ಕೈ ವಿರುದ್ಧ ಪ್ರಧಾನಿ ರಫೇಲ್ ಅಸ್ತ್ರ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕಾಂಗ್ರೆಸ್​ಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ರಫೇಲ್ ಪ್ರತಿಸ್ಪರ್ಧಿ ಕಂಪನಿಗಳ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರಪತಿ ಭಾಷಣಕ್ಕೆ ಅಭಿನಂದಿಸಿ ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ಪ್ರಧಾನಿ, ‘ನಾನು ರಫೇಲ್ ಬಗ್ಗೆ ಮಾತನಾಡಬೇಕು ಎಂದು ಸಾಕಷ್ಟು ಸಂಸದರು ಬಯಸಿದ್ದಾರೆ. ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಲ್ಲಿಯೂ ಎಲ್ಲವೂ ಸ್ಪಷ್ಟವಾಗಿದೆ. ಆದಾಗ್ಯೂ ಕೆಲವರು ಸುಳ್ಳಿನ ಅಭಿಯಾನ ಆರಂಭಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದೇನೆ. ಯಾರ ಪರವಾಗಿ ರಫೇಲ್ ಒಪ್ಪಂದ ರದ್ದುಪಡಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ? ಯಾವ ಕಂಪನಿ ಪರವಾಗಿ ಈ ಆಟ ಆಡುತ್ತಿದ್ದೀರಿ? ಈ ನಾಟಕಕ್ಕೆ ಯಾವ ವ್ಯಕ್ತಿಗಳು ನಿಮ್ಮನ್ನು ನಿಯೋಜಿಸಿದ್ದಾರೆ’ ಎಂದು ಮೋದಿ ಪ್ರಶ್ನಿಸಿದ್ದಾರೆ.

ಸೇನೆಯನ್ನು ನಿಶ್ಯಸ್ತ್ರವಾಗಿಡುವುದು ಕಾಂಗ್ರೆಸ್​ನ ರೂಢಿಯಾಗಿದೆ. ನೆರೆಹೊರೆಯ ದೇಶಗಳು ಅತ್ಯಾಧುನಿಕ ಯುದ್ಧ ವಿಮಾನ ಖರೀದಿಸಿವೆ. ಕಳೆದ 30 ವರ್ಷದಲ್ಲಿ ಒಂದೂ ನ್ಯೂ ಜನರೇಷನ್ ಯುದ್ಧವಿಮಾನ ಖರೀದಿಸಲು ಕಾಂಗ್ರೆಸ್ ಏಕೆ ಮುಂದಾಗಲಿಲ್ಲ? ಸೇನೆಯನ್ನು ನಿಶ್ಯಸ್ತ್ರಗೊಳಿಸಿ ಅವಮಾನ ಮಾಡುವುದು ಕಾಂಗ್ರೆಸ್​ನ ಸಂಸ್ಕೃತಿ ಎಂದು ಪ್ರಧಾನಿ ಕಿಡಿಕಾರಿದ್ದಾರೆ.

‘ಅನವಶ್ಯಕವಾಗಿ ರಫೇಲ್ ಕುರಿತು ಸುಳ್ಳಿನ ಅಭಿಯಾನ ನಡೆಸಲು ಕಾರಣ ಏನೆಂದು ನಾನು ಹುಡುಕಿದೆ. ಆಗ ನನಗೆ ತಿಳಿದಿದ್ದೇನೆಂದರೆ ಕಾಂಗ್ರೆಸ್ ಅವಧಿಯಲ್ಲಿ ದಲ್ಲಾಳಿಗಳಿಲ್ಲದೇ ಯಾವುದೇ ರಕ್ಷಣಾ ಖರೀದಿ ನಡೆದಿಲ್ಲ. ಅವರಿಗೆ ಮಾಮಾ, ಚಾಚಾ ಅಥವಾ ಇನ್ಯಾವುದೋ ದಲ್ಲಾಳಿಗಳ ಅನಿವಾರ್ಯತೆಯಿದೆ. ಈಗಾಗಲೇ ಮೂವರು ಚಾಚಾಗಳು ನಮ್ಮ ಸೆರೆಗೆ ಸಿಕ್ಕಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.

ಸದನದಲ್ಲಿ ಮೋದಿ ಮಾತು
# ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳ ಸುಳ್ಳಿನ ಪ್ರಚಾರ ಸಾಮಾನ್ಯ, ಆದರೆ ದೇಶದ ಜನತೆಗೆ ಸರ್ಕಾರದ ಸಾಧನೆಯ ಅರಿವಿದೆ.
# ದೇಶದ ಪ್ರತಿಯೊಂದು ಸರ್ಕಾರಿ ಸಂಸ್ಥೆಗಳನ್ನು ನಾಶಪಡಿಸಿದ ಪಕ್ಷ ನಮಗೆ ಸಂವಿಧಾನದ ಪಾಠ ಮಾಡುತ್ತಿದೆ.
# ನೋಟು ಅಮಾನ್ಯೀಕರಣದಿಂದ 3 ಲಕ್ಷ ನಕಲಿ ಕಂಪನಿಗಳು ಹಾಗೂ 20 ಸಾವಿರ ಎನ್​ಜಿಒಗಳನ್ನು ರದ್ದುಪಡಿಸಲು ಸಾಧ್ಯವಾಯಿತು.
# ಲಕ್ಷ ವೃತ್ತಿದಾರರು ನೋಂದಣಿಯಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ 4-5 ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. 1.2 ಕೋಟಿ ನೂತನ ಇಪಿಎಫ್ ನೋಂದಣಿಯಾಗಿದೆ. ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಟೀಕಿಸುವವರು ಈ ಸಂಖ್ಯೆಗಳು ಎಲ್ಲಿಂದ ಬಂದವು ಎನ್ನುವುದಕ್ಕೆ ಉತ್ತರಿಸಲಿ. ಉದ್ಯೋಗ ಸೃಷ್ಟಿಯ ವ್ಯಾಖ್ಯಾನ ಬದಲಾಗಿದೆ.
# ಹಣದುಬ್ಬರ, ಬೆಲೆ ಏರಿಕೆ ಎನ್ನುವುದು ಕಾಂಗ್ರೆಸ್ ತಂಡದ ಸದಸ್ಯರಿದ್ದಂತೆ. ನಮ್ಮ ಸರ್ಕಾರದ ಅವಧಿಯಲ್ಲಿ ಇವು ನಿಯಂತ್ರಣಕ್ಕೆ ಬಂದಿವೆ.

ಕರ್ನಾಟಕಕ್ಕೆ ಟಾಂಗ್!
ಸಾಲಮನ್ನಾಕ್ಕಿಂತ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಪ್ರಸಕ್ತ ಬಜೆಟ್​ನಲ್ಲಿ ಪ್ರೋತ್ಸಾಹ ಧನ, ಬಡ್ಡಿ ಮನ್ನಾ ಸೇರಿ ಕೆಲ ಯೋಜನೆಗಳು ಅದಕ್ಕೆ ಉದಾಹರಣೆ. ಆದರೆ ಕಾಂಗ್ರೆಸ್ ಸರ್ಕಾರಗಳು ಸಾಲಮನ್ನಾ ಹೆಸರಲ್ಲಿ ರೈತರಿಗೆ ಮೋಸ ಮಾಡುತ್ತಿದೆ. ಕರ್ನಾಟಕದಲ್ಲಿ 43 ಲಕ್ಷ ರೈತರಿಗೆ ಸಾಲಮನ್ನಾ ಎಂದು ಹೇಳಿ ಕೇವಲ 6 ಸಾವಿರ ರೈತರಿಗೆ ಸೀಮಿತವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಬಿಫೋರ್ ಕಾಂಗ್ರೆಸ್, ಆಫ್ಟರ್ ಡೈನಾಸ್ಟಿ!
ಕಾಂಗ್ರೆಸ್ ಸ್ನೇಹಿತರಿಗೆ ಎರಡೇ ತಿಳಿದಿದೆ. ಬಿಫೋರ್ ಕಾಂಗ್ರೆಸ್(ಕಾಂಗ್ರೆಸ್​ಗಿಂತ ಮೊದಲು) ಈ ದೇಶದಲ್ಲಿ ಏನೂ ಆಗಿರಲಿಲ್ಲ. ಆಫ್ಟರ್ ಡೈನಾಸ್ಟಿ (ಕುಟುಂಬದ ಬಳಿಕ) ಎಲ್ಲವೂ ಆಗಿದೆ ಎಂಬ ಭ್ರಮೆಯಲ್ಲಿದ್ದಾರೆ. ನಾನು ಈ ಕುಟುಂಬಕ್ಕೆ ಸೇರಿಲ್ಲ, ಒಬ್ಬ ಸಾಮಾನ್ಯ ವ್ಯಕ್ತಿ ಎನ್ನುವುದೇ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.

55 ವರ್ಷ 55 ತಿಂಗಳು
3 ವರ್ಷಗಳಲ್ಲಿ ಸಂಪೂರ್ಣ ವಿದ್ಯುದೀಕರಣ, ಶೌಚಾಲಯ ನಿರ್ವಣ, ರಸ್ತೆ ನಿರ್ಮಾಣ ಮಾಡುವುದಾಗಿ ಕಾಂಗ್ರೆಸ್ 3 ಚುನಾವಣೆ ಪ್ರಣಾಳಿಕೆ ಯಲ್ಲಿ ಹೇಳಿತ್ತು. ಆದರೆ ಕಳೆದ 55 ತಿಂಗಳಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಮಾಡಿ ತೋರಿಸಿದ್ದೇವೆ. ಕಾಂಗ್ರೆಸ್​ನ 55 ವರ್ಷದ ಆಡಳಿತಕ್ಕೆ ನಮ್ಮ 55 ತಿಂಗಳಿನ ಕೆಲಸ ತಾಳೆ ನೋಡಿ. ಮುಂದಿನ ಚುನಾವಣೆ ಯಲ್ಲಿ ಇದನ್ನೇ ಆಧರಿಸಿ ಮತದಾರರು ಸರ್ಕಾರ ರಚನೆ ಮಾಡುತ್ತಾರೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮೋದಿಯನ್ನು ಟೀಕಿಸುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಮೋದಿ ಟೀಕಿಸುವ ಆತುರದಲ್ಲಿ ದೇಶವನ್ನು ಹೀಗಳೆಯಲಾಗುತ್ತಿದೆ. ಕಳ್ಳರು ಚೌಕಿದಾರನ ಮೇಲೆ ಆರೋಪ ಮಾಡುತ್ತಿರುವುದು ಆಶ್ಚರ್ಯಕರ.

| ನರೇಂದ್ರ ಮೋದಿ ಪ್ರಧಾನಿ