ಪ್ರಧಾನಿ ಮೋದಿ ಪಾದಮುಟ್ಟಿ ನಮಸ್ಕರಿಸಿದ್ದು ಈ ಮೂವರು ವ್ಯಕ್ತಿಗಳಿಗೆ…ಭಾವನಾತ್ಮಕ ಕ್ಷಣಕ್ಕೆ ಅಪಾರ ಮೆಚ್ಚುಗೆ…

ನವದೆಹಲಿ: ಹದಿನೇಳನೆ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್​ಡಿಎ ಅತ್ಯುತ್ಸಾಹದಿಂದ ಭಾಗವಹಿಸಿದೆ. ಆಡಳಿತ ಪರ ಅಲೆಯಲ್ಲಿ ಕಾರ್ಯಕರ್ತರು ತೇಲುತ್ತಿದ್ದಾರೆ. ಹಾಗೆಯೇ ಪ್ರಧಾನಮಂತ್ರಿ ನರೇಂದ್ರ ಮೊದಿ ಕೂಡ ತಮ್ಮ ವಿಶಿಷ್ಟ ನಡೆಗಳಿಂದ ಗಮನ ಸೆಳೆದಿದ್ದಾರೆ. ಈ ಬಾರಿ ಮೂರು ಹಿರಿಯ ಜೀವಗಳಿಗೆ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆಯುವ ಮೂಲಕ ನಮ್ಮ ಪರಂಪರೆಯನ್ನು ನೆನಪಿಸಿದ್ದಾರೆ.

ಅಮ್ಮನ ಆಶೀರ್ವಾದ
ನರೇಂದ್ರ ಮೋದಿಯವರು ಏ.23ರಂದು ಅಹಮದಾಬಾದ್​ನಲ್ಲಿ ಮತದಾನ ಮಾಡಿದರು. ಆದರೆ, ಮತದಾನ ಮಾಡುವುದಕ್ಕೂ ಮೊದಲು ಗಾಂಧಿನಗರದ ಸಮೀಪದ ರೈಸನ್​ ಹಳ್ಳಿಯಲ್ಲಿರುವ ತಮ್ಮ ತಾಯಿ ಹೀರಾಬೆನ್​ ಅವರ ಆಶಿರ್ವಾದ ಪಡೆದರು.

ತಮ್ಮ ಕಾಲು ಮುಟ್ಟಿ ನಮಸ್ಕರಿಸಿದ ಪುತ್ರನಿಗೆ ತಾಯಿ ತೆಂಗಿನಕಾಯಿ, ಶಾಲು, ಕಲ್ಲುಸಕ್ಕರೆ ನೀಡಿ ಆಶೀರ್ವದಿಸಿದ್ದರು. ಇದೊಂದು ಭಾವನಾತ್ಮಕ ಸನ್ನಿವೇಶವಾಗಿತ್ತು.

ನಾಮಪತ್ರ ಸಲ್ಲಿಕೆಗೂ ಹಿರಿಯರ ಹಾರೈಕೆ
ಹಾಗೇ ನರೇಂದ್ರ ಮೋದಿಯವರು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಅಖಾಲಿ ದಳ​ದ ಹಿರಿಯ ಮುಖಂಡ 93 ವರ್ಷದ ಪ್ರಕಾಶ್​ ಸಿಂಗ್​ ಬಾದಲ್​ ಹಾಗೂ ಉಪಸ್ಥಿತರಿದ್ದ ಮಹಿಳಾ ಕಾಲೇಜಿನ ಪ್ರಾಂಶುಪಾಲೆಯಾಗಿದ್ದ 92 ವರ್ಷದ ಅನ್ನಪೂರ್ಣಾ ಶುಕ್ಲಾ ಅವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಅನ್ನಪೂರ್ಣ ಶುಕ್ಲಾ ಅವರು ಮದನ ಮೋಹನ ಮಾಳವೀಯ ಅವರ ಮಾನಸ ಪುತ್ರಿಯಾಗಿದ್ದಾರೆ.

ಅವರು ಈ ಇಬ್ಬರೂ ಹಿರಿಯರ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಚಿತ್ರಗಳು ವೈರಲ್​ ಆಗಿದ್ದು ಅದೆಷ್ಟೋ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಬಿಜೆಪಿ ಮುಖಂಡ ಅಮಿತ್​ ರಕ್ಷಿತ್​, ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಪ್ರಧಾನಿ ಮೋದಿ ಹಿರಿಯರ ಆಶಿರ್ವಾದ ಪಡೆಯುತ್ತಿದ್ದಾರೆ. ಇದು ವರ್ಷದ ಚಿತ್ರ ಎಂದು ಹೇಳಿದ್ದಾರೆ.

ವಾರಾಣಸಿಯಲ್ಲಿ ರೋಡ್​ ಶೋ ಆರಂಭಿಸುವುದಕ್ಕೂ ಮುನ್ನ ಮದನ ಮೋಹನ ಮಾಳವೀಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಜತೆಗೆ ನಾಲ್ಕೂ ದಿಕ್ಕಿನಲ್ಲೂ ನೆರೆದಿದ್ದ ಜನಸ್ತೋಮಕ್ಕೆ ವಿನಮ್ರವಾಗಿ ನಮಸ್ಕರಿಸಿ ಮತಯಾಚನೆ ಮಾಡಿದ್ದರು.

One Reply to “ಪ್ರಧಾನಿ ಮೋದಿ ಪಾದಮುಟ್ಟಿ ನಮಸ್ಕರಿಸಿದ್ದು ಈ ಮೂವರು ವ್ಯಕ್ತಿಗಳಿಗೆ…ಭಾವನಾತ್ಮಕ ಕ್ಷಣಕ್ಕೆ ಅಪಾರ ಮೆಚ್ಚುಗೆ…”

Comments are closed.