ಮಾದಕ ವ್ಯಸನದಿಂದ ಸಾಮಾಜಿಕ ಸಮಸ್ಯೆ

ಪರಶುರಾಮಪುರ: ಮಾದಕ ವ್ಯಸನವು ಗಂಭೀರವಾದ ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಮುಖ್ಯಶಿಕ್ಷಕ ವಿ.ನಾಗಭೂಷಣ ಎಚ್ಚರಿಸಿದರು.

ಮೀರಾಸಾಬಿಹಳ್ಳಿ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಿಕ್ಷಣ ಇಲಾಖೆ, ಮಹಿಳಾ ಸ್ವ-ಸಹಾಯ, ಪ್ರಗತಿಬಂಧು ಸಂಘಗಳ ಸಹಯೋಗದಲ್ಲಿ ಸಮೀಪದ ಜುಂಜರಗುಂಟೆ ಗ್ರಾಮದ ಹೊರವಲಯದ ಗಾದ್ರಿಪಾಲನಾಯಕ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತು ಸೇವಿಸಿದರೆ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂಬುದು ತಪ್ಪು ಕಲ್ಪನೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರಿಸರದ ಪ್ರಭಾವ, ಗೆಳೆತನದಿಂದ ಕುತೂಹಲಕ್ಕೆ ಚಟಗಳಿಗೆ ಬೀಳುತ್ತಾರೆ. ಇದು ಸಲ್ಲದು ಎಂದರು.

ಉಪನ್ಯಾಸ ನೀಡಿದ ಶಿಕ್ಷಕ ಚಿತ್ತಯ್ಯ, ಮಕ್ಕಳು ಸಮೂಹ ಮಾಧ್ಯಮಗಳ ಸೆಳೆತ ಹಾಗೂ ಕೆಟ್ಟ ಸಹವಾಸದಿಂದ ಕೆಲ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುತೂಹಲಕ್ಕೆ ದುರಭ್ಯಾಸ ಆರಂಭವಾಗುತ್ತವೆ. ಈ ಕುರಿತು ಪಾಲಕರು, ಶಿಕ್ಷಕರು ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ವಿಡಿಯೋ ಹಾಗೂ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಶಿಕ್ಷಕರು, ವಿದ್ಯಾರ್ಥಿಗಳು ಸ್ವ್ವಸ್ಥ ಸಮಾಜದ ಪ್ರತಿಜ್ಞೆ ಸ್ವೀಕರಿಸಿದರು.

ಮೀರಾಸಾಬಿಹಳ್ಳಿ ವಲಯ ಮೇಲ್ವಿಚಾರಕ ಮಂಜುನಾಥ, ಸೇವಾಪ್ರತಿನಿಧಿ ವನಿತಾ, ಮಹಾಲಿಂಗಪ್ಪ, ಶಶಿಕಲಾ, ಶಿಕ್ಷಕರಾದ ಎಸ್.ರಾಜಶೇಖರಪ್ಪ, ಎಂ.ಟಿ.ಲೋಕೇಶ, ಮಂಜುನಾಥ, ತಿಮ್ಮೇಶ್, ಭಾಗ್ಯಮ್ಮ, ಒ.ತಿಪ್ಪೇಸ್ವಾಮಿ, ಬೋರನಾಯಕ, ಶಾಲಾ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *