ಉದ್ಯೋಗ, ರಾಜಕೀಯ ಮೀಸಲು ನೀಡಿ

ಪರಶುರಾಮಪುರ: ರಾಜ್ಯ ಸರ್ಕಾರ ಬಲಿಜ ಸಮುದಾಯಕ್ಕೆ 2ಎ ವರ್ಗದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿಗೆ ಅನುವು ಮಾಡಿಕೊಡಬೇಕು ಎಂದು ಶ್ರೀ ವೀರಾಂಜನೇಯ ಬಲಿಜ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸಮೂರ್ತಿ ಒತ್ತಾಯಿಸಿದರು.

ಶ್ರೀ ವೀರಾಂಜನೇಯ ಬಲಿಜ ಸಂಘ, ಹೋಬಳಿ ಮಟ್ಟದ ಬಲಿಜ ಒಕ್ಕೂಟ ಹಾಗೂ ಯೋಗಿನಾರಾಯಣ ಬಲಿಜ ಮಹಿಳಾ ಸಂಘದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಬಲಿಜರ ಶಿಕ್ಷಣಕ್ಕೆ 2ಎ ಮೀಸಲು ಕಲ್ಪಿಸಿದ್ದರು. ನಂತರದ ಬಂದ ಸರ್ಕಾರಗಳು ಸಮುದಾಯದ ಅಭಿವೃದ್ಧಿಗೆ ಯಾವುದೇ ವಿಶೇಷ ಯೋಜನೆ ನೀಡಿಲ್ಲ. ಈ ಸಮುದಾಯಕ್ಕೆ 3ಎ ಅಡಿ ಉದ್ಯೋಗ, ರಾಜಕೀಯ ಮೀಸಲು ನೀಡಿರುವುದು ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಲಕ್ಷ್ಮಿಕೊಲ್ಲಾಪುರದಮ್ಮ ದೇವಸ್ಥಾನ ಸಮಿತಿ ಕಾರ್ಯದರ್ಶಿ ಬಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಪೂರ್ವಜರು ಉತ್ತಮ ಕಾರ್ಯಗಳಿಂದ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರ ಮಾರ್ಗದಲ್ಲೇ ಸಾಗುವ ಮೂಲಕ ಪ್ರಗತಿ ಸಾಧಿಸೋಣ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಮಾಜದ ಹಿರಿಯರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ನಿವೃತ ಶಿಕ್ಷಕ ರಾಮದಾಸಪ್ಪ, ಬಲಿಜ ಮಹಿಳಾ ಸಂಘದ ಅಧ್ಯಕ್ಷೆ ಹಂಪಮ್ಮ, ಶಿಕ್ಷಕ ಆರ್.ಸುರೇಶ ಮಾತನಾಡಿದರು. ಶಿಕ್ಷಕರಾದ ಬಿ.ಆರ್.ಅರುಣಾ, ಸುಬ್ರಹ್ಮಣ್ಯಂ, ಗ್ರಾಪಂ ಸದಸ್ಯ ಪಿ.ರಾಕೇಶ, ನಿವೃತ ಕಂದಾಯ ಅಧಿಕಾರಿ ಬಿ.ಎಚ್.ಆಂಜನೇಯಲು, ಮುಖಂಡರಾದ ರಾಮಾಂಜಿನಪ್ಪ, ರಾಮಕೃಷ್ಣಪ್ಪ, ಬಿ.ಮೋಹನ್, ರಾಜಣ್ಣ, ಸುಧೀಂದ್ರ ಇತರರಿದ್ದರು.

Leave a Reply

Your email address will not be published. Required fields are marked *