ಪರಶುರಾಮಪುರ: ಆಂಧ್ರ ಗಡಿಯ ಕನ್ನಡಿಗರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ದೊರಕಿಸಿಕೊಡುವ ಕೆಲಸ ಆಗಬೇಕಿದೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಆಂಧ್ರ ಗಡಿನಾಡು ಘಟಕದಿಂದ ಸಮೀಪದ ವಡ್ಡೇಪಾಳ್ಯದ ಪ್ರತ್ಯಕ್ಷ ವೀರಾಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಗಡಿನಾಡ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯರಲ್ಲಿ ಹಾಸುಹೊಕ್ಕಾಗಿರುವ ಜನಪದ ಕಲೆ, ಸಂಸ್ಕೃತಿ, ಸಾಹಿತ್ಯದ ಉಳಿವು, ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕಿದೆ. ಗಡಿ ಭಾಗಗಳ ಕನ್ನಡಿಗರಿಂದ ನಮ್ಮ ಸಂಸ್ಕೃತಿ ಉಳಿವು ಸಾಧ್ಯವಾಗಿದೆ. ಇವರಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವೀರಗಾಸೆ, ಗಾರುಡಿಗೊಂಬೆ, ಶಹನಾಯಿ ವಾದ್ಯ, ವಾಲಗ, ಕಹಳೆ, ಭಜನೆ, ಕೀಲುಕುದುರೆ, ಜನಪದ ಕುಣಿತ, ಮತ್ತಿತರ ಕಲಾತಂಡಗಳು ಕಲೆ ಪ್ರದರ್ಶಿಸಿದವು.
ಕಲಾತಂಡಗಳ ಮೆರವಣಿಗೆಗೆ ಕಲ್ಯಾಣದುರ್ಗ ಕಸಾಪ ಅಧ್ಯಕ್ಷ ಜಯದೇವಮೂರ್ತಿ ಚಾಲನೆ ನೀಡಿದರು. ವಾರ್ತಾಧಿಕಾರಿ ಧನಂಜಯ ಮಾತನಾಡಿದರು.
ಕನ್ನಡಪರ ಸಂಘಟಕರಾದ ಪ್ರಹ್ಲಾದ, ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಜಯದೇವಮೂರ್ತಿ, ಪ್ರತ್ಯಕ್ಷ ವೀರಾಂಜನೇಯಸ್ವಾಮಿ ದೇವಸ್ಥಾನ ಸಮಿತಿ ಈರಣ್ಣ, ಹನುಮಂತರಾಯ, ಹನುಮಣ್ಣ, ನಾಗರಾಜು, ಕಲಾಭಿಮಾನಿಗಳಾದ ಲಕ್ಷ್ಮೀದೇವಿ, ಚಿದಾನಂದಪ್ಪ, ಕಜಾಪ ತಾಲೂಕಾಧ್ಯಕ್ಷ ಒ.ಚಿತ್ತಯ್ಯ ಇತರರಿದ್ದರು.