
ಚನ್ನಪಟ್ಟಣ
ಕೆರೆಗೆ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಎ.ಸಿ. ಮಹಾಲಕ್ಷ್ಮಿ (18) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಈಕೆ ಮಂಡ್ಯ ಜಿಲ್ಲೆಯ ಮದ್ದೂರಿನ ಅಂಬರಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ರಾಮನಗರದಲ್ಲಿ ಮೊದಲನೇ ವರ್ಷದ ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಳು. ಸಂಜೆ ಸಮಯದಲ್ಲಿ ಕೆರೆಯ ದಡದಲ್ಲಿ ಮೊಬೈಲ್ ಹಾಗೂ ಐಡಿ ಕಾರ್ಡ್ ಇಟ್ಟು ಕೆರೆಗೆ ಹಾರಿದ್ದಾಳೆ. ಕೆರೆ ದಡದಲ್ಲಿ ಸಿಕ್ಕ ವಸ್ತುಗಳನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಅಕ್ಕೂರು ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಕಾರದೊಂದಿಗೆ ಮೃತದೇಹ ಶೋಧ ಕಾರ್ಯಾಚರಣೆ ಆರಂಭಿಸಿದರು. ಆದರೆ, ರಾತ್ರಿಯಾದ ಕಾರಣ ಶವಪತ್ತೆಗೆ ಅಡಚಣೆ ಉಂಟಾಗಿತ್ತು. ಶುಕ್ರವಾರ ಬೆಳಿಗ್ಗೆ ಶವಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಮೃತರ ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮೃತಳ ತಂದೆ ಚಿಕ್ಕವಿರೇಗೌಡ ಅಂಬರಹಳ್ಳಿ ಗ್ರಾಮದ ವಾಟರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತನ್ನ ಇಬ್ಬರು ಮಕ್ಕಳ ಪೈಕಿ ದೊಡ್ಡವಳಾದ ಮಹಾಲಕ್ಷ್ಮಿಯನ್ನು ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡಿಸುತ್ತಿದ್ದರು. ಮೃತಳ ಆತ್ಮಹತ್ಯೆ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ತನ್ನ ಕಾಲೇಜು ಹಾಗೂ ಗ್ರಾಮಕ್ಕೆ ಸಂಬಂಧವೇ ಇಲ್ಲದ ಕೆರೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಡಿವೈಎಸ್ಪಿ ಗಿರಿ, ಸಿಪಿಐ ಪ್ರಕಾಶ್, ಪಿಎಸ್ಐ ಆಕಾಶ್ ಸೇರಿದಂತೆ ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ಕೈಗೊಂಡಿದೆ.ಪ