ಬಿಜೆಪಿ ದಕ್ಷಿಣದ ಬಾಗಿಲು ಬಂದ್

ಚಿಕ್ಕಮಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಜತೆ ಸೇರಿ ಬಿಜೆಪಿಯ ದಕ್ಷಿಣ ಭಾರತದ ಬಾಗಿಲನ್ನು ಈಗ ಸ್ವಲ್ಪ ಮಟ್ಟಿಗೆ ಬಂದ್ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಕಡೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರ ರಚನೆಯಾದಾಗ ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು ಬಂದ್ ಮಾಡುವುದಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೊಷಣೆ ಮಾಡಿದ್ದರು ಎಂದರು.

ಜೆಡಿಎಸ್-ಕಾಂಗ್ರೆಸ್ ಒಗ್ಗಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಲಿವೆ. ಒಂದು ಸೀಟು ಹೆಚ್ಚು-ಕಡಿಮೆ ಇಬ್ಬೂರು ಒಮ್ಮತದಿಂದ ಹಂಚಿಕೊಂಡು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದರು.

ಕನ್ನಡಿಗರೊಬ್ಬರು ಪ್ರಧಾನಿಯಾಗುತ್ತಾರೆಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌಡರು, ಆ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಆಗಿನ ಪರಿಸ್ಥಿತಿಯೇ ಬೇರೆ, ಈಗಿನ ಸ್ಥಿತಿಯೇ ಬೇರೆ. ಅಂದಿಗೆ ಹೋಲಿಕೆ ಮಾಡುವ ಅವಶ್ಯಕತೆ ಇಲ್ಲ. ಆಗ ಕರ್ನಾಟಕ ಜನತೆಯ ಮಹಾ ಸಹಕಾರದಿಂದ ಸ್ವಂತ ಬಲದಲ್ಲಿ ಜೆಡಿಎಸ್ ಸರ್ಕಾರ ರಚನೆ ಮಾಡಿತ್ತು. 18 ಲೋಕಸಭಾ ಸ್ಥಾನ ಸಹ ಆಗ ಗೆದ್ದಿದ್ದೆವು. ಈಗ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಜತೆ ಮೈತ್ರಿ ಸರ್ಕಾರ ಮಾಡುತ್ತಿದ್ದೇವೆಂಬ ಅರಿವು ನಮಗಿದೆ ಎಂದು ಹೇಳಿದರು.

ರಾಷ್ಟ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. 21 ಪ್ರಾದೇಶಿಕ ಪಕ್ಷಗಳು ಸಹಕಾರ ನೀಡುತ್ತಿವೆ. ಕಾಂಗ್ರೆಸ್ ಬೆಂಬಲವಿಲ್ಲದೆ ಯಾರೂ ಪ್ರಧಾನಿ ಆಗಲು ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳ ಸಹಮತವಿಲ್ಲದೆ ಪ್ರಧಾನ ಮಂತ್ರಿ ಮಾಡುವುದೂ ಕಷ್ಟ ಎಂದರು.

ನಾನು ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದು ಸತ್ಯ. ಹಾಸನಕ್ಕೆ ಯಾರು ನಿಲ್ಲಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ. ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ನಿಲ್ಲಬೇಕೆಂಬುದೂ ಇಲ್ಲ. ಇದನ್ನು ಕೆಲ ದಿನಗಳಲ್ಲಿ ಘೊಷಣೆ ಮಾಡುತ್ತೇವೆ ಎಂದರು.

ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದಿಲ್ಲ ಎಂದ ಗೌಡರು, ಸುಮಲತಾ ಸ್ಪರ್ಧೆ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು.

ಉಪ ಸಭಾಪತಿ ಎಸ್.ಎಲ್.ಧಮೇಗೌಡ, ಜಿಲ್ಲಾಧ್ಯಕ್ಷ ರಂಜನ್ ಅಜಿತ್​ಕುಮಾರ್, ಮಾಜಿ ಶಾಸಕ ವೈಎಸ್​ವಿ ದತ್ತ ಇದ್ದರು.

ಪಕ್ಷ ಬಯಸಿದರೆ ಮಾತ್ರ ಸ್ಪರ್ಧೆ

ಪಕ್ಷದ ಮುಖಂಡರು, ಕಾರ್ಯಕರ್ತರು ಬಯಸಿದರೆ ಮಾತ್ರ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ಹೇಳಿದರು. ಪಕ್ಷದ ಕಾರ್ಯಕರ್ತರು, ಜನ ನಾನು ಸ್ಪರ್ಧಿಸುವಂತೆ ಬಯಸುತ್ತಿದ್ಧಾರೆ. ಇದಕ್ಕೆ ಪಕ್ಷದ ನಾಯಕರು ಒಪ್ಪಿದರೆ ನಾನು ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ. ದೊಡ್ಡ ಗೌಡರೇ ಸ್ಪರ್ಧೆ ಮಾಡಿದರೆ ದೊಡ್ಡ ಅಂತರದಲ್ಲಿ ಗೆಲ್ಲಿಸಲು ಹೋರಾಟ ಮಾಡುತ್ತೇನೆ. ಸದ್ಯ ಈಗ ಯುವಕರ ಆಶಯದಂತೆ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದರು. ಒಂದು ವೇಳೆ ಪಕ್ಷ ಟಿಕೆಟ್ ನೀಡದಿದ್ದರೆ ನನಗೇನು ಬೇಸರವಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಈಗಾಗಲೆ ಮುಖ್ಯಮಂತ್ರಿಗಳ ರೈತ, ಸಾಮಾನ್ಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಮೇಲೆ ಜನ ವಿಶ್ವಾಸ ಇಡುತ್ತಿದ್ದಾರೆ ಎಂದು ಹೇಳಿದರು.