ಪರಶುರಾಮಪುರ: ಸಮೀಪದ ದೇವರಮರಿಕುಂಟೆ ಗ್ರಾಮದಲ್ಲಿ ಮೂರು ದಿನಗಳಿಂದ ಅಹೋಬಲ ಸರಸಿಂಹಸ್ವಾಮಿ ದೇವರ ಗುಗ್ಗರಿ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶುಕ್ರವಾರ ಅಹೋಬಲ ನರಸಿಂಹಸ್ವಾಮಿ ಸಮೂಹದ ದೇವರ ಮೂರ್ತಿಗಳನ್ನು ಸನಿಹದ ವೇದಾವತಿ ನದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಗುಡಿಕಟ್ಟೆಯ ಭಕ್ತರು, ಗ್ರಾಮಸ್ಥರು, ಹನ್ನೆರೆಡು ಕೈವಾಡಸ್ತರು ಗಂಗಾಪೂಜೆ ನೆರವೇರಿಸಿದರು.
ಸೋಮನ ಮೂರ್ತಿಗಳಿಗೆ ಎಡೆ ಅರ್ಪಿಸಿ ಮಣೇವು ಪೂಜೆ ಮಾಡಿದರು. ನೆರೆದಿದ್ದ ಭಕ್ತರಿಗೂ ಗಂಗಾಪೂಜೆಯ ನಂತರ ತೀರ್ಥ-ಪ್ರಸಾದವನ್ನು ನೀಡಿದರು.
ದೇವರ ದಾಸಯ್ಯನವರು ತೆಂಗಿನಕಾಯಿ, ತಂಬಿಟ್ಟು, ಬಾಳೆಹಣ್ಣು, ತುಪ್ಪ, ಸಕ್ಕರೆಯನ್ನು ಕರೀಕಂಬಳಿಯ ಮೇಲಿಟ್ಟು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.
ಹರಕೆ ಹೊತ್ತ ಭಕ್ತರು ದಾಸಯ್ಯನವರ ಗರುಡಗಂಬದ ಬಳಿ ಬೆಲ್ಲದ ರಾಶಿಯನ್ನು ಹಾಕಿ ಪೂಜಿಸಿದರು. ಬಳಿಕ ಭಕ್ತರು ಕಾಣಿಕೆ ಹಣವನ್ನು ಹಾಕಿ ನಮಿಸಿದರು.