ದೊಡ್ಡಗೊಲ್ಲರಹಟ್ಟಿಗೆ ಅಧಿಕಾರಿಗಳ ಭೇಟಿ

ಪರಶುರಾಮಪುರ: ಸ್ಥಳೀಯ ದೊಡ್ಡಗೊಲ್ಲರಹಟ್ಟಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಚಳ್ಳಕೆರೆ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಅಗತ್ಯ ಮಳಿಗೆ, ಕಟ್ಟಡಗಳ ಮಾಹಿತಿ ಪಡೆದರು.

ಗೊಲ್ಲಾಳೇಶ್ವರಿದೇವಿ ಮಹಿಳಾ ಸ್ವ-ಸಹಾಯ ಸಂಘ, ಮುರಳಿಕೃಷ್ಣ ನವ ಯುವಕ ಸಂಘ, ದೀಪಿಕಾ ಮಹಿಳಾ ಮಂಡಳಿಯ ಕಟ್ಟಡ ಮತ್ತು ದಾಖಲೆ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆದರು.

ತಾಲೂಕು ಆಹಾರ ಇಲಾಖೆ ಶಿರಸ್ತೇದಾರ ಎಸ್.ರಂಗಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗೆ ಮಹಜರ್ ವರದಿ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಆಹಾರ ನಿರೀಕ್ಷಕ ವೀರಣ್ಣ ಮಾತನಾಡಿ, ನ್ಯಾಯಬೆಲೆ ಅಂಗಡಿ ಸ್ಥಾಪನೆ ಕುರಿತು ಸ್ಥಳ ವೀಕ್ಷಿಸುವ ಜತೆಗೆ ಗ್ರಾಮಸ್ಥರಿಂದ ಮಾಹಿತಿ ಪಡೆಯಲಾಗಿದೆ ಎಂದರು.

ಗ್ರಾಪಂ ಸದಸ್ಯರಾದ ಕೃಷ್ಣಪ್ಪ, ಸರೋಜಾ, ಗೊಲ್ಲಾಳೇಶ್ವರಿ ದೇವಿ ಸ್ವ-ಸಹಾಯ ಸಂಘದ ಅಧ್ಯಕ್ಷೆ ತಾಯಮ್ಮ, ಮುರಳಿಕೃಷ್ಣ ಸಂಘದ ಅಧ್ಯಕ್ಷ ತಿಮ್ಮಯ್ಯ, ದೀಪಿಕಾ ಮಹಿಳಾ ಮಂಡಳಿ ಕಾರ್ಯದರ್ಶಿ ಕವಿತಾ ಇತರರಿದ್ದರು.