುವಾರ ವಿಶ್ವಮಾನವ ಎಕ್ಸ್ ಪ್ರೆಸ್​ರೈಲು ನಿಲುಗಡೆಗೆ ಚಾಲನೆ ನೀಡಿ ಮಾತನಾಡಿ, ಶಿವನಿ ಮತ್ತು ಅಜ್ಜಂಪುರದಲ್ಲಿ ಹಲವು ಎಕ್ಸ್​ಪ್ರೆಸ್ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಶಿವನಿ ಆರ್​ಎಸ್ ಗ್ರಾಮದಲ್ಲಿ ರೈಲ್ವೇ ಕಳಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ತರೀಕೆರೆ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಲು ಭೂಮಿ ಪೂಜೆ ನಡೆಸಲಾಗಿದೆ. ಕೊಂಕಣ ಮತ್ತು ನೈರುತ್ಯ ವಿಭಾಗದಲ್ಲಿ ದ್ವಿಪಥ ಹಳಿ ನಿರ್ಮಾಣ ಮತ್ತು ವಿದ್ಯುದೀಕರಣಕ್ಕೆ ಆದ್ಯತೆ ನೀಡಿದ್ದು, ಪೂರ್ಣಗೊಂಡ ಬಳಿಕ ಮತ್ತಷ್ಟು ಎಕ್ಸ್​ಪ್ರೆಸ್ ರೈಲುಗಳಿಗೆ ನಿಲುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಶಂಭೈನೂರು ಆನಂದಪ್ಪ ಮಾತನಾಡಿ, ಸಂಸದರು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ್ದಾರೆ. ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ ಅವರನ್ನು ಮುಂಬರುವ ಚುನಾವಣೆಗಳಲ್ಲಿ ಬೆಂಬಲಿಸಬೇಕು ಎಂದರು.

ರೈಲು ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಗ್ರಾಮಸ್ಥರು ಹೂ-ಹಾರ ಹಾಕಿ ತೆಂಗಿನ ಕಾಯಿ ಹೊಡೆದು ಪೂಜೆ ಸಲ್ಲಿಸಿದರು. ರೈಲಿನ ಬಳಿ ನಿಂತು ಪೋಟೋ ತೆಗೆದುಕೊಂಡು ಸಂಭ್ರಮಿಸಿದರು.

ರೈಲು ನಿಲುಗಡೆ ಸಮಯ :ರೈಲುಸಂಖ್ಯೆ 17325 ಹುಬ್ಬಳ್ಳಿ-ಅಶೋಕಪುರಂ ವಿಶ್ವಮಾನವ ಎಕ್ಸ್​ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 9ಕ್ಕೆ ಹೊರಟು ಮಧ್ಯಾಹ್ನ 1.43 ಕ್ಕೆ ಆರ್​ಎಸ್ ಶಿವನಿ ರೈಲು ನಿಲ್ದಾಣಕ್ಕೆ ಆಗಮಿಸಿ 1.44 ಕ್ಕೆ ಹುಬ್ಬಳಿ ಕಡೆ ನಿರ್ಗಮಿಸಲಿದೆ. ರೈಲುಸಂಖ್ಯೆ 17326 ಅಶೋಕಪುರಂ-ಹುಬ್ಬಳ್ಳಿ ವಿಶ್ವಮಾನವ ಎಕ್ಸ್​ಪ್ರೆಸ್ ರೈಲು ಪ್ರತಿದಿನ ಹುಬ್ಬಳಿ ನಿಲ್ದಾಣವನ್ನು ಬೆಳಗ್ಗೆ 7 ಗಂಟೆಗೆ ಹೊರಟು ಮಧ್ಯಾಹ್ನ 12.15 ಕ್ಕೆ ಆರ್​ಎಸ್ ಶಿವನಿ ಗ್ರಾಮಕ್ಕೆ 12.16ಕ್ಕೆ ಬೆಂಗಳೂರು ಕಡೆಗೆ ಹೋಗಲಿದೆ ಎಂದು ರೈಲ್ವೆ ಇಲಾಖೆ ಎಂಡಿ ಆರ್.ಎಂ.ಅಜಯ್ ಸಿನ್ಹಾ ಮಾಹಿತಿ ನೀಡಿದ್ದಾರೆ.