ಶುದ್ಧ ನೀರು ಘಟಕಗಳಲ್ಲಿ ನೀರೇ ಇಲ್ಲ

ಪರಶುರಾಮಪುರ: ನಾಲ್ಕು ಶುದ್ಧ ನೀರು ಘಟಕಗಳಿವೆ. ಆದರೆ, ನೀರೇ ಇಲ್ಲ. ಇದು ಪರಶುರಾಮಪುರ ಗ್ರಾಮದ ಪರಿಸ್ಥಿತಿ. ಪರಿಣಾಮ ಜನ ನಿತ್ಯ ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಮುಖ್ಯ ವೃತ್ತ, ಸಂತೇಪೇಟೆ, ಜಯಣ್ಣ ನಗರ, ಸರ್ಕಾರಿ ಆಸ್ಪತ್ರೆ ಬಳಿ ಘಟಕಗಳಿದ್ದರೂ ನೀರಿಲ್ಲ. ಗ್ರಾಮಸ್ಥರು ನಿತ್ಯ 4 ಕಿ.ಮೀ. ದೂರದ ಗ್ರಾಮಗಳಿಗೆ ಬೈಕ್, ಆಟೋರಿಕ್ಷಾಗಳಲ್ಲಿ ತೆರಳಿ ನೀರು ತರಲು ಪರದಾಡುವಂತಾಗಿದೆ. ಸೂಕ್ತ ನಿರ್ವಹಣೆ ಕೊರತೆಯಿಂದ ಸಮಸ್ಯೆ ಉಲ್ಬಣಿಸಿದೆ.

ಈ ಕುರಿತು ಹಲವು ಬಾರಿ ಗ್ರಾಪಂ ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದು, ಅವರು ಭೂಸೇನಾ ನಿಗಮದವರತ್ತ ಕೇಳುವಂತೆ ಹೇಳಿದ್ದಾರೆ. ಭೂಸೇನಾ ನಿಗಮದ ಅಧಿಕಾರಿಗಳು, ನಿರ್ವಹಣೆ ಜವಾಬ್ದಾರಿ ಗ್ರಾಪಂಗೆ ಸೇರಿದೆ ಎಂದು ಸಾಗ ಹಾಕುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆ ಪರಿಹಾರಕ್ಕೆ ಮುಕ್ತಿ ದೊರೆತಿಲ್ಲ ಎಂಬುದು ಗ್ರಾಮಸ್ಥರ ದೂರು.

ಗ್ರಾಮದಲ್ಲಿ ಕುಡಿವ ನೀರು ಸಿಗುತ್ತಿಲ್ಲ. ಅನಿವಾರ್ಯವಾಗಿ ದೂರದ ಊರಿಗೆ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಅಲ್ಲಿಯೂ ನೀರು ಸಿಗದೇ ವಾಪಸು ಬಂದಿದ್ದೇವೆ ಎನ್ನುತ್ತಾರೆ. ಗ್ರಾಮಸ್ಥರು.

ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿದರೆ, ಸಮಸ್ಯೆಗೆ ಪರಿಹಾರ ದೊರೆಯಲಿದೆ. ಈ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಚಿಂತನೆ ನಡೆಸಬೇಕು ಎಂಬುದು ಗ್ರಾಮಸ್ಥರ ಮನವಿ.

ಗ್ರಾಮದಲ್ಲಿ ನಾಲ್ಕು ಶುದ್ಧ ಕುಡಿವ ನೀರಿನ ಘಟಕಗಳಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ನೀರಿಗಾಗಿ ಅಕ್ಕಪಕ್ಕದ ಗ್ರಾಮಗಳಿಗೆ ಅಲೆಡಾಡುವುದು ತಪ್ಪಿಲ್ಲ. ಘಟಕಗಳಲ್ಲಿ ನಿಯಮಿತವಾಗಿ ನೀರು ದೊರೆಯುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥ ಚಿತ್ತಯ್ಯ ಆಗ್ರಹಿಸಿದ್ದಾರೆ.

ಕೆಲವು ಶುದ್ಧ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ಉಳಿದವುಗಳಲ್ಲಿ ಯಂತ್ರಗಳ ದೋಷದಿಂದ ನೀರು ದೊರೆಯುತ್ತಿಲ್ಲ. ಕೊಳವೆಬಾವಿಗೆ ರೀಬೋರ್ ಮಾಡಿಸಿ ನಾಲ್ಕೂ ಘಟಕಗಳಿಗೆ ನೀರು ಸರಬರಾಜಾಗುವಂತೆ ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದು ಪಿಡಿಒ ಟಿ.ಈರಣ್ಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *