ಪರಶುರಾಮಪುರ: ಸರ್ಕಾರಗಳು ರೈತರಿಗೆ ಮೊದಲು ನದಿ, ಆಣೆಕಟ್ಟು ಮತ್ತು ಜಲಾಶಯಗಳಿಂದ ನೀರು ಕಲ್ಪಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಗ್ರಹಿಸಿದರು.
ಇಲ್ಲಿನ ಮುಖ್ಯವೃತ್ತದಲ್ಲಿ ಶನಿವಾರ ವೇದಾವತಿ ನದಿ ಸಂರಕ್ಷಣಾ ವೇದಿಕೆ, ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಹೋಬಳಿ ಸೇರಿ ತಾಲೂಕಿನ ಹಲವು ಹಳ್ಳಿಗಳಿಗೆ ಜೀವನಾಡಿ ಆಗಿರುವ ವೇದಾವತಿ ನೀರಿಲ್ಲದೇ ಬರಡಾಗಿದೆ. ಕೂಡಲೇ ಜಿಲ್ಲಾಡಳಿತ ನದಿಗೆ ವಿವಿ ಸಾಗರದಿಂದ ನೀರು ಹರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಹೋರಾಟಗಾರ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಮಾತನಾಡಿ, ಸರ್ಕಾರ ವೇದಾವತಿ ನದಿಗೆ ನೀರು ಬಿಡುವ ಜತೆಗೆ ರಾಜ್ಯದಲ್ಲೇ ಅತ್ಯಂತ ಹೆಚ್ಚು ಭೌಗೋಳಿಕ ವ್ಯಾಪ್ತಿ ಹೊಂದಿರುವ ಪರಶುರಾಮಪುರವನ್ನು ತಾಲೂಕನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಕುಡಿವ ನೀರಿಗಾಗಿ ತತ್ವಾರ ಉಂಟಾದ ಹಿನ್ನೆಲೆಯಲ್ಲಿ ವಿವಿ ಸಾಗರದಿಂದ ವೇದಾವತಿ ನದಿಗೆ ನೀರನ್ನು ಹಾಯಿಸಲು ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮುಖಂಡ ಸೋಮಶೇಖರ ಮಂಡೀಮಠ, ರೈತ ಮುಖಂಡ ಜೆ.ಒ.ಚನ್ನಕೇಶವ ಮಾತನಾಡಿದರು.
ವೇದಿಕೆ ಅಧ್ಯಕ್ಷ ಡಿವಿಕೆ ಸ್ವಾಮಿ, ಶ್ರೀಕಂಠಪ್ಪ, ಜಿಪಂ ಸದಸ್ಯ ಓಬಳೇಶಣ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮದಾಸ್, ಮಾಜಿ ಅಧ್ಯಕ್ಷ ಭೂತಲಿಂಗಪ್ಪ, ಮಾತೃಶ್ರೀ ಮಂಜುನಾಥ, ಗ್ರಾಪಂ ಸದಸ್ಯರಾದ ತಿಮ್ಮಣ್ಣ, ಚೌಳೂರು ದೇವಣ್ಣ, ನಾಗರಾಜು ತಿಪ್ಪೇಸ್ವಾಮಿ, ಬಿ.ತಿಪ್ಪೇಸ್ವಾಮಿ, ಎಸ್.ತಿಪ್ಪೇಸ್ವಾಮಿ, ಮಿಲ್ಟ್ರಿ ಸಿದ್ದೇಶಣ್ಣ ಇದ್ದರು.