ಕಾಗದ ರಹಿತ ಕ್ಯಾಂಪಸ್ ಯೋಜನೆ

ಮಂಗಳೂರು: ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳನ್ನು ಕಂಪ್ಯೂಟರೀಕೃತಗೊಳಿಸಿ, ನಾಲ್ಕು ವರ್ಷದಲ್ಲಿ ಕಾಗದ ರಹಿತ ಕಚೇರಿಯಾಗಿಸುವ ಯೋಜನೆ ಇದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

‘ವಿಜಯವಾಣಿ’ ಕೂಳೂರು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಫೋನ್‌ಇನ್-ಸಂವಾದ ಕಾರ್ಯಕ್ರಮದಲ್ಲಿ ಈ ಕುರಿತು ಮಾಹಿತಿ ನೀಡಿದರು.

ನಾಲ್ಕು ವರ್ಷದಲ್ಲಿ ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ತಂಡವಾಗಿ ಕೆಲಸ ಮಾಡುವ ಅವಶ್ಯಕತೆ ಇರುವುದರಿಂದ ಕನಸು ನನಸು ಮಾಡುವ ನಿಟ್ಟಿನಲ್ಲಿ ಎಲ್ಲ ವಿಚಾರಗಳನ್ನು ಹಂಚಿಕೊಳ್ಳುವ ಅವಶ್ಯಕತೆಯಿದೆ. ಆಡಳಿತ ವಿಭಾಗ ವಿದ್ಯಾರ್ಥಿಸ್ನೇಹಿಯಾಗಬೇಕು. ಹಣಕಾಸು ವಿಭಾಗದಲ್ಲಿ ಶಿಸ್ತು ಕಡಿಮೆಯಾಗಿದ್ದು, ಅದನ್ನು ಮತ್ತೆ ಎಚ್ಚರಿಸುವ ಕೆಲಸವಾಗಬೇಕು ಎಂದರು.
ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಹಾಯಕ ಪ್ರಾಧ್ಯಾಪಕರ ಜತೆಗೆ ಸಂದರ್ಶಕ ಪ್ರಾಧ್ಯಾಪಕರ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು. ಜತೆಗೆ ಇಂಡಸ್ಟ್ರಿ-ಇನ್‌ಸ್ಟಿಟ್ಯೂಟ್ ಇಂಟರ‌್ಯಾಕ್ಷನ್ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಜ್ಞಾನ ಹೆಚ್ಚಿಸಬೇಕಿದೆ. ಅಂಕ ಅಥವಾ ರ‌್ಯಾಂಕ್ ಮಾತ್ರ ಮುಖ್ಯ ಅಲ್ಲ. ವಿದ್ಯಾರ್ಥಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ, ಆ ಕ್ಷೇತ್ರದ ಸರಿಯಾದ ಜ್ಞಾನ ಸಿಗುವ ನಿಟ್ಟಿನಲ್ಲಿ ಕೌಶಲಾಭಿವೃದ್ಧಿಯನ್ನು ತರಗತಿ ಮಟ್ಟದಲ್ಲೇ ಸೇರಿಸುವ ಉದ್ದೇಶವಿದೆ. ಇಂಜಿನಿಯರಿಂಗ್ ವಿಭಾಗಕ್ಕೆ ಕಾರ್ಯಪಾಲಕ ಇಂಜಿನಿಯರ್ ನೇಮಕ, ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಯೋಜನೆಯಡಿ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಡಿಇಡಿ ಪಠ್ಯ ವ್ಯವಸ್ಥೆ: ಹೊಸದಾಗಿ ಆರಂಭಗೊಂಡಿರುವ ದೂರಶಿಕ್ಷಣ ಡಿಇಡಿ ಕೋರ್ಸ್‌ನ ಪಠ್ಯ ಪುಸ್ತಕಗಳನ್ನು ಪೂರೈಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪ್ರೊ.ಯಡಪಡಿತ್ತಾಯ ಭರವಸೆ ನೀಡಿದರು. ಈ ಸಂಬಂಧ ಮುಂದಿನ ವಾರ ಸಭೆ ನಡೆಸಲಿದ್ದು, ಕಠಿಣ ಸೂಚನೆ ನೀಡುವುದಾಗಿ ತಿಳಿಸಿದರು.

ಫುಯೆಲ್ ಆಡಿಟ್: ಮೊದಲ ಬಾರಿಗೆ ವಾಹನಗಳ ಇಂಧನಗಳ ಅಡಿಟ್, ಲಾಗ್ ಬುಕ್ ನಿರ್ವಹಣೆ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗುವುದು. ಯಾವುದೇ ರೀತಿಯಲ್ಲೂ ಭ್ರಷ್ಟಾಚಾರ ನಡೆಯಬಾರದು ಎಂಬುದು ನನ್ನ ಉದ್ದೇಶ. ಚಾಲಕರ ನೇಮಕಾತಿ ಮಾಡುವಾಗಲೂ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ಹಳೇ ವಾಹನಗಳನ್ನು ಆರ್‌ಟಿಒ ಮೂಲಕ ತಪಾಸಣೆ ನಡೆಸಿ, ಬಳಕೆಗೆ ಅಯೋಗ್ಯವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹೊಸ ವಾಹನಗಳ ಖರೀದಿ ಬದಲು ಹೊರಗುತ್ತಿಗೆ ಮೂಲಕ ಚಾಲಕನ ಸಮೇತ ವಾಹನ ಪಡೆಯುವ ಯೋಜನೆ ಇದೆ ಎಂದು ಪ್ರೊ.ಯಡಪಡಿತ್ತಾಯ ತಿಳಿಸಿದರು.

ವಿವಿಗೆ ಭದ್ರತೆ ಹೆಚ್ಚಳ: ದಾಖಲೆ ಪ್ರಕಾರ ವಿವಿ 353 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ಇತ್ತೀಚೆಗೆ ನಡೆದ ಸರ್ವೇಯೊಂದರಲ್ಲಿ ಇದು ಕಡಿಮೆಯಾಗಿ 346.92 ಎಕರೆಗೆ ಇಳಿದ್ದು, ಕೆಲವು ಎಕರೆ ಒತ್ತುವರಿಯಾಗಿದೆ. ಇದನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿವೆ. ಭದ್ರತಾ ದೃಷ್ಟಿಯಿಂದ ಕ್ಯಾಂಪಸ್ ಒಳಗೆ ಹಾದು ಹೋಗುವ ಪಿಡಬ್ಲೂೃಡಿ ರಸ್ತೆಯನ್ನು ಹೊರಗೆ ಮಾಡಲು ಆದ್ಯತೆ ನೀಡಲಾಗುವುದು. ಇದರಿಂದ ಖಾಸಗಿ ವಾಹನಗಳು ಕ್ಯಾಂಪಸ್ ಒಳ ಪ್ರವೇಶಿಸದಂತೆ ತಡೆಯಬಹುದು. ಜತೆಗೆ ಗ್ರೀನ್ ಕ್ಯಾಂಪಸ್‌ಗಾಗಿ ಬಗ್ಗೀಸ್ ಮತ್ತು ಸೈಕಲ್ ವ್ಯವಸ್ಥೆ ಮಾಡುವುದರಿಂದ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗುತ್ತದೆ. ನಾಲ್ಕು ದಿಕ್ಕುಗಳಲ್ಲಿಯೂ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗುವುದು ಎನ್ನುವುದು ಯಡಪಡಿತ್ತಾಯರ ಮಾತು.

ಐದು ಹಳ್ಳಿಗಳ ದತ್ತು: ವಿವಿಗೆ ಹೊಂದಿಕೊಂಡಂತಿರುವ ಐದು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಐದು ಹಳ್ಳಿಗಳನ್ನು ದತ್ತು ಪಡೆದು, ಮೂರು ಹಂತದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ. ಆರಂಭಿಕ ಹಂತದಲ್ಲಿ ಎಂಎಸ್‌ಡಬ್ಲೂೃ, ಎಂಬಿಎ ವಿದ್ಯಾರ್ಥಿಗಳ ಮೂಲಕ ಸರ್ವೇ ನಡೆಸಿ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಕಲೆ ಹಾಕಲಾಗುವುದು. ಎರಡನೇ ಹಂತದಲ್ಲಿ ಸರ್ಕಾರಿ ಯೋಜನೆಗಳ ಅರಿವು, ಫಲಾನುಭವಿಗಳಿಗೆ ಯೋಜನೆಗಳು ತಲುಪುವಂತೆ ಮಾಡುವುದು. ಮೂರನೇ ಹಂತದಲ್ಲಿ ಸಂಪನ್ಮೂಲ ಕ್ರೋಡೀಕರಣ ಸಮರ್ಪಕವಾಗಿ ನಡೆದರೆ ಹಲವು ಕಾರ್ಯಕ್ರಮ ಜಾರಿಗೊಳಿಸಿ, ಒಂದು ಹಳ್ಳಿಯನ್ನು ಮಾದರಿಯನ್ನಾಗಿಸಲಾಗುವುದು ಎಂದರು ಕುಲಪತಿಗಳು. ಬೇಸಿಗೆಯಲ್ಲಿ ಶೌಚಗೃಹದ ನೀರನ್ನು ಸಂಸ್ಕರಿಸಿ ಹೂದೋಟಗಳಿಗೆ ಬಳಸಿ ಸ್ಥಳೀಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದೆ. 5 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಫಟಕ ಸ್ಥಾಪಿಸಲಾಗುತ್ತದೆ ಎಂದರು.

ವಿದ್ಯೆ-ಬುದ್ಧಿ ಜತೆಯಾಗಿ ಸಾಗಿಸಲು ಯೋಜನೆ: ಮನೆಯಲ್ಲಿ ಹೆತ್ತವರೂ ಮಕ್ಕಳನ್ನು ಏನು ಮಾಡುತ್ತಿದ್ದಾರೆ ಎಂದು ನೋಡಿಕೊಳ್ಳಬೇಕು. ಅವರ ಚಲನವಲನಗಳ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳು ಹೊರಗಡೆಯ ಪರಿಸರದ ಪ್ರಭಾವದಿಂದ ಬದಲಾಗುತ್ತಾರೆ, ಇದನ್ನು ಗಮನಿಸಬೇಕು. ಈ ನಿಟ್ಟಿನಲ್ಲಿ ಕಾಲೇಜುಗಳೂ ಸೂಕ್ತ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಲಾಗುವುದು. ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಈಗಾಗಲೇ ಜಾರಿಯಲ್ಲಿದ್ದು, ಇದನ್ನು ಕಡ್ಡಾಯಗೊಳಿಸಲಾಗುವುದು ಎಂದರು.

Leave a Reply

Your email address will not be published. Required fields are marked *