ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಸೌಕರ್ಯ ಪಡೆಯುತ್ತಿರುವ ಶಶಿಕಲಾ !

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಪರಪ್ಪನ ಅಗ್ರಹಾರದಲ್ಲಿ ವಿಐಪಿ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬೆಳಕಿಗೆ ಬಂದಿದೆ.

ಶಶಿಕಲಾ ಅವರಿಗೆ ಜೈಲಿನಲ್ಲಿ ಒಟ್ಟು ಐದು ಕೋಣೆಗಳನ್ನು ನೀಡಲಾಗಿದೆ. ಅಲ್ಲದೆ ಶಶಿಕಲಾಗೆ ಅಡುಗೆ ಮಾಡಿಕೊಡಲೆಂದು ಇನ್ನೊಬ್ಬ ಮಹಿಳಾ ಆರೋಪಿಯನ್ನು ನೇಮಿಸಲಾಗಿದೆ. ಜೈಲಿನಲ್ಲಿರುವ ಅವರನ್ನು ಭೇಟಿಯಾಗಲು ಅನೇಕರು ಆಗಮಿಸುತ್ತಾರೆ ಎಂದು ಆರ್​ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಶಶಿಕಲಾ ಅವರಿಗೆ ಕಾರಾಗೃಹದಲ್ಲಿ ಐಷಾರಾಮಿ ಜೀವನ ನಡೆಸಲು ಅನುವು ಮಾಡಿಕೊಡಲಾಗಿದ್ದನ್ನು 2017ರಲ್ಲಿ ಅಂದಿನ ಕಾರಾಗೃಹ ಡಿಐಜಿ ಆಗಿದ್ದ ರೂಪಾ ಬಯಲಿಗೆಳೆದಿದ್ದರು. ಅದರ ಬಗ್ಗೆ ತನಿಖೆ ನಡೆಸಲು ಸರ್ಕಾರ ಐಪಿಎಸ್​ ಅಧಿಕಾರಿ ವಿನಯ್​ಕುಮಾರ್​ ಎಂಬುವರನ್ನು ನೇಮಿಸಿತ್ತು.

ಶಶಿಕಲಾ ಅವರಿಗಾಗಿ ಐದು ಕೋಣೆಗಳನ್ನು ನೀಡಲಾಗಿದೆ. ಜೈಲಿನ ನಿಯಮಗಳನ್ನು ಉಲ್ಲಂಘಿಸಿಸಲಾಗಿದ್ದು ಶಶಿಕಲಾ ಭೇಟಿಗಾಗಿ ಅವರ ಹಲವು ಅಭಿಮಾನಿಗಳು, ಮುಖಂಡರು ಬರುತ್ತಾರೆ. ನೇರವಾಗಿ ಅವರ ಕೋಣೆಗೇ ಹೋಗಿ 3-4ತಾಸು ಮಾತುಕತೆ ನಡೆಸುತ್ತಾರೆ ಎಂದು ನರಸಿಂಹಮೂರ್ತಿ ಆರೋಪಿಸಿದ್ದಾರೆ.

ತನಿಖೆ ನಡೆಸಿದ್ದ ಅಧಿಕಾರಿ ವಿನಯ್​ಕುಮಾರ್​ ಕೂಡ ಜೈಲಿನಲ್ಲಿ ಶಶಿಕಲಾ ಅವರಿಗೆ ಐಷಾರಾಮಿ ಸೌಕರ್ಯ ನೀಡುತ್ತಿರುವುದನ್ನು ಖಚಿತಪಡಿಸಿ ವರದಿ ನೀಡಿದ್ದರು. ಜೈಲಿನಲ್ಲಿ ಇರುವ ಸಿಸಿಟಿವಿ ಫೂಟೇಜ್​, ರಿಜಿಸ್ಟರ್​ಗಳನ್ನು ಪರಿಶೀಲಿಸಲಾಗಿದ್ದು ಶಶಿಕಲಾ ಭೇಟಿಗೆ ಪ್ರತಿದಿನ ಯಾರಾದರೂ ಬರುತ್ತಿರುವ ಬಗ್ಗೆ ಗೊತ್ತಾಗಿದೆ. ಅಲ್ಲದೆ ಶಶಿಕಲಾ ಹೊರತಾಗಿ ಹಲವು ಆರೋಪಿಗಳಿಗೆ ತಿಂಗಳಿಗೆ ಎರಡು ಬಾರಿ ಹೊರಗಿನವರನ್ನು ಭೇಟಿಯಾಗಲು ಅವಕಾಶ ಮಾಡಿಕೊಡಲಾದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ವಿನಯ್​ಕುಮಾರ್ ನೇತೃತ್ವದ ತನಿಖಾ ಸಮಿತಿ ತಿಳಿಸಿತ್ತು. ಆದರೆ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆರ್​ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಮಾಹಿತಿ ಹಕ್ಕು ಕಾಯ್ದೆಯಡಿ ಇದನ್ನು ಪ್ರಶ್ನೆ ಮಾಡಿದ್ದರು. ಈಗ ಸತ್ಯ ಬೆಳಕಿಗೆ ಬಂದಿದೆ.