ಪರಾರಿ-ಶಿಂಬ್ರ ಸೇತುವೆ ಬಳಕೆಗಿಲ್ಲ

ವಿಜಯವಾಣಿ ಸುದ್ದಿಜಾಲ ಉಡುಪಿ

ಸ್ವರ್ಣ ನದಿಗೆ ಅಡ್ಡವಾಗಿ ಕೊಳಲಗಿರಿ ಪರಾರಿ- ಪೆರಂಪಳ್ಳಿ ಶಿಂಬ್ರ ಸೇತುವೆ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದರೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಸೇತುವೆ ಬಳಕೆ ಮುಕ್ತವಾಗಿಲ್ಲ ಎಂದು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಸೇತುವೆ ನಿರ್ಮಿಸಲು ಹಲವು ವರ್ಷಗಳ ಬೇಡಿಕೆ ಇತ್ತು. ಸಾರ್ವಜನಿಕರ ಬೇಡಿಕೆಯಂತೆ ಲೋಕೊಪಯೋಗಿ ಇಲಾಖೆ ಮೂಲಕ 16.22 ಕೋಟಿ ರೂ. ವೆಚ್ಚದಲ್ಲಿ 2018ಕ್ಕೆ ಸೇತುವೆ ಕಾಮಗಾರಿ ಮುಗಿದಿದೆ. ಆದರೆ ಸಂಪರ್ಕ ರಸ್ತೆ ಇನ್ನು ಪೂರ್ಣಗೊಂಡಿಲ್ಲ. ಸೇತುವೆ ನಿರ್ಮಾಣದಿಂದ ಹಾವಂಜೆ, ಕೊಳಲಗಿರಿ, ಬ್ರಹ್ಮಾವರ, ಉಪ್ಪೂರು ಮೊದಲಾದ ಭಾಗದ ಜನತೆಗೆ ಮಣಿಪಾಲ ಸಂಪರ್ಕಿಸಲು ಸಾಕಷ್ಟು ಅನುಕೂಲವಾಗುತ್ತದೆ. ಮಣಿಪಾಲ ಡಿಸಿ ಕಚೇರಿ, ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆ ಬಯದುವವರಿಗೆ ಸಂಪರ್ಕ ಸುಲಭವಾಗುತ್ತದೆ.

ಸಮಸ್ಯೆ ಏನು ?: ಸೇತುವೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕೊಳಲಗಿರಿಯಲ್ಲಿ 2.23 ಎಕರೆ, ಶಿಂಬ್ರದಲ್ಲಿ 85 ಸೆಂಟ್ಸ್ ಜಾಗವನ್ನು ಭೂಸ್ವಾಧೀನಕ್ಕೆ ನಿರ್ಧರಿಸಿ ಸಂಬಂಧಪಟ್ಟವರಿಂದ ಜಾಗವನ್ನು ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆದು ದಾಖಲೆ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿ ಪರಾರಿಯಲ್ಲಿ ದುಪ್ಪಟ್ಟು ಪರಿಹಾರ, ನಗರಸಭೆ ವ್ಯಾಪ್ತಿ ಕಡಿಮೆ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗಿತ್ತು. ನಗರಸಭೆ ವ್ಯಾಪ್ತಿಯವರು ಈ ಬಗ್ಗೆ ದುಪಟ್ಟು ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಜಾಗ ಪಡೆದುಕೊಂಡವರಿಂದ ಪರಿಹಾರ ನೀಡಲು 6.22 ಕೋಟಿ ರೂ., ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಬಳಿಕ ಸ್ಥಳೀಯರಿಂದ ಭೂಮಿ ಖರೀದಿ ಮಾಡಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೊಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.

ಶಾಸಕ ರಘುಪತಿ ಭಟ್ ಎರಡು ಬಾರಿ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಾನೂನು ಪ್ರಕಾರವೇ ಭೂಸ್ವಾಧೀನ ಪರಿಹಾರ ನೀಡಲಾಗಿದ್ದು, ಈ ಸಮಸ್ಯೆ ಶೀಘ್ರ ಬಗೆಹರಿಸಲಾಗುತ್ತದೆ ಎಂದು ರಘುಪತಿ ಭಟ್ ಭರವಸೆ ನೀಡಿದ್ದಾರೆ.

ಶಿಂಬ್ರ ಸೇತುವೆ ನಿರ್ಮಾಣವಾಗಿ ವರ್ಷಗಳೇ ಕಳೆದಿವೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವ ಕಾರಣಕ್ಕೆ ಇನ್ನು ಸೇತುವೆ ಸಂಪರ್ಕ ರಸ್ತೆ ನಿರ್ಮಾಣವಾಗದೆ ಗ್ರಾಮಸ್ಥರು ತೊಂದರೆ ಪಡುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕುರಿತು ಗಮನಹರಿಸಿ ಶೀಘ್ರವೇ ಕಾಮಗಾರಿ ಪೂರ್ಣವಾಗುವಂತೆ ನೋಡಿಕೊಳ್ಳಬೇಕು. ಉತ್ತಮ ಮೂಲ ಸೌಕರ್ಯಗಳು ಸಾಧ್ಯವಾದರೆ ಶೀಂಬ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಬಹುದು.
| ಮಂಜುನಾಥ್ ಕಾಮತ್, ಉಪನ್ಯಾಸಕ

ಕೊಳಲಗಿರಿ, ನೀಲಾವರ, ಕುಂಜಾಲು, ಕುಕ್ಕೆಹಳ್ಳಿ, ಹಾವಂಜೆ ಭಾಗದ ಜನರಿಗೆ ಉಡುಪಿ, ಮಣಿಪಾಲ ಸಂಪರ್ಕಿಸಲು ಸಾಕಷ್ಟು ಅನುಕೂಲವಾಗುತ್ತದೆ. ಈ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಸ್ಥರು ಮಣಿಪಾಲ, ಉಡುಪಿಗೆ ತೆರಳುತ್ತಾರೆ. ಈ ಸೇತುವೆ ನಿರ್ಮಾಣದಿಂದ ಸಮಯ, ಖರ್ಚು ಉಳಿತಾಯವಾಗುತ್ತದೆ. ತೀರ್ಥಹಳ್ಳಿ, ಶಿವಮೊಗ್ಗ ಭಾಗದಿಂದ ಆಸ್ಪತ್ರೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಉಡುಪಿ, ಮಣಿಪಾಲಕ್ಕೆ ಬರುವವರು ಪೆರ್ಡೂರು, ಕುಕ್ಕೆಹಳ್ಳಿ ಮಾರ್ಗವಾಗಿ ಶಿಂಬ್ರ ಸೇತುವೆ ಮೂಲ ಮಣಿಪಾಲ, ಉಡುಪಿಯನ್ನು ಬಹುಬೇಗ ತಲುಪಬಹುದು. ಸೇತುವೆ ಶೀಘ್ರ ಸಾರ್ವಜನಿಕ ಮುಕ್ತವಾಗಬೇಕು.
| ಪ್ರವೀಣ್ ಪ್ರಭು, ಕುಕ್ಕೆಹಳ್ಳಿ