ಅವಿಶ್ವಾಸದ ಅಗ್ನಿಪರೀಕ್ಷೆ

ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಲು ವಿಪಕ್ಷಗಳು ವಿಭಿನ್ನ ತಂತ್ರಗಾರಿಕೆ ಹೆಣೆದಿರುವಂತೆಯೇ ಎನ್​ಡಿಎ ಪರಿತ್ಯಕ್ತ ತೆಲುಗು ದೇಶಂ ಪಕ್ಷ ಅವಿಶ್ವಾಸ ಪ್ರಸ್ತಾವನೆ ಮಂಡಿಸುವ ಮೂಲಕ ಸಂಸತ್ ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಅಗ್ನಿಪರೀಕ್ಷೆ ತಂದೊಡ್ಡಿದೆ. ಜು. 20ರಂದು (ಶುಕ್ರವಾರ) ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಅವಕಾಶ ನೀಡಿದ ಬಳಿಕ ಮತದಾನ ನಡೆಸುವುದಾಗಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.

ಟಿಡಿಪಿ 2ನೇ ಯತ್ನ: ಕಳೆದ ಬಜೆಟ್ ಅಧಿವೇಶನದಲ್ಲೇ ಅವಿಶ್ವಾಸ ಮಂಡಿಸಲು ಟಿಡಿಪಿ ಮುಂದಾಗಿತ್ತಾದರೂ ಸಂಸತ್​ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಪ್ರಸ್ತಾವನೆಗೆ ಸ್ಪೀಕರ್ ಒಪ್ಪಿಗೆ ನೀಡಿರಲಿಲ್ಲ. ಪ್ರತಿಪಕ್ಷಗಳ ಧರಣಿ, ಹೋರಾಟದಿಂದಾಗಿ ಬಜೆಟ್ ಅಧಿವೇಶನ ಸಂಪೂರ್ಣವಾಗಿ ವ್ಯರ್ಥವಾಗಿತ್ತು.

50 ಸಂಸದರ ಬೆಂಬಲ: ಕಲಾಪ ಆರಂಭವಾಗುತ್ತಿದ್ದಂತೆಯೇ ಅವಿಶ್ವಾಸ ಪ್ರಸ್ತಾವನೆ ಮಂಡನೆಗೆ ಅವಕಾಶ ನೀಡಬೇಕೆಂದು ಟಿಡಿಪಿ, ಕಾಂಗ್ರೆಸ್, ಎನ್​ಸಿಪಿ ಸಂಸದರು ಪಟ್ಟು ಹಿಡಿದರು. ಟಿಡಿಪಿಯ ಪ್ರಸ್ತಾವನೆಗೆ 50ಕ್ಕೂ ಹೆಚ್ಚು ಸಂಸದರ ಬೆಂಬಲ ಇರುವ ಹಿನ್ನೆಲೆಯಲ್ಲಿ ಸ್ಪೀಕರ್ ಮಹಾಜನ್ ಇದಕ್ಕೆ ಒಪ್ಪಿದರು. ಮಧ್ಯಾಹ್ನ ಬಳಿಕ ಮಂಡನೆ ದಿನಾಂಕ ಘೋಷಿಸಿದರು. ಶುಕ್ರವಾರ ಪ್ರಶ್ನೋತ್ತರ ಅವಧಿ ಇರುವುದಿಲ್ಲ. ಇಡೀ ದಿನ ಅವಿಶ್ವಾಸ ಕುರಿತು ಚರ್ಚೆ ನಡೆಯಲಿದೆ. ಟಿಡಿಪಿಯ ಕೆಸಿನೇನಿ ಶ್ರೀನಿವಾಸ್ ಪ್ರಸ್ತಾವನೆ ಮಂಡಿಸಲಿದ್ದಾರೆ. ಚರ್ಚೆ ಬಳಿಕ ಬಳಿಕ ಮತದಾನ ನಡೆಯಲಿದೆ ಎಂದು ಸ್ಪೀಕರ್ ಹೇಳಿದರು.

ಅವಕಾಶ ಕೇಳಿದ ಖರ್ಗೆ

ಲೋಕಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್​ಗೆ ಅವಿಶ್ವಾಸ ಮಂಡಿಸಲು ಅವಕಾಶ ನೀಡಬೇಕು ಎಂದು ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ನಿಯಮದ ಪ್ರಕಾರ ಮೊದಲು ಯಾರು ಪ್ರಸ್ತಾವನೆ ಮಂಡಿಸುತ್ತಾರೋ ಅವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ ಸ್ಪೀಕರ್, ಕಾಂಗ್ರೆಸ್ ವಾದವನ್ನು ತಿರಸ್ಕರಿಸಿದರು.

ಕೇಂದ್ರ ಸರ್ಕಾರ ಸುರಕ್ಷಿತ

ಲೋಕಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿಗೆ ಪ್ರಸ್ತುತ ಯಾವುದೇ ಅಪಾಯವಿಲ್ಲ. ಮತದಾನ ನಡೆದರೂ ನಿರಾತಂಕವಾಗಿ ಬಿಜೆಪಿ ಗೆಲುವು ಸಾಧಿಸಲಿದೆ. ಮೈತ್ರಿಪಕ್ಷಗಳ ಹೊರತಾಗಿ ಬಿಜೆಪಿಯೊಂದೇ ಲೋಕಸಭೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿದೆ.

ಕುಸಿದ ಷೇರುಪೇಟೆ

ಅವಿಶ್ವಾಸಮತ ಗೊತ್ತುವಳಿ ಅಂಗೀಕಾರ ಪರಿಣಾಮ ಷೇರುಪೇಟೆ ಮೇಲೂ ಉಂಟಾಗಿದೆ. ವಹಿವಾಟು ಆರಂಭಗೊಂಡ ಕೆಲ ನಿಮಿಷಗಳ ಬಳಿಕ 36,747.87 ಅಂಕ ತಲುಪಿ ಸಾರ್ವಕಾಲಿಕ ದಾಖಲೆ ನಿರ್ವಿುಸಿದ ಸೆನ್ಸೆಕ್ಸ್, ಮಧ್ಯಾಹ್ನ ವೇಳೆಗೆ 200 ಅಂಕ ಕುಸಿತ ಕಂಡಿತು. ವಹಿವಾಟಿನ ಕೊನೆಯಲ್ಲಿ 146.52 ಅಂಕ ಇಳಿಕೆ ಕಂಡು 36, 373ರಲ್ಲಿ ಮುಕ್ತಾಯವಾಯಿತು. ನಿಫ್ಟಿ 27.60 ಅಂಕ ಇಳಿಕೆ ಕಂಡು 10,980ರಲ್ಲಿ ಮುಕ್ತಾಯವಾಯಿತು. -ಪಿಟಿಐ, ಏಜೆನ್ಸೀಸ್

ಟಿಡಿಪಿಗೆ ಒಲಿದ ಲಾಟರಿ ಅದೃಷ್ಟ

ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಹಲವು ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದರೂ ಲಾಟರಿ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಟಿಡಿಪಿಯ ಗೊತ್ತುವಳಿಗೆ ಅದೃಷ್ಟ ಲಭಿಸಿತು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ವಿಚಾರದಲ್ಲಿ ಟಿಡಿಪಿಯ ಮುಖ್ಯಸ್ಥ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೋದಿ ವಿರುದ್ಧ ಮುನಿಸಿಕೊಂಡು ಇತ್ತೀಚೆಗಷ್ಟೇ ಎನ್​ಡಿಎನಿಂದ ಹೊರಬಂದಿದ್ದರು. ಬಿಜೆಪಿ, ಕಾಂಗ್ರೆಸ್​ಗೆ ಪರ್ಯಾಯವಾಗಿ ತೃತೀಯ ರಂಗ ರಚನೆಗೆ ಕೈ ಹಾಕಿರುವ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್, ಎನ್​ಸಿಪಿ, ಎಡಪಕ್ಷ ಸಹಿತ ಕೆಲ ಪ್ರಾದೇಶಿಕ ಪಕ್ಷಗಳೂ ಇದಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿವೆ.

ಸವಾಲು ಎದುರಿಸಲು ಸರ್ಕಾರ ಸಿದ್ಧ

ಅವಿಶ್ವಾಸ ಗೊತ್ತುವಳಿ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಹೇಳಿದ್ದಾರೆ. ಮೋದಿ ಸರ್ಕಾರದ ಮೇಲೆ ಇಡೀ ದೇಶಕ್ಕೆ ನಂಬಿಕೆಯಿದೆ. ಹೀಗಾಗಿ ಪ್ರತಿಪಕ್ಷಗಳ ಯತ್ನಕ್ಕೆ ಸೋಲಾಗಲಿದೆ. ಎನ್​ಡಿಎ ಪಕ್ಷಗಳು ಒಗ್ಗಟ್ಟಾಗಿದ್ದು ಅವಿಶ್ವಾಸಕ್ಕೆ ಉತ್ತರಕೊಡಲು ಸಿದ್ಧರಾಗಿದ್ದೇವೆಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರತಿಪಕ್ಷಗಳಿಗೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾಕೆ ಅವಿಶ್ವಾಸ?

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ ಕಾರಣಕ್ಕೆ ಟಿಡಿಪಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಅಮಾಯಕರ ಹತ್ಯೆ, ಎಸ್​ಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದನ್ನು ಖಂಡಿಸಿ ಕಾಂಗ್ರೆಸ್ ಮತ್ತಿತರ ಪಕ್ಷಗಳು ಈ ಪ್ರಸ್ತಾವನೆಯ ಬೆಂಬಲಕ್ಕೆ ನಿಂತಿವೆ.