ಕಾಫಿ ಬೆಳೆಗಾರರ ಪ್ರತಿನಿಧಿಗಳಾಗಿ ಕೆಲಸ ಮಾಡೋಣ

ವಿಜಯವಾಣಿ ಸುದ್ದಿಜಾಲ ಬೇಲೂರು
ಕಾಫಿ ಮಂಡಳಿ ಕಾರ್ಯದರ್ಶಿ ಯಾರದೋ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಬೆಳೆಗಾರರು ಉದ್ಧಾರವಾಗಬೇಕೆಂದರೆ ಮೊದಲು ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಬೇಲೂರು ಪಟ್ಟಣ ಸಮೀಪದ ಪ್ಲಾಂಟರ್ಸ್‌ ಕ್ಲಬ್ ಆವರಣದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಬುಧವಾರ ಸಂಜೆ ಏರ್ಪಡಿಸಿದ್ದ ಕಾಫಿ ಬೆಳೆಗಾರರ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾಲಿ ಕಾರ್ಯದರ್ಶಿ ಬದಲಾವಣೆ ಮಾಡದಿದ್ದರೆ ಬೆಳೆಗಾರರ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ಕೂಡಲೇ ಆ ಸ್ಥಾನಕ್ಕೆ ಬೇರೆಯವರನ್ನು ನಿಯೋಜಿಸಬೇಕು. ಈ ಕೆಲಸಕ್ಕೆ ಪ್ರಜ್ವಲ್ ಮುಂದಾಗಬೇಕು. ಸಿಎಂ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ, ರಾಜಕಾರಣ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಟ್ಟಾಗಿರೋಣ. ಕಾಫಿ ಬೆಳೆಗಾರರ ಪ್ರತಿನಿಧಿಗಳಾಗಿ ಕೆಲಸ ಮಾಡಲು ಕಂಕಣ ಬದ್ಧ್ದರಾಗಿ ನಿಲ್ಲೋಣ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಸಾಕಷ್ಟು ತಿಳಿದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ದೂರದೆ ಎಲ್ಲ ಸಂಸದರು ಒಟ್ಟಾಗಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಹೊರಾಟ ಮಾಡಬೇಕಿದೆ ಎಂದರು.
ಕಾಫಿ ಬೆಳೆಗಾರರನ್ನು ನಂಬಿ ಸಾಕಷ್ಟು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಕಾಫಿ ಬೆಳೆಗಾರರಿಗೆ ಆರ್ಥಿಕವಾಗಿ ಶಕ್ತಿ ನೀಡುವ ಕೆಲಸ ಮಾಡುತ್ತೇನೆ. ಕಾಫಿ ಬೆಳೆಗಾರರ ಅಭಿವೃದ್ಧಿಗೆ ಬೇಕಾದ ಎಲ್ಲ ಸಹಕಾರ ನೀಡುತ್ತೇನೆ ಎಂದರು.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಪರಿಸರ ಉಳಿವಿನಲ್ಲಿ ಕಾಫಿ ಬೆಳೆಗಾರರ ಕೊಡುಗೆ ಸಾಕಷ್ಟಿದೆ. ನಿಜವಾದ ಪರಿಸರ ಪ್ರೇಮಿಗಳೆಂದರೆ ಕಾಫಿ ಬೆಳೆಗಾರರು ಎಂಬುದನ್ನು ತಿಳಿಯಬೇಕಿದೆ. ನಮ್ಮ ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಮ್ಮ ನಾಯಕರೊಂದಿಗೆ ಚರ್ಚಿಸುತ್ತೇನೆ ಎಂದರು.
ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೀರ್ಥಮಲ್ಲೇಶ್ ಮಾತನಾಡಿ, ಕಾಫಿ ಬೆಳೆಗಾರರು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಆನೆ ಹಾವಳಿ, ಎತ್ತಿನಹೊಳೆ ಯೋಜನೆಯಿಂದ ಸುಮಾರು 2 ಲಕ್ಷ ಮರಗಳ ಹನನ, ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಯೋಜನೆ, ಕಾಫಿ ಹಾಗೂ ಮೆಣಸು ಆಮದು ಇನ್ನು ಮುಂತಾದ ಸಮಸ್ಯೆಗಳು ಸಂಕಷ್ಟ ತಂದೊಡ್ಡಿವೆ. ಜನಪ್ರತಿನಿಧಿಗಳು ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ನೂತನ ಸಂಸದರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಸದ ತೇಜಸ್ವಿ ಸೂರ್ಯ, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಬೋಜೇಗೌಡ, ಯತೀಶ್, ಕರ್ನಾಟಕ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಅತ್ತಕಟ್ಟೆ ಜಗನಾಥ್, ಸುಬ್ಬೇಗೌಡ, ಜಯರಾಂ, ಮುರುಳಿ ಮುಂತಾದವರು ಹಾಜರಿದ್ದರು.


ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತೊಮ್ಮೆ ಸಂಸದಾರಾಗಿದಿದ್ದರೆ ಕಾಫಿ ಬೆಳೆಗಾರರ ಸಮಸ್ಯೆಗೆ ಖಂಡಿತ ಪರಿಹಾರ ಕಲ್ಪಿಸುತ್ತಿದ್ದರು. ಈಗಲೂ ಅವರ ಸಹಕಾರದಿಂದ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳಿಗೆ ಮುಕ್ತಿ ಕಾಣಿಸುತ್ತೇವೆ.
-ಪ್ರಜ್ವಲ್ ರೇವಣ್ಣ, ಸಂಸದ

Leave a Reply

Your email address will not be published. Required fields are marked *