ಕೆಪಿಎಸ್‌ನಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಒತ್ತಾಯಿಸಿ ಮಾಯಕೊಂಡ ಸರ್ಕಾರಿ ಶಾಲೆ ಮುಂದೆ ಪಾಲಕರ ಪ್ರತಿಭಟನೆ

ಮಾಯಕೊಂಡ: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಿಸಿ, ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೆ ಪ್ರವೇಶಾವಕಾಶ ನೀಡಬೇಕೆಂದು ಒತ್ತಾಯಿಸಿ ಗ್ರಾಮದಲ್ಲಿ ಪಾಲಕರು ಪ್ರತಿಭಟನೆ ನಡೆಸಿದರು.

ಕಳೆದ ತಿಂಗಳು ಶಾಲೆ ದಾಖಲಾತಿ ಆಂದೋಲನ ವೇಳೆ ಶಿಕ್ಷಕರು ಹಾಗೂ ಬಿಇಒ ಮಕ್ಕಳನ್ನು ಸರ್ಕಾರದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವಂತೆ ಪಾಲಕರಲ್ಲಿ ಮನವಿ ಮಾಡಿದ್ದರು. ಹೆಸರು ನೋಂದಾಯಿಸಲು ಮಕ್ಕಳಿಗೆ ಸಿಹಿ ತಿನ್ನಿಸಿ ಶಾಲೆಗೆ ಸ್ವಾಗತಿಸಿದ್ದರು. ಎಲ್ಕೆಜಿ ಹಾಗೂ ಒಂದನೇ ತರಗತಿ ಪ್ರವೇಶಕ್ಕೆ ಒಟ್ಟು ನೂರಕ್ಕೂ ಅಧಿಕ ಅರ್ಜಿಗಳು ಬಂದಿವೆ.

ಇಲಾಖೆ ನಿರ್ದೇಶನದಂತೆ ಎಲ್‌ಕೆಜಿ ಹಾಗೂ 1ನೇ ತರಗತಿಗೆ ತಲಾ 30 ಮಕ್ಕಳ ಪ್ರವೇಶಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಉಳಿದ ಮಕ್ಕಳ ಪಾಲಕರು ಆಯ್ಕೆ ಪ್ರಕ್ರಿಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ನಮ್ಮ ಮಕ್ಕಳ ದಾಖಲಾತಿಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಸ್ಥಳಕ್ಕಾಗಮಿಸಿದ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ್, ಇಲಾಖೆ ಆದೇಶದನ್ವಯ ನಿಗದಿಪಡಿಸಿರುವಷ್ಟೇ ದಾಖಲಾತಿ ಮಾಡಿಕೊಳ್ಳಲಾಗಿದೆ. ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಲಗುವುದು ಎಂದು ತಿಳಿಸಿದರು.

ನಮ್ಮ ಮಕ್ಕಳನ್ನು ಆಂಗ್ಲ ಮಾದ್ಯಮದಲ್ಲಿ ಕಲಿಸಬೇಕೆಂಬ ಆಸೆಯಿಂದ ಅರ್ಜಿ ಪಡೆದು ಹೆಸರು ದಾಖಲಿಸಿದ್ದೆ. ಆದರೆ, ಲಾಟರಿಯಲ್ಲಿ ಆಯ್ಕೆಯಾಗಿಲ್ಲ ಎಂದು ಹೇಮಕ್ಕ, ಶಾಂತಮ್ಮ ಮತ್ತಿತರರು ಅಲವತ್ತುಕೊಂಡರು.

ಕೇವಲ 30 ಮಕ್ಕಳಿಗೆ ಅವಕಾಶ ಎಂದು ಮೊದಲೇ ತಿಳಿಸಿದ್ದರೆ ಇಷ್ಟೊಂದು ತೊಂದರೆಯಾಗುತ್ತಿರಲಿಲ್ಲ. ನಮಗೆ ನ್ಯಾಯ ಒದಗಿಸಬೇಕು ಎಂದು ಜಗದೀಶ್, ಮಂಜುನಾಥ, ಶ್ರೀನಿವಾಸ ಮತ್ತಿತರು ಒತ್ತಾಯಿಸಿದರು.

ಇಸಿಒ ಕೆ.ಜಿ. ಗೌಡ್ರು, ಮುಖ್ಯಶಿಕ್ಷಕ ಮಂಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ, ಲೋಕೇಶ್ ಇತರರಿದ್ದರು.

Leave a Reply

Your email address will not be published. Required fields are marked *