ಪರಶುರಾಮಪುರ: ಅಕ್ಕನ ಮಗಳೊಂದಿಗೆ ಕುಮಾರ್ ವಿವಾಹ ನಿಶ್ಚಯವಾಗಿತ್ತು. ಇನ್ನೆರೆಡು ವಾರದಲ್ಲಿ ವಾರದಲ್ಲಿ ಮದುವೆ ಮುಹೂರ್ತ ನಿಗದಿಯಾಗಿತ್ತು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು. ಹಸೆಮಣೆ ಏರಬೇಕಿದ್ದ ಯುವಕ ಚಿತೆ ಏರುವಂತಾಯಿತು !
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಸಮೀಪ ವೇದಾವತಿ ನದಿಗೆ ನಿರ್ಮಿಸಿದ ಬ್ಯಾರೇಜ್ ಬಳಿ ಈಜಲು ಇಳಿದಿದ್ದ ಯುವಕ ನೀರಿನ ಸೆಳೆತಕ್ಕೆ ಸಿಕ್ಕು ಹೀಗೆ ದುರಂತ ಅಂತ್ಯ ಕಂಡಿದ್ದಾನೆ.
ಟೆಂಪೋ ಚಾಲಕನಾಗಿದ್ದ ಚೌಳೂರಿನ ನಿವಾಸಿ ಬಿ.ಕುಮಾರ (26) ಮೃತ ಯುವಕ. ಬುಧವಾರ ಬ್ಯಾರೇಜ್ ಕಂ ಬ್ರಿಡ್ಜ್ ಬಳಿ ಈಜಲು ಇಳಿದಿದ್ದಾಗ ವೇದಾವತಿ ನದಿಯಿಂದ ಹೆಚ್ಚಿನ ನೀರು ಬಂದಿದೆ. ನೀರಿನ ಸೆಳೆತಕ್ಕೆ ಸಿಲುಕಿದ್ದು, ಕೂಗಿಕೊಂಡಿದ್ದಾನೆ. ಹತ್ತಿರದಲ್ಲೇ ಇದ್ದ ಗ್ರಾಮಸ್ಥರು ರಕ್ಷಣೆಗೆ ಹಗ್ಗ ಬಿಟ್ಟರಾದರೂ ಪ್ರಯೋಜನವಾಗಲಿಲ್ಲ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಧಾವಿಸಿ ಗ್ರಾಮಸ್ಥರ ನೆರವಿನಲ್ಲಿ ಯುವಕನನ್ನು ಮೇಲೆತ್ತಿದರಾದರೂ ರಕ್ಷಣೆ ಸಾಧ್ಯವಾಗಲಿಲ್ಲ. ತಹಸೀಲ್ದಾರ್ ಎನ್.ರಘುಮೂರ್ತಿ ಸ್ಥಳಕ್ಕೆ ತೆರಳಿ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡುವುದಾಗಿ ತಿಳಿಸಿದರು.
ಅಂಗವಿಕಲ ಸಹೋದರ ಮತ್ತು ವಯೋವೃದ್ಧ ತಂದೆಯ ಪೋಷಣೆ ಹೊಣೆ ಹೊತ್ತಿದ್ದ ಯುವಕ ಕುಮಾರ್ ಸಾವಿಗೆ ಗ್ರಾಮಸ್ಥರು ಮಮ್ಮಲ ಮರುಗಿದರು.