ಪರಂಬೋಕು ಭೂಮಿ ಪರಭಾರೆ..!

>

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ರಾಜ್ಯ ಹೆದ್ದಾರಿಗಾಗಿ ಕಾದಿರಿಸಿದ ಜಾಗ ಒತ್ತುವರಿ ಮಾಡಿಕೊಂಡು ವಾಣಿಜ್ಯ ಕಟ್ಟಡ ನಿರ್ಮಿಸಿ ಬಾಡಿಗೆ ನೀಡಿದ ಮಾಲೀಕ… ಸ್ಥಳೀಯ ಆಡಳಿತ ಪರವಾನಗಿ, ವಾಣಿಜ್ಯ ಕಟ್ಟಡಕ್ಕೆ ನಿರ್ಮಾಣಕ್ಕೆ ಬೇಕಾಗುವ ಪ್ರಾಥಮಿಕ ದಾಖಲೆಯೇ ಇಲ್ಲದೆ ಹೋಟೆಲ್, ಇನ್ನಿತರ ವಾಣಿಜ್ಯ ಮಳಿಗೆ ಕಾರ‌್ಯಾಚರಣೆ…

ಕುಂದಾಪುರ ತಾಲೂಕು ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಬಳಿ ರಸ್ತೆ ಅಭಿವೃದ್ಧಿಗಾಗಿ ಕಾದಿರಿಸಿದ ಪರಂಬೋಕು ಭೂಮಿ ಒತ್ತುವರಿ ಚಿತ್ರಣವಿದು. ಒತ್ತುವರಿಯಾಗಿರುವ ಪರಂಬೋಕು ಜಾಗದ ಸರ್ಕಾರಿ ಮೌಲ್ಯ ಕೋಟಿ ರೂ. ಲೆಕ್ಕದಲ್ಲಿದೆ.

ಜಾಗದ ದಾಖಲೆಯೇ ಇಲ್ಲದೆ ಹೆಮ್ಮಾಡಿ ಗ್ರಾಪಂ ಹೋಟೆಲ್, ಕಿರಾಣಿ ಅಂಗಡಿ, ವಾಣಿಜ್ಯ ವ್ಯವಹಾರಕ್ಕೆ ಪರವಾನಗಿ ಹೇಗೆ ಕೊಟ್ಟಿತು ಎಂದು ನೋಡಿದರೆ ಗ್ರಾಪಂ ಕೂಡ ಅಕ್ರಮದ ಬೆಂಬಲವಾಗಿ ನಿಂತಿದೆಯೇ ಎಂಬ ಅನುಮಾನ ಕಾಡುತ್ತದೆ. ಹೋಟೆಲ್ ಮುಂಗಟ್ಟುಗಳ ತ್ಯಾಜ್ಯ ವಿಲೇವಾರಿ ಪಿಟ್ ನಿರ್ಮಿಸಿ ತ್ಯಾಜ್ಯ ಬಿಡಬೇಕಾಗಿದ್ದರೂ ತ್ಯಾಜ್ಯ ಬೇಕಾಬಿಟ್ಟಿ ಬಿಟ್ಟು ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯನ್ನು ಗೊಬ್ಬರಗುಂಡಿ ಮಾಡಲಾಗಿದೆ. ಒಟ್ಟಾರೆ ಬಡವರ ಪಾಲಿಗೆ ವರವಾಗಬೇಕಿದ್ದ ಅಕ್ರಮ ಸಕ್ರಮ ಯಾರದ್ದೋ ಕಿಸೆ ತುಂಬಿಸುವ, ರಾಜಕೀಯ ಲೆಕ್ಕಾಚಾರಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.

ನಿಯಮ ಮೀರಿ ಮಾರ್ಪಾಡು
ಪರಂಬೋಕು ಜಾಗ ಒತ್ತುವರಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ಉಳ್ಳವರು ಸರ್ಕಾರದ ಮೇಲೆ ಒತ್ತಡ ಹಾಕಿ ನಿಯಮ ಬದಲಿಸುವ ಹುನ್ನಾರಕ್ಕೆ ಹುಟ್ಟಿಕೊಂಡಿದ್ದೇ 94 ಸಿಸಿ, 94 ಸಿ, 57 ಮುಂತಾದ ಮಾರ್ಪಾಡುಗಳು. ಗೋಮಾಳ, ಪರಂಬೋಕು ಸ್ಥಳಗಳು ಮೀಸಲಿಟ್ಟ ವಿಷಯಕ್ಕೆ ಬಳಸಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ನಿಯಮಗಳೆಲ್ಲವೂ ಗೌಣ.

ಹೆಮ್ಮಾಡಿ ಕೊಲ್ಲೂರು ರಾಜ್ಯ ಹೆದ್ದಾರಿ ವೃತ್ತ ಬಳಿಯಿರುವ ಜಾಗ ಪರಂಬೋಕು ಭೂಮಿಯಾಗಿದ್ದು, ರಸ್ತೆ ವಿಸ್ತರಣೆ ಅಲ್ಲದೆ ಮತ್ತಾವುದಕ್ಕೂ ಅವಕಾಶ ಇಲ್ಲ. ಪರಂಬೋಕು ಜಾಗ ಒತ್ತುವರಿ ಮಾಡಿ ಕಟ್ಟಡ ಕಟ್ಟಿ ವಾಣಿಜ್ಯ ಉದ್ದೇಶಕ್ಕಾಗಿ ನೀಡಿದ ಕಟ್ಟಡ ಮಾಲೀಕರಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ಮಾಡಲಾಗಿದೆ.
– ಮಂಜುನಾ, ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬೈಂದೂರು.

ಅಕ್ರಮ ಸಕ್ರಮದಲ್ಲಿ ಸರ್ಕಾರದ ಇಬ್ಬಗೆ ನೀತಿಗೆ ಮುಳುವಾಗುತ್ತಿದೆ. ಸರ್ಕಾರಿ ಜಾಗ, ಅರಣ್ಯ ಭೂಮಿ, ಕೆರೆ ಕೊತ್ತಲಗಳು ಅಕ್ರಮ ಮಾಡಿ ಕೂತರೆ ಸರ್ಕಾರ ಅವರ ಜಾಗಕ್ಕೆ ಪರ್ಮಿಶನ್ ನೀಡುವ ಸಲುವಾಗಿ ಬೇರೆ ಬೇರೆ ಕಾನೂನು ತಂದು ಅನುಕೂಲ ಮಾಡಿಕೊಡುತ್ತಿದೆ. ಅದೇ ಬಡವ ಜಾಗವೇ ಇಲ್ಲದೆ ಮನೆ ನಿರ್ಮಿಸಿ ವಾಸ ಮಾಡಿಕೊಂಡಿದ್ದರೆ ನೂರಾರು ಸಬೂಬು ಹೇಳಿ ಮಂಜೂರು ಮಾಡದೆ ಸತಾಯಿಸುತ್ತಾರೆ. ಮೆಸ್ಕಾಂ ಕೂಡ ಮನೆಗೆ ವಿದ್ಯುತ್ ಸಂಪರ್ಕ ಕೇಳಿದರೆ ನೂರಾರು ದಾಖಲೆ ಕೇಳುತ್ತಾರೆ. ಅದೇ ಕಟ್ಟಡ ದಾಖಲೆಯೇ ಇಲ್ಲದೆ ವಾಣಿಜ್ಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಿರುವುದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ.
-ಶ್ರೀನಿವಾಸ, ಅಕ್ರಮ ಸಕ್ರಮ ಫಲಾನುಭವಿ

Leave a Reply

Your email address will not be published. Required fields are marked *