ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನಗರದ ಹೊರವಲಯದ ಪೈ ಸಭಾಂಗಣದ ಸಮೀಪದ ಸರ್ಕಲ್‌ನಲ್ಲಿ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ಭಾನುವಾರ ಸಿ.ಟಿ.ರವಿ ಅವರು ನಗರಕ್ಕೆ ಬರುತ್ತಿದ್ದಂತೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹಿರೇಮಗಳೂರು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಜಯಘೋಷ ಕೂಗಿದರು. ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಸಿ.ಟಿ.ರವಿ, ಪಕ್ಷ ನನ್ನನ್ನು ಗುರುತಿಸಿ ವಿಧಾನ ಪರಿಷತ್‌ಗೆ ಪರಿಗಣನೆ ಮಾಡಿದೆ. ಲೋಕಸಭೆ ಮತದಾನದ ಚುನಾವಣೋತ್ತರ ಬಹುತೇಕ ಸಮೀಕ್ಷೆಗಳು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುತ್ತಾರೆ ಎಂಬುದನ್ನು ಖಾತ್ರಿಪಡಿಸಿವೆ. ದೇಶದ ಜನತೆ ಪ್ರಾಮಾಣಿಕ ನಾಯಕತ್ವ ಹಾಗೂ ದೇಶ ಮೊದಲು ಎಂಬುದಕ್ಕೆ ಆಶೀರ್ವಾದ ಮಾಡಿದ್ದಾರೆ. ಈ ಸಮೀಕ್ಷೆಗಿಂತಲೂ ಅಧಿಕ ಸ್ಥಾನ ಪಡೆದು ಭಾರತವನ್ನು ವಿಶ್ವ ಗುರುವಾಗಿಸಲು ಎಲ್ಲ ಯೋಜನೆಯೊಂದಿಗೆ ಕೆಲಸ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿಯಾ ಒಕ್ಕೂಟ ಅಧಿಕ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅವರು ರಚನಾತ್ಮಕ ಕಾರ್ಯನಿರ್ವಹಿಸುವ ಪ್ರತಿಪಕ್ಷದ ಸ್ಥಾನವನ್ನಾದರೂ ಪಡೆದುಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಮುಖಂಡರಾದ ಟಿ.ರಾಜಶೇಖರ್, ಈಶ್ವರಹಳ್ಳಿ ಮಹೇಶ್, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಕೇಶವಮೂರ್ತಿ ಇತರರಿದ್ದರು.