ಪಂಕಜ್, ವರ್ಷಾಗೆ ರಾಷ್ಟ್ರೀಯ ಸ್ನೂಕರ್ ಗರಿ

ಇಂದೋರ್: ಅಗ್ರ ಕ್ಯೂ ಆಟಗಾರ ಪಂಕಜ್ ಆಡ್ವಾಣಿ ರಾಷ್ಟ್ರೀಯ ಸೀನಿಯರ್ ಸ್ನೂಕರ್ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಇದು ಅವರು ಗೆದ್ದ 9ನೇ ರಾಷ್ಟ್ರೀಯ ಸ್ನೂಕರ್ ಕಿರೀಟ ಮತ್ತು 21ನೇ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಒಟ್ಟಾರೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವರು ಜಯಿಸಿದ 32ನೇ ಸ್ವರ್ಣ ಪದಕ ಇದಾಗಿದೆ.

ಬೆಂಗಳೂರಿನ ಆಟಗಾರ ಪಂಕಜ್ ಫೈನಲ್​ನಲ್ಲಿ ಯುವ ಆಟಗಾರ ಲಕ್ಷ್ಮಣ್ ರಾವತ್ ವಿರುದ್ಧ 6-0 ಫ್ರೇಮ್ಳಿಂದ ಏಕಪಕ್ಷೀಯ ಗೆಲುವು ದಾಖಲಿಸಿದರು. 33 ವರ್ಷದ ಪಂಕಜ್ ಅನುಭವಿ ಆಟದೆದುರು ರಾವತ್ ನಿರುತ್ತರವಾದರು. ಜೂನಿಯರ್ ಆಟಗಾರನಾಗಿ 11 ರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿದ್ದ ಪಂಕಜ್, ಸೀನಿಯರ್ ಮಟ್ಟದಲ್ಲಿ 9 ಬಿಲಿಯರ್ಡ್ಸ್ ಮತ್ತು 3 ಸಿಕ್ಸ್-ರೆಡ್ ಸ್ನೂಕರ್ ಪ್ರಶಸ್ತಿಗಳನ್ನೂ ಜಯಿಸಿದ್ದಾರೆ.

ಮಹಿಳಾ ವಿಭಾಗದಲ್ಲಿ ವರ್ಷಾಗೆ ಪ್ರಶಸ್ತಿ: ಮಹಿಳಾ ವಿಭಾಗದಲ್ಲೂ ಬೆಂಗಳೂರಿನ ವರ್ಷಾ ಸಂಜೀವ್ ಪ್ರಶಸ್ತಿ ಜಯಿಸಿದರು. ಅವರು ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ ಅರಾಂಟಾ ಸ್ಯಾಂಚಿಸ್ ವಿರುದ್ಧ 4-2ರಿಂದ ಗೆಲುವು ದಾಖಲಿಸಿದರು. ಟೂರ್ನಿಯುದ್ದಕ್ಕೂ ಅಮೋಘ ನಿರ್ವಹಣೆ ತೋರಿದ ವರ್ಷಾ, ಕ್ವಾರ್ಟರ್​ಫೈನಲ್​ನಲ್ಲಿ ಅನುಭವಿ ಆಮೀ ಕಾಮಿನಿ ಮತ್ತು ಸೆಮಿಫೈನಲ್​ನಲ್ಲಿ ರಾಜ್ಯದವರೇ ಆದ ವಿದ್ಯಾ ಪಿಳ್ಳೆ ೖಗೆ ಸೋಲುಣಿಸಿದ್ದರು. -ಪಿಟಿಐ