ಕಾಂಗರೂಗಳ ಕಂಗೆಡಿಸಿದ ರಿಷಭ್

ಸಿಡ್ನಿ: ಮೊದಲ ದಿನವೇ ಚೇತೇಶ್ವರ ಪೂಜಾರ ಅವರ ಮಾಸ್ಟರ್ ಕ್ಲಾಸ್ ಆಟಕ್ಕೆ ಸುಸ್ತಾಗಿದ್ದ ಆಸ್ಟ್ರೇಲಿಯಾ ತಂಡ, ಸಿಡ್ನಿ ಟೆಸ್ಟ್​ನ 2ನೇ ದಿನವೂ ‘ಬೇಬಿ ಸಿಟ್ಟರ್’ ರಿಷಭ್ ಪಂತ್ ಸಿಡಿಸಿದ ದಾಖಲೆಯ ಶತಕಕ್ಕೆ ಹೈರಾಣಾಯಿತು. ಟೆಸ್ಟ್ ಸರಣಿಯೊಂದರಲ್ಲಿ 4ನೇ ಗರಿಷ್ಠ ಎಸೆತಗಳನ್ನು ಎದುರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಯೊಂದಿಗೆ ದ್ವಿಶತಕ ವಂಚಿತರಾದ ಚೇತೇಶ್ವರ ಪೂಜಾರ (193 ರನ್, 373 ಎಸೆತ, 22 ಬೌಂಡರಿ) ಹಾಗೂ ದಿನಪೂರ್ತಿ ಅಬ್ಬರಿಸಿದ ಯುವ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್(159*ರನ್, 189 ಎಸೆತ, 15 ಬೌಂಡರಿ, 1 ಸಿಕ್ಸರ್ ) ಅಮೋಘ ಇನಿಂಗ್ಸ್ ನೆರವಿನಿಂದ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ. ಇದರೊಂದಿಗೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ವಿರಾಟ್ ಕೊಹ್ಲಿ ಪಡೆ, ಆಸೀಸ್ ನೆಲದಲ್ಲಿ ಚೊಚ್ಚಲ ಬಾರಿ ಟೆಸ್ಟ್ ಸರಣಿ ಗೆಲುವಿನ ಕನಸು ನನಸಾಗಿಸಲು ಕ್ಷಣಗಣನೆ ಆರಂಭಿಸಿದೆ.

ಶುಕ್ರವಾರ 4 ವಿಕೆಟ್​ಗೆ 304 ರನ್​ಗಳಿಂದ ದಿನದಾಟ ಮುಂದುವರಿಸಿದ ಭಾರತ, ಪೂಜಾರ ಅವರ ಮುಂದುವರಿದ ಸೊಗಸಾದ ಆಟದ ಜತೆಗೆ ಪಂತ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ (81ರನ್, 114ಎಸೆತ, 7ಬೌಂಡರಿ, 1ಸಿಕ್ಸರ್) 7ನೇ ವಿಕೆಟ್​ಗೆ ಸೇರಿಸಿದ ದಾಖಲೆಯ 204 ರನ್​ಗಳ ಜತೆಯಾಟದಿಂದ 7 ವಿಕೆಟ್​ಗೆ 622 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರತಿಯಾಗಿ ಎಚ್ಚರಿಕೆಯ ಆರಂಭ ಕಂಡ ಆಸೀಸ್, ದಿನದಂತ್ಯದ ವೇಳೆಗೆ ರಿಷಭ್ ಪಂತ್ ನೀಡಿದ ಒಂದು ಜೀವದಾನದ ನೆರವಿನಿಂದ ವಿಕೆಟ್ ನಷ್ಟವಿಲ್ಲದೆ 24 ರನ್ ಪೇರಿಸಿದ್ದು, 598 ರನ್​ಗಳ ಹಿನ್ನಡೆಯಲ್ಲಿದೆ. ಮಾರ್ಕಸ್ ಹ್ಯಾರಿಸ್(19*) ಮತ್ತು ಉಸ್ಮಾನ್ ಖವಾಜ(5*) ಕ್ರೀಸಿನಲ್ಲಿದ್ದು, ಫಾಲೋಆನ್ ತಪ್ಪಿಸಿಕೊಳ್ಳಲು ಆಸೀಸ್ ಇನ್ನೂ 399 ರನ್ ಗಳಿಸಬೇಕಾಗಿದೆ.

ಪೂಜಾರ, ಪಂತ್, ಜಡೇಜಾಗೆ ಆಸೀಸ್ ಸುಸ್ತು: ಮೊದಲ ದಿನವೇ ಸುಸ್ತಾಗಿದ್ದ ಆಸೀಸ್ ಬೌಲರ್​ಗಳನ್ನು 2ನೇ ದಿನದ ಆರಂಭದಲ್ಲಿ ಪಂತ್, ಅನುಭವಿ ಪೂಜಾರ ಜತೆ ಮತ್ತು ದಿನದ ಕೊನೇ ಅವಧಿಯವರೆಗೆ ಜಡೇಜಾ ಜತೆ ಸೇರಿ ಮನಸೋ ಇಚ್ಛೆ ದಂಡಿಸಿದರು. ಬ್ಯಾಟಿಂಗ್ ಸ್ನೇಹಿಯಾಗಿದ್ದ ಪಿಚ್ ಲಾಭವನ್ನು ಪೂರ್ಣವಾಗಿ ಬಳಸಿಕೊಂಡ ಭಾರತ 2ನೇ ದಿನ 77.2 ಓವರ್​ಗಳ ಕಾಲ ಬ್ಯಾಟಿಂಗ್ ಮಾಡಿ ಮತ್ತೆ 318 ರನ್ ಸೇರಿಸಿತು. 39 ರನ್​ಗಳಿಂದ ಆಟ ಮುಂದುವರಿಸಿದ ಹನುಮ ವಿಹಾರಿ 42 ರನ್ ಗಳಿಸಿದಾಗ, ಲ್ಯಾನ್ ಎಸೆತದಲ್ಲಿ ಅನುಮಾನಾಸ್ಪದ ಕ್ಯಾಚ್​ಗೆ ಔಟಾದರು. ನಂತರ ಪಂತ್ ಜತೆ 6ನೇ ವಿಕೆಟ್​ಗೆ 89 ರನ್ ಜತೆಯಾಟವಾಡಿದ ಪೂಜಾರ, ದ್ವಿಶತಕದ ಸನಿಹ ತಲುಪಿದಾಗ ಕೆಟ್ಟ ಹೊಡೆತದಲ್ಲಿ ನಥಾನ್ ಲ್ಯಾನ್​ಗೆ ರಿಟರ್ನ್ ಕ್ಯಾಚ್ ನೀಡಿದರು. ನಂತರ ಎಡಗೈ ಜೋಡಿಯಾದ ಪಂತ್-ಜಡೇಜಾರ ಜುಗಲ್​ಬಂದಿ ಶುರುವಾಯಿತು. ಆಸೀಸ್ ಬೌಲರ್​ಗಳ ತೆಕ್ಕೆಯಲ್ಲಿದ್ದ ಯಾವ ಅಸ್ತ್ರಗಳಿಗೂ ಬಗ್ಗದ ಈ ಜೋಡಿ ನಿರಾಯಾಸವಾಗಿ ತಂಡದ ಮೊತ್ತವನ್ನು 600ರ ಗಡಿ ದಾಟಿಸಿತು. ಪಂತ್ ಸ್ಪಿನ್ನರ್ ಮಾರ್ನಸ್ ಲಬುಶೇನ್​ಗೆ ಬೌಂಡರಿ ಬಾರಿಸಿ ವೃತ್ತಿಜೀವನದ 2ನೇ ಶತಕ ಪೂರೈಸಿದರು. ಕಳೆದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿದ್ದ ಪ್ಯಾಟ್ ಕಮ್ಮಿನ್ಸ್​ರ ಒಂದೇ ಓವರ್​ನಲ್ಲಿ 4 ಬೌಂಡರಿ ಕೂಡ ಸಿಡಿಸಿ ಅಬ್ಬರಿಸಿದರು. ಅವರೊಂದಿಗೆ ಜಡೇಜಾ ಟೆಸ್ಟ್ ಕ್ರಿಕೆಟ್​ನ 10ನೇ ಅರ್ಧಶತಕ ಪೂರೈಸಿ ಶತಕದತ್ತ ಸಾಗಿದ್ದರು. ಆದರೆ ಲ್ಯಾನ್​ಗೆ ಬೌಲ್ಡ್ ಆಗುತ್ತಿದ್ದಂತೆ ಕೊಹ್ಲಿ ಡಿಕ್ಲೇರ್ ಘೋಷಿಸಿದರು.

ಸ್ವಿಂಗ್ ಆಗದಿರುವ ಪಿಚ್​ನಲ್ಲಿ ಚೇತೇಶ್ವರ ಪೂಜಾರ ಅವರನ್ನು ಔಟ್ ಮಾಡುವುದೇ ದೊಡ್ಡ ಸವಾಲು. ಅವರಿಗೆ ವಿವಿಧ ರೀತಿಯ ಬೌಲಿಂಗ್ ಮಾಡಿದರೂ ಯಶಸ್ಸು ಸಿಗಲಿಲ್ಲ. ರಿಷಭ್ ಪಂತ್ ಅತ್ಯುತ್ತಮವಾಗಿ ಆಡಿದರು. ನಮ್ಮ ಇನಿಂಗ್ಸ್ ಆರಂಭ ಸಕಾರಾತ್ಮಕವಾಗಿದೆ.

| ಟಿಮ್ ಪೇನ್, ಆಸೀಸ್ ನಾಯಕ

3–  ಚೇತೇಶ್ವರ ಪೂಜಾರ ಟೆಸ್ಟ್ ಸರಣಿಯೊಂದರಲ್ಲಿ ಭಾರತ ಪರ 2ನೇ ಹಾಗೂ ಒಟ್ಟಾರೆ 4ನೇ ಗರಿಷ್ಠ ಎಸೆತ (1,258) ಎದುರಿಸಿದ ಸಾಧಕ ಎನಿಸಿಕೊಂಡರು. ವೆಸ್ಟ್ ಇಂಡೀಸ್​ನ ರಿಚಿ ರಿಚರ್ಡ್​ಸನ್ 1988-89ರಲ್ಲಿ ಭಾರತದ ವಿರುದ್ಧ 1,358 ಎಸೆತಗಳನ್ನು ಎದುರಿ ಸಿದ್ದು ವಿಶ್ವದಾಖಲೆ. ದ್ರಾವಿಡ್ ಇಂಗ್ಲೆಂಡ್ ಎದುರು 2002ರಲ್ಲಿ 1,336 ಎಸೆತ ಎದುರಿಸಿದ್ದರು.

ಪಂತ್ ಶತಕಕ್ಕೆ ಜಡೇಜಾ ನೆರವು!

ಕಳೆದ ವಿಂಡೀಸ್ ಎದುರಿನ ತವರಿನ ಟೆಸ್ಟ್ ಸರಣಿಯಲ್ಲಿ 2 ಬಾರಿ 92 ರನ್​ಗೆ ಔಟಾಗಿ ನರ್ವಸ್ ನೈಂಟಿ ನಿರಾಸೆ ಕಂಡಿದ್ದ ರಿಷಭ್ ಪಂತ್, ಈ ಸಲ ಅದರಿಂದ ಪಾರಾಗಲು ಜತೆಗಿದ್ದ ರವೀಂದ್ರ ಜಡೇಜಾರ ಆಟ ನೆರವಾಯಿತು ಎಂದಿದ್ದಾರೆ. ನಾನು ಇದುವರೆಗೆ ಆಡಿದ್ದ ಹೆಚ್ಚಿನ ಇನಿಂಗ್ಸ್​ಗಳಲ್ಲಿ ಬಾಲಂಗೋಚಿಗಳ ಜತೆ ಆಡಿದ್ದೆ. ಈ ಸಲವೂ 90ರಲ್ಲಿದ್ದಾಗ ಸ್ವಲ್ಪ ನರ್ವಸ್ ಆಗಿದ್ದೆ. ಆದರೆ ಈ ಸಲ ರವೀಂದ್ರ ಜಡೇಜಾ ಸರಾಗವಾಗಿ ಬ್ಯಾಟಿಂಗ್ ಮಾಡಿದ್ದು, ನನಗೆ ಶತಕ ಬಾರಿಸಲು ಧೈರ್ಯ ನೀಡಿತು ಎಂದು ಪಂತ್ ಹೇಳಿದರು. ಬ್ಯಾಟಿಂಗ್ ವಿಚಾರದಲ್ಲಿ ನನಗೆ ತಂಡ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಸಾಧ್ಯವಾದಷ್ಟು ಹೆಚ್ಚು ಕಾಲ ಬ್ಯಾಟಿಂಗ್ ಮಾಡುವುದು ತಂಡದ ಯೋಜನೆಯಾಗಿತ್ತು. ಈ ಶತಕವೂ ನನಗೆ ವಿಶೇಷ. ಆಟಗಾರನಾಗಿ ತಂಡಕ್ಕೆ ಅಗತ್ಯವಿರುವ ರನ್ ಪೇರಿಸುವುದು ನನ್ನ ಗುರಿ ಎಂದು ಪಂತ್ ಹರ್ಷ ವ್ಯಕ್ತಪಡಿಸಿದರು.

ಅಮ್ಮನ ಜನ್ಮದಿನಕ್ಕೆ ಶತಕದ ಗಿಫ್ಟ್!

ರಿಷಭ್ ಪಂತ್ ಅಮ್ಮನ ಹುಟ್ಟು ಹಬ್ಬದಂದೇ ದಾಖಲೆಯ ಶತಕ ಸಿಡಿಸಿ ಉಡುಗೊರೆ ನೀಡಿರುವುದು ವಿಶೇಷ. ಪಂತ್ ದಿನದಾಟ ಮುಗಿದೊಡನೆ, ತಾಯಿ ಸರೋಜ್ ಪಂತ್ ಜತೆಗಿರುವ ಚಿತ್ರವನ್ನು ಟ್ವಿಟರ್​ನಲ್ಲಿ ಪ್ರಕಟಿಸಿ, ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ‘ಯಾವುದೇ ಸಂದರ್ಭದಲ್ಲೂ ನನ್ನ ಜತೆಗಿರುವುದು ನೀನೊಬ್ಬಳೆ. ನನ್ನೆಲ್ಲಾ ಒತ್ತಡವನ್ನು ಕಡಿಮೆಗೊಳಿಸುವ ನಿನಗೆ ಹುಟ್ಟುಹಬ್ಬದ ಶುಭಾಶಯ’ ಎಂದು ಪಂತ್ ಟ್ವೀಟ್ ಮಾಡಿದ್ದಾರೆ.