ಲಸಿಕೆ ಕೊಡ್ಸೋ ಮುನ್ನ ಹುಷಾರ್

ವಿ. ಮುರಳೀಧರ/ಶ್ರವಣ್​ಕುಮಾರ್.ಎಸ್

ಬೆಂಗಳೂರು: ಪೋಷಕರೇ.. ನಿಮ್ಮ ಕಂದಮ್ಮಗಳಿಗೆ ಲಸಿಕೆ ಕೊಡಿಸುವ ಮುನ್ನ ಎಚ್ಚರದಿಂದಿರಿ. ಏಕೆಂದರೆ ಮಕ್ಕಳಿಗೆ ಮಾರಕ ಕಾಯಿಲೆ ಬಾರದಿರಲಿ ಎಂದು ಕೊಡಿಸುವ ಲಸಿಕೆಯೇ ಶಕ್ತಿಹೀನ ಆಗಿರಬಹುದು, ಅದರ ಅವಧಿ ಮುಗಿದಿರಬಹುದು!

ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಮಗುವಿಗೆ ಲಸಿಕೆ ಕೊಡಿಸಿದಾಗ ಗಮನಕ್ಕೆ ಬಂದ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಐಎಎಸ್ ಅಧಿಕಾರಿ ಮಗುವಿಗೇ ಅವಧಿ ಮೀರಿದ ಲಸಿಕೆ ನೀಡಲಾಗಿತ್ತು. ಇನ್ನು ಸಾಮಾನ್ಯರ ಮಕ್ಕಳ ಬದುಕಿನಲ್ಲಿ ಇಂಥ ಪ್ರಕರಣಗಳು ಎಷ್ಟಾಗಿರಬಹುದು?

ಈ ವಿಷಯದ ಬೆನ್ನತ್ತಿ ಜೀವರಕ್ಷಕ ಲಸಿಕೆಗಳ ನಿರ್ವಹಣೆ ಮತ್ತು ಪಾರದರ್ಶಕ ವ್ಯವಸ್ಥೆ ಕುರಿತು ದಿಗ್ವಿಜಯ 247 ಮತ್ತು ವಿಜಯವಾಣಿ ಪತ್ರಿಕೆ ಸತತ 30 ದಿನಗಳ ಕಾಲ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಬೆಚ್ಚಿ ಬೀಳಿಸುವ ಸಂಗತಿಗಳು ಹೊರ ಬಿದ್ದಿವೆ.

ಪೋಲಿಯೋ, ದಡಾರ, ಗಂಟಲುಬೇನೆ, ನಾಯಿಕೆಮ್ಮು, ಕ್ಷಯ, ಡಯೇರಿಯಾದಂಥ ಮಾರಕ ಕಾಯಿಲೆ ಬಾರದಿರಲಿ ಎಂದು ಶಿಶು ಜನಿಸಿದ ದಿನದಿಂದ 16 ವರ್ಷದವರೆಗೆ ಲಸಿಕೆ ನೀಡಲಾಗುತ್ತದೆ. ಈ ಲಸಿಕೆ ಬಳಕೆ ಮತ್ತು ನಿರ್ವಹಣೆಗೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನ ನೀಡಿದೆ.

ಲಸಿಕೆಗಳನ್ನು ಶೇ. 2ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂರಕ್ಷಿಸಿಡಬೇಕು. ಕೆಲವನ್ನು ಮೈನಸ್ 20 ಡಿ.ಸೆ., ಇನ್ನು ಕೆಲವನ್ನು ಮೈನಸ್ 4 ಡಿ.ಸೆ.ನಲ್ಲಿ ಕಾಪಾಡಬೇಕು. ಉತ್ಪಾದನೆಯಾದ ಕ್ಷಣದಿಂದ ಮಕ್ಕಳಿಗೆ ಕೊಡುವವರೆಗೂ 10 ನಿಮಿಷ ಕೂಡ ಬಿಸಿಲಿಗೆ ಅಥವಾ ಹೊರಗೆ ಇಡುವಂತಿಲ್ಲ. ಇಂಥ ನಿರ್ವಹಣೆಯನ್ನು ವೈದ್ಯಕೀಯ ಭಾಷೆಯಲ್ಲಿ ಕೋಲ್ಡ್ಚೈನ್ ಎನ್ನುತ್ತಾರೆ.

ಮಾತ್ರೆ-ಸಿರಪ್​ಗಳಿಗೆ ಎಕ್ಸ್​ಪೈರಿ ಡೇಟ್ ಇರುತ್ತದೆ. ಲಸಿಕೆಗಳು ಅದಕ್ಕಿಂತಲೂ ಭಿನ್ನ. ಅವುಗಳನ್ನು ಎಕ್ಸ್​ಪೈರಿ ಡೇಟ್ ಮಾನದಂಡದಿಂದಷ್ಟೇ ಸರಿ ಇವೆಯೇ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕೋಲ್ಡ್ಚೈನ್ ನಿರ್ವಹಣೆಯಲ್ಲಿ ಸ್ವಲ್ಪ ಏರುಪೇರಾದರೂ ಲಸಿಕೆ ಸತ್ವ ಕಳೆದುಕೊಳ್ಳುತ್ತದೆ. ಅಂಥ ಲಸಿಕೆ ಮಕ್ಕಳಿಗೆ ಕೊಟ್ಟರೆ ಏನೂ ಪ್ರಯೋಜನವಿಲ್ಲ.

ಸರ್ಕಾರಿ ಆಸ್ಪತ್ರೆಗಳಲ್ಲಿನ ಎಲ್ಲ ಲಸಿಕೆಗಳಿಗೂ ವಿವಿಎಂ ಚಿಹ್ನೆ ಇರುತ್ತದೆ. ನಿಗದಿತ ತಾಪಮಾನದಲ್ಲಿ ಕಾಪಾಡಲೆಂದು ಲಕ್ಷಾಂತರ ಮೌಲ್ಯದ ಐಸ್​ಲೈನ್ ರೆಫ್ರಿಜಿರೇಟರ್ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೊಂಡೊಯ್ಯಲು ಪ್ರತ್ಯೇಕ ಐಸ್​ಪ್ಯಾಕ್ ಬಾಕ್ಸ್​ಗಳನ್ನು ಹೊಂದಿದ್ದೇವೆ. ಒಂದು ವೇಳೆ ಲಸಿಕೆಗಳು ಸತ್ವ ಕಳೆದುಕೊಂಡರೆ, ವಿವಿಎಂ ಮಾರ್ಕ್ ನೋಡಿ ಅವನ್ನು ರದ್ದು ಪಡಿಸುತ್ತೇವೆ.

| ಸರಳಾ ಸಭಾಪತಿ ತಜ್ಞ ವೈದ್ಯೆ, ವಾಣಿವಿಲಾಸ ಆಸ್ಪತ್ರೆ

ಖಾಸಗಿ ಕ್ಷೇತ್ರದಲ್ಲಿ ಪಾಲಿಸುತ್ತಿಲ್ಲ

ವಿಶ್ವ ಆರೋಗ್ಯ ಸಂಸ್ಥೆ ವಿವಿಎಂ (ವ್ಯಾಕ್ಸಿನ್ ವಯಲ್ ಮಾನಿಟರ್-ಕಲರ್ ಬಾರ್) ಪಾರದರ್ಶಕ ವ್ಯವಸ್ಥೆ ರೂಪಿಸಿದೆ. ಇದನ್ನು ಖಾಸಗಿ ವೈದ್ಯಕೀಯ ಕ್ಷೇತ್ರ ಪಾಲಿಸಿದರೆ ಸಾಮಾನ್ಯ ಜನರು ಕೂಡ ಸತ್ವಹೀನ ಲಸಿಕೆ ಪತ್ತೆ ಮಾಡಬಹುದು. ಆದರೆ ಪೋಲಿಯೊ ಹೊರತುಪಡಿಸಿ ಇತರ ಲಸಿಕೆ ನಿರ್ವಹಣೆಗೆ ಯಾವ ಮಾನದಂಡವೂ ಪಾಲನೆಯಾಗುತ್ತಿಲ್ಲ. ಹಾಗಾಗಿ ಲಸಿಕೆಗಳು ಸತ್ವಯುತವಾಗಿವೆಯೇ? ಅಥವಾ ಅವುಗಳ ನಿರ್ವಹಣೆಯಲ್ಲಿ ಏರುಪೇರಾಗಿ ಸತ್ತು ಹೋಗಿವೆಯೇ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ. ವಿವಿಎಂ ವ್ಯವಸ್ಥೆಯನ್ನು ಖಾಸಗಿ ವೈದ್ಯಕೀಯ ಕ್ಷೇತ್ರ ದಲ್ಲಿ ಹಲವರು ಪಾಲಿಸುತ್ತಿಲ್ಲ. ಮಾನದಂಡ ಪರಿಶೀಲಿಸಿದರೆ ಮಾರುಕಟ್ಟೆಯಲ್ಲಿರುವ ಶೇ.80ಕ್ಕೂ ಹೆಚ್ಚು ಲಸಿಕೆಗಳು ಬಳಕೆಗೆ ಯೋಗ್ಯವಲ್ಲ ಎನ್ನುತ್ತಾರೆ ತಜ್ಞ ವೈದ್ಯರು.

ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಪ್ರಕಾರ ಕೆಲವು ಲಸಿಕೆಗಳನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್​ನಲ್ಲಿ ಕಾಪಾಡಬೇಕು. ಕೆಲವನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್​ವರೆಗೂ ಸಂರಕ್ಷಿಸಬೇಕು. ಸ್ವಲ್ಪ ಏರುಪೇರಾದರೂ ಲಸಿಕೆಗಳು ಸತ್ವ ಕಳೆದುಕೊಳ್ಳುತ್ತವೆ. ಆ ಲಸಿಕೆ ಮಕ್ಕಳಿಗೆ ಕೊಟ್ಟರೂ ಏನೂ ಪ್ರಯೋಜನವಾಗುವುದಿಲ್ಲ.

| ಡಾ. ಶಿವರಾಮಕೃಷ್ಣ ವೈದ್ಯ

ಸಿಬ್ಬಂದಿಗೆ ಕನಿಷ್ಠ ಜ್ಞಾನವೂ ಇಲ್ಲ

ಲಸಿಕೆ ಖರೀದಿಸುವ ಸೋಗಿನಲ್ಲಿ 50ಕ್ಕೂ ಹೆಚ್ಚು ಮೆಡಿಕಲ್ ಮಳಿಗೆಗಳಲ್ಲಿ ರಿಯಾಲಿಟಿ ಚೆಕ್ ಮಾಡಲಾಯಿತು. ಲಸಿಕೆಗಳನ್ನು ಬಹುತೇಕ 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಟ್ಟಿರುತ್ತೇವೆ ಎಂಬ ಭಯಾನಕ ಸಂಗತಿಯನ್ನು ಮಳಿಗೆ ಸಿಬ್ಬಂದಿ ಬಾಯಿಬಿಟ್ಟಿದ್ದಾರೆ. ಹಲವು ಸಿಬ್ಬಂದಿಗೆ ಲಸಿಕೆಯನ್ನು ಎಷ್ಟು ತಾಪಮಾನದಲ್ಲಿ ಸಂಗ್ರಹಿಸಿಡಬೇಕೆಂಬ ಸಂಗತಿಯೂ ಗೊತ್ತಿಲ್ಲ. ಚೀಟಿ ನೋಡಿ ಜನರಿಗೆ ಲಸಿಕೆ ನೀಡುತ್ತಿದ್ದಾರೆ. ರೆಫ್ರಿಜಿರೇಟರ್​ಗಳಿಗೆ 1 ನಿಮಿಷವೂ ವಿದ್ಯುತ್ ವ್ಯತ್ಯಯ ಆಗಬಾರದು. ರಾಜಧಾನಿಯ ಬಹುತೇಕ ಮೆಡಿಕಲ್ ಶಾಪ್​ಗಳಲ್ಲಿ ವಿದ್ಯುತ್ ಸ್ಥಗಿತಗೊಂಡರೆ, ಕೋಲ್ಡ್ ಚೈನ್ ನಿರ್ವಹಣೆ ನಡೆಯುವಂಥ ವ್ಯವಸ್ಥೆಯೇ ಇಲ್ಲ. ಕೆಲವರು 1 ಗಂಟೆ ಪವರ್ ಬ್ಯಾಕಪ್ ಹೊಂದಿದ್ದರೂ, ರಾತ್ರಿ ವಿದ್ಯುತ್ ಹೋದರೆ ವ್ಯಾಕ್ಸಿನ್​ಗಳನ್ನು ಆ ದೇವರೇ ಕಾಪಾಡಬೇಕು. ಇಂಥ ಘೊರ ಸಂಗತಿ ದಿಗ್ವಿಜಯ-ವಿಜಯವಾಣಿ ರಿಯಾಲಿಟಿ ಚೆಕ್​ನಲ್ಲಿ ಬೆಳಕಿಗೆ ಬಂದಿದೆ. ಗ್ರಾಹಕರ ಎದುರೇ ಮೆಡಿಕಲ್ ಸ್ಟೋರ್ ಸಿಬ್ಬಂದಿ 15 ನಿಮಿಷಗಳ ಕಾಲ ಲಸಿಕೆಗಳನ್ನು ಹೊರಗಿಟ್ಟ ದೃಶ್ಯಗಳೂ ನಮ್ಮ ಕ್ಯಾಮರಾದಲ್ಲಿ ಸೆರೆಯಾಗಿವೆ. ಲಸಿಕೆ ಪೂರೈಸುವ ಡೆಲಿವರಿ ಬಾಯ್ಗಳಿಗೆ ಇದರ ಅರಿವು ಎಷ್ಟರಮಟ್ಟಿಗೆ ಇರಬಹುದು ಎಂಬುದನ್ನು ಪತ್ತೆ ಮಾಡಬೇಕಾದ ಔಷಧ ನಿಯಂತ್ರಣಾಲಯದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಸತ್ವಹೀನ ಲಸಿಕೆ ಪತ್ತೆ ಮಾಡುವ ಕಾರ್ಯವಂತೂ ರಾಜ್ಯದಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ.

ಸರ್ಕಾರಿ ಆಸ್ಪತ್ರೆಗಳೇ ಸೂಕ್ತ

ಸದ್ಯದ ಸ್ಥಿತಿಯಲ್ಲಿ ಖಾಸಗಿ ಕ್ಷೇತ್ರದಲ್ಲಿ ಲಭಿಸುವ ಲಸಿಕೆಗಳಿಗಿಂತಲೂ ಸರ್ಕಾರದ ವ್ಯವಸ್ಥೆಯಲ್ಲಿ ಸಿಗುವ ಪಾರದರ್ಶಕ ಲಸಿಕೆಗಳನ್ನೇ ಮಕ್ಕಳಿಗೆ ಕೊಡಿಸುವುದು ಸೂಕ್ತ. ಖಾಸಗಿ ಕ್ಷೇತ್ರದ ಲಸಿಕೆಗಳು ಸತ್ವ ಕಳೆದುಕೊಂಡರೂ ಅದರ ಪತ್ತೆ ಅಸಾಧ್ಯ.

ಸರ್ಕಾರಿ ಆಸ್ಪತ್ರೆಗಳ ಲಸಿಕೆ

ಸರ್ಕಾರಿ ವ್ಯವಸ್ಥೆಯಲ್ಲಿ ಲಭ್ಯವಿರುವ ಪ್ರತಿ ಲಸಿಕೆಯನ್ನು ಜನರು ಪತ್ತೆ ಮಾಡಬಹುದು. 5 ಸರ್ಕಾರಿ ಆಸ್ಪತ್ರೆಗಳಿಗೆ ದಿಗ್ವಿಜಯ ಭೇಟಿ ನೀಡಿ ಪರಿಶೀಲಿಸಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆಗಳಲ್ಲಿ ಕಡ್ಡಾಯವಾಗಿ ವಿವಿಎಂ ಚಿಹ್ನೆ ಇರುತ್ತವೆ. ಸೂಚಿತ ತಾಪಮಾನದಲ್ಲಿ ಲಸಿಕೆ ಇಡುವಲ್ಲಿ ವ್ಯತ್ಯಾಸವಾದರೆ ಬಿಳಿ ಬಣ್ಣದ ಚಿಹ್ನೆ ನೀಲಿ ರೂಪಕ್ಕೆ ತಿರುಗುತ್ತದೆ. ಅಂಥ ಲಸಿಕೆಗಳನ್ನು ವೈದ್ಯರೇ ಬಿಸಾಕುತ್ತಾರೆ.