ಮೊದಲ ದಿನವೇ ಗದ್ದಲ

ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು. ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ, ಪ್ರತಿಪಕ್ಷಗಳು ಪ್ರತಿಭಟನೆ ಆರಂಭಿಸಿದವು. ಕಾಂಗ್ರೆಸ್, ಟಿಡಿಪಿ, ಸಮಾಜವಾದಿ ಪಕ್ಷದ ಸಂಸದರು ಸ್ಪೀಕರ್ ಮುಂಭಾಗಕ್ಕೆ ಬಂದು ಧರಣಿ ಆರಂಭಿಸಿದರು.

ಪ್ರಶ್ನೋತ್ತರ ಅವಧಿ ಬಳಿಕ ಇನ್ನಿತರ ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸ್ಪೀಕರ್ ಹೇಳಿದರೂ, ಸಂಸದರು ಪ್ರತಿಭಟನೆ ಮುಂದುವರಿಸಿದರು. ನಮಗೆ ನ್ಯಾಯ ಬೇಕು ಎಂಬ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು. ಗದ್ದಲದ ನಡುವೆಯೂ ಪ್ರಶ್ನೋತ್ತರ ಅವಧಿಯನ್ನು ಸ್ಪೀಕರ್ ಮುಂದುವರಿಸಿದರು. ಇತ್ತೀಚೆಗೆ ನಿಧನರಾದ ಮಾಜಿ ಸಂಸದರು, ಗಣ್ಯರು ಮತ್ತಿತರರಿಗೆ ಗೌರವ ಸಲ್ಲಿಸಲಾಯಿತು.

ರಾಜ್ಯಸಭೆಯಲ್ಲೂ ಗದ್ದಲ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಆಗ್ರಹಿಸಿ ಟಿಡಿಪಿ ಸಂಸದರು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಮುಂದಿನ ಕಲಾಪದಲ್ಲಿ ಈ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದರು. ಈ ವಿಚಾರವನ್ನು ತಕ್ಷಣವೇ ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಆಗ್ರಹಿಸಿ ಸಂಸದರು ಪ್ರತಿಭಟನೆ ಮುಂದುವರಿಸಿದರು. ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು ವೆಂಕಯ್ಯ ನಾಯ್ಡು ಕೆಲಕಾಲ ಮುಂದೂಡಿದರು.

ಎಲ್ಲ ವಿಚಾರ ಚರ್ಚೆಗೆ ಸಿದ್ಧ ಎಂದ ಪ್ರಧಾನಿ

ರಾಜಕೀಯ ಪಕ್ಷಗಳು ಪ್ರಸ್ತಾಪಿಸುವ ಯಾವುದೇ ವಿಚಾರ ಕುರಿತು ಚರ್ಚೆಗೆ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ ಹಿತದೃಷ್ಟಿಯಿಂದ ಅನೇಕ ವಿಷಯಗಳ ಕುರಿತು ಚರ್ಚೆ ಆಗಬೇಕಿದೆ. ಸಂಸತ್ ಕಲಾಪದ ಸದ್ಬಳಕೆ ಮಾಡಿಕೊಂಡು, ಸಂಸದರು ಉತ್ತಮ ರೀತಿಯಲ್ಲಿ ಚರ್ಚೆಯಲ್ಲಿ ಭಾಗಿಯಾಗಿ ಅಧಿವೇಶನದ ಉತ್ಪಾದಕತೆ ಹೆಚ್ಚಿಸುತ್ತಾರೆ ಎಂಬ ಭರವಸೆ ಇದೆ. ಉತ್ತಮ ಸಲಹೆಗಳಿಂದ ಸರ್ಕಾರದ ನೀತಿ ನಿರೂಪಣೆಗೆ ಸಹಕಾರಿಯಾಗಲಿದೆ. ಈ ವರ್ಷ ಕೆಲ ರಾಜ್ಯಗಳಲ್ಲಿ ಅತಿಯಾದ ಮಳೆಯಿಂದಾಗಿ ಅನಾಹುತ ಸಂಭವಿಸಿವೆ. ಮತ್ತೆ ಹಲವು ಪ್ರದೇಶಗಳಲ್ಲಿ ಬರಗಾಲ ಉಂಟಾಗಿದೆ. ಈ ಕುರಿತು ಸಂಸತ್​ನಲ್ಲಿ ಹೆಚ್ಚಿನ ಚರ್ಚೆ ನಡೆಯಬೇಕಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಕಲಾಪದ ವೇಳೆ ಎಲ್ಲ ರಾಜಕೀಯ ಪಕ್ಷದ ಸಂಸದರು ಆದರ್ಶವಾಗಿ ವರ್ತಿಸುವ ಮೂಲಕ ರಾಜ್ಯಗಳ ವಿಧಾನಸಭೆ ಸದಸ್ಯರಿಗೆ ಮಾದರಿಯಾಗುತ್ತಾರೆ ಎಂಬ ನಂಬಿಕೆಯಿದೆ ಎಂದರು.

ರಾಜ್ಯಸಭೆಯಲ್ಲಿ ಏನಾಯ್ತು?

# 2016ರ ನಂತರದ ನಿರುದ್ಯೋಗ ಅಂಕಿಅಂಶಗಳನ್ನು ಮುಂದಿನ ಎರಡು ತಿಂಗಳಲ್ಲಿ ಪ್ರಕಟಿಸುವುದಾಗಿ ಸರ್ಕಾರದ ಲಿಖಿತ ಹೇಳಿಕೆ

# ಎಸ್​ಸಿ, ಎಸ್​ಟಿ ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾಗಿಲ್ಲ. ಈ ಸಮುದಾಯದ ಹಕ್ಕನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ ಸಚಿವ ರಾಜನಾಥ ಸಿಂಗ್ ಹೇಳಿಕೆ

# ಕಳೆದ ಮೇ, ಜೂನ್ ತಿಂಗಳಲ್ಲಿ ಪ್ರವಾಹ ಹಾಗೂ ಸಿಡಿಲಿನಿಂದಾಗಿ ದೇಶಾದ್ಯಂತ 1006 ಜನರ ಸಾವು ಎಂದು ಸಚಿವ ಕಿರಣ್ ರಿಜಿಜು ಮಾಹಿತಿ

# ಅಮಾಯಕರ ಹತ್ಯೆ (ಲಿಂಚಿಂಗ್) ಕುರಿತು ನಿಖರ ಅಂಕಿಅಂಶ ಇಲ್ಲ ಎಂದ ಕೇಂದ್ರ ಸರ್ಕಾರ

# ಜೂನ್ 30ರವರೆಗೆ ಇಟಿಎಫ್​ಗಳಲ್ಲಿ ಎಪಿಎಫ್​ಒ ದಿಂದ 50 ಸಾವಿರ ಕೋಟಿ ರೂ. ಹೂಡಿಕೆ

ಕಡ್ಡಾಯ ಉತ್ತೀರ್ಣ ನೀತಿ ಬಂದ್?

ಶಾಲೆಗಳಲ್ಲಿ ಈಗ ಚಾಲ್ತಿಯಲ್ಲಿರುವ ಕಡ್ಡಾಯ ಉತ್ತೀರ್ಣ ನೀತಿಯನ್ನು ರದ್ದುಗೊಳಿಸುವ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ. ಶಿಕ್ಷಣ ಹಕ್ಕು ಕಾಯ್ದೆಗೆ ಈ ತಿದ್ದುಪಡಿ ತರಲಾಗಿದೆ. ಆದರೆ ಕಡ್ಡಾಯ ಉತ್ತೀರ್ಣ ನೀತಿಯನ್ನು ಮುಂದುವರಿಸುವುದು ಅಥವಾ ರದ್ದುಗೊಳಿಸುವುದು ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸಬೇಕಿದೆ ಎಂದು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಮಾನವ ಕಳ್ಳಸಾಗಾಣಿಕೆ ತಡೆ ಮಸೂದೆ

ಮಾನವ ಕಳ್ಳಸಾಗಾಣಿಕೆ ನಿಗ್ರಹಕ್ಕೆ ಸಮಗ್ರ ನೀತಿ ಒಳಗೊಂಡ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಸಂತ್ರಸ್ತರ ರಕ್ಷಣೆ ಹಾಗೂ ಪುರ್ನವಸತಿಗೆ ಆದ್ಯತೆ ನೀಡಲಾಗಿದೆ. ಅಪರಾಧಿಗಳಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಜತೆಗೆ ಕನಿಷ್ಠ 1 ಲಕ್ಷ ರೂ. ದಂಡ ವಿಧಿಸುವ ಪ್ರಸ್ತಾಪನೆ ಇದರಲ್ಲಿದೆ.

ಹೊಸ ಸದಸ್ಯರ ಪ್ರಮಾಣ

ರಾಜ್ಯಸಭೆಗೆ ಇತ್ತೀಚೆಗೆ ನಾಮಕರಣಗೊಂಡಿರುವ ರಾಕೇಶ್ ಸಿನ್ಹಾ, ಸೋನಲ್ ಮಾನ್​ಸಿಂಗ್, ರಘುನಾಥ ಮಹಾಪಾತ್ರಾ ಸಹಿತ 7 ಸದಸ್ಯರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು.

ಆರ್ಥಿಕ ಅಪರಾಧ ಮಸೂದೆ

ಭಾರತದಲ್ಲಿ ಆರ್ಥಿಕ ಅಪರಾಧ ಎಸಗಿ, ವಿದೇಶದಲ್ಲಿ ತಲೆಮರೆಸಿಕೊಳ್ಳುವ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೆ ಅವಕಾಶ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ಹಣಕಾಸು ಸಚಿವ ಪಿಯೂಷ್ ಗೋಯೆಲ್ ಮಸೂದೆ ಮಂಡಿಸಿ ದ್ದಾರೆ. ಈಗಾಗಲೇ ಈ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಿದೆ.